ರಾಜಾಜಿನಗರ ಸರಣಿ ಹತ್ಯೆ: ಬದುಕುಳಿದ 11 ವರ್ಷದ ಬಾಲಕನಿಗೆ ನಿಮ್ಹಾನ್ಸ್ ತಜ್ಞರಿಂದ ಕೌನ್ಸೆಲಿಂಗ್

ಈ ಭೀಕರ ಘಟನೆಗಳಿಂದ ಬಾಲಕ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಾಧ್ಯತೆಯಿದೆ. ಹೀಗಾಗಿ, ಪೊಲೀಸ್ ವಿಚಾರಣೆ ಆರಂಭಿಸುವ ಮುನ್ನವೇ ಆತನಿಗೆ ತಜ್ಞರ ನೆರವು ನೀಡಲು ನಿರ್ಧರಿಸಲಾಗಿದೆ.
Rajajinagar serial killings
ರಾಜಾಜಿನಗರ ಸರಣಿ ಕೊಲೆ ಪ್ರಕರಣ
Updated on: 

ಬೆಂಗಳೂರು: ರಾಜಾಜಿನಗರದಲ್ಲಿ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯಿಂದ ಕೊಲೆ ಯತ್ನಕ್ಕೆ ಒಳಗಾಗಿ ಬದುಕುಳಿದಿರುವ 11 ವರ್ಷದ ಬಾಲಕನಿಗೆ ನಿಮ್ಹಾನ್ಸ್ ತಜ್ಞರು ಮಾನಸಿಕ ಸಮಾಲೋಚನೆ (ಕೌನ್ಸೆಲಿಂಗ್) ನೀಡಲಿದ್ದಾರೆ.

ಬಾಲಕನ ತಂದೆ-ತಾಯಿಯನ್ನೂ ಹತ್ಯೆ ಮಾಡಿರುವ ಆತನ ಚಿಕ್ಕಪ್ಪ, ಇಬ್ಬರ ಮೃತದೇಹಗಳನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಬಾಲಕನನ್ನು ನೂರಾರು ಕಿಲೋಮೀಟರ್ ದೂರ ಕಾರಿನಲ್ಲಿ ಕರೆದೊಯ್ದಿದ್ದ ಎನ್ನಲಾಗಿದೆ.

ಈ ಭೀಕರ ಘಟನೆಗಳಿಂದ ಬಾಲಕ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಾಧ್ಯತೆಯಿದೆ. ಹೀಗಾಗಿ, ಪೊಲೀಸ್ ವಿಚಾರಣೆ ಆರಂಭಿಸುವ ಮುನ್ನವೇ ಆತನಿಗೆ ತಜ್ಞರ ನೆರವು ನೀಡಲು ನಿರ್ಧರಿಸಲಾಗಿದೆ.

ನಿಮ್ಹಾನ್ಸ್‌ನ ಹಿರಿಯ ಮಾನಸಿಕ ಆರೋಗ್ಯ ತಜ್ಞರೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಬಾಲಕನಿಗೆ ತಜ್ಞ ವೈದ್ಯರಿಂದ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.

Rajajinagar serial killings
"ನನಗೆ ತೃಪ್ತಿಯಾಗಿದೆ, ಈಗ ನೆಮ್ಮದಿಯಾಗಿದ್ದೀನಿ": ಒಂದೇ ಕುಟುಂಬದ 7 ಮಂದಿ ಹತ್ಯೆ ಕೇಸ್ ಆರೋಪಿಯ ಹೇಳಿಕೆ

ಬಾಲಕನ ಮಾನಸಿಕ ಸ್ಥಿತಿಯ ಬಗ್ಗೆ ಕಳವಳ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಅಧಿಕಾರಿಗಳು ಬಾಲಕನ ಕುಟುಂಬದ ಸಂಬಂಧಿಕರನ್ನು ಸಂಪರ್ಕಿಸಿ ನೆರವು ನೀಡುವ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಕುಟುಂಬದ ಮೃತರ ಅಂತ್ಯಕ್ರಿಯೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಬಾಲಕನನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬಾಲಕನ ಹೆಸರು, ವಿಳಾಸ ಸೇರಿದಂತೆ ಆತನ ಗುರುತನ್ನು ಬಹಿರಂಗಪಡಿಸುವುದು ಬಾಲ ನ್ಯಾಯ ಕಾಯ್ದೆ (Juvenile Justice Act) ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಆತನ ಗುರುತಿನ ಗೌಪ್ಯತೆ ಕಾಪಾಡುವುದು ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಮ್ಹಾನ್ಸ್ ತಜ್ಞರು ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸುವ ಅನುಭವ ಹೊಂದಿದ್ದಾರೆ. ಅವರು ಬಾಲಕನ ಮಾನಸಿಕ ಸ್ಥಿತಿ, ಅನುಭವಿಸಿರುವ ಆಘಾತ ಮತ್ತು ಆತನಿಗೆ ಅಗತ್ಯವಿರುವ ಆರೈಕೆಯ ಬಗ್ಗೆ ಸೂಕ್ತ ಮೌಲ್ಯಮಾಪನ ಮಾಡಲಿದ್ದಾರೆ.

Rajajinagar serial killings
ಬೆಂಗಳೂರು: ಕೆಮಿಕಲ್ ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು!

ಪೊಲೀಸ್ ವಿಚಾರಣೆಯಿಂದ ಮತ್ತಷ್ಟು ಆಘಾತ ಸಾಧ್ಯತೆ

ಈ ಪ್ರಕರಣದಲ್ಲಿ ಬಾಲಕ ಬದುಕುಳಿದ ಸಂತ್ರಸ್ತನೂ ಹೌದು, ಪ್ರಮುಖ ಸಾಕ್ಷಿಯೂ ಆಗಿದ್ದಾನೆ. ಹೀಗಾಗಿ ಪೊಲೀಸರು ಆತನನ್ನು ವಿಚಾರಣೆ ನಡೆಸಬೇಕಾಗುತ್ತದೆ. ಆರೋಪಿಯು ಬಾಲಕನನ್ನು ಎಲ್ಲೆಲ್ಲಿಗೆ ಕರೆದೊಯ್ದಿದ್ದ ಎಂಬ ಮಾಹಿತಿ ಸೇರಿದಂತೆ ಘಟನೆಯ ದಿನ ನಡೆದಿದ್ದ ಸಂಗತಿಗಳನ್ನು ವಿಚಾರಣೆಯಲ್ಲಿ ತಿಳಿದುಕೊಳ್ಳಬೇಕಿದೆ. ಈ ವಿವರಗಳು ಆರೋಪಪಟ್ಟಿ ಸಲ್ಲಿಸಲು ಪೊಲೀಸರಿಗೆ ಸಹಕಾರಿಯಾಗಲಿವೆ.

ಆದರೆ, ಈಗಾಗಲೇ ಭೀಕರ ಘಟನೆಗಳಿಂದ ಮಾನಸಿಕ ಆಘಾತಕ್ಕೆ ಒಳಗಾಗಿರುವ ಬಾಲಕನನ್ನು ಪದೇಪದೆ ವಿಚಾರಿಸುವುದರಿಂದ ಮತ್ತಷ್ಟು ತೊಂದರೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ನಿಮ್ಹಾನ್ಸ್‌ನ ಮನೋವೈದ್ಯಕೀಯ ಸಾಮಾಜಿಕ ಕಾರ್ಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕಿ ಡಾ. ಕವಿತಾ ಜಂಗಮ್ ಈ ಬಗ್ಗೆ ಮಾತನಾಡಿ, "ಈ ಬಾಲಕನಿಗೆ ಮುಂದಿನ ದಿನಗಳು ಬಹಳ ಕಷ್ಟಕರವಾಗಿರಲಿವೆ. ಆತನಲ್ಲಿ ಆತಂಕ ಹೆಚ್ಚಾಗುವ ಸಾಧ್ಯತೆಯಿದೆ. ದೀರ್ಘಕಾಲದವರೆಗೆ ಮಾನಸಿಕ ಸಮಾಲೋಚನೆಯ ಅಗತ್ಯವೂ ಉಂಟಾಗಬಹುದು" ಎಂದು ಹೇಳಿದ್ದಾರೆ.

Rajajinagar serial killings
'ಅತ್ಯಂತ ಅಮಾನವೀಯ, 70 ವರ್ಷ ಬದುಕಬೇಕಿದ್ದ ಆನೆ 30ನೇ ವಯಸ್ಸಿಗೇ ಸಾವು': ದೇಗುಲದ ಆನೆಗಳ ಸಂಕಷ್ಟದ ಬಗ್ಗೆ ನಟಿ ರಮ್ಯಾ ಕಿಡಿ; Video

ವಿಚಾರಣೆಗೂ ಮುನ್ನ ಮಾನಸಿಕ ಸಿದ್ಧತೆ ಅಗತ್ಯ

ಪೊಲೀಸ್ ವಿಚಾರಣೆ ಮತ್ತು ನ್ಯಾಯಾಲಯದ ಪ್ರಕ್ರಿಯೆ ಆರಂಭಿಸುವ ಮುನ್ನವೇ ತಜ್ಞರಿಂದ ಮಾನಸಿಕ ಮೌಲ್ಯಮಾಪನ ನಡೆಯಬೇಕು. ಬಾಲಕನ ಮಾನಸಿಕ ಆರೋಗ್ಯ ಹೇಗಿದೆ, ಘಟನೆ ಕುರಿತು ಹೇಳಿಕೆ ನೀಡುವ ಸ್ಥಿತಿಯಲ್ಲಿದ್ದಾನೆಯೇ, ಆತನಲ್ಲಿ ಭಾವನಾತ್ಮಕ ಅಥವಾ ನಡವಳಿಕೆಯ ಬದಲಾವಣೆಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಡಾ. ಕವಿತಾ ತಿಳಿಸಿದ್ದಾರೆ.

ತಜ್ಞರು ಬಾಲಕನ ಸ್ಥಿತಿಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿ ಪೊಲೀಸರಿಗೆ ನೀಡಲಿದ್ದಾರೆ. ಈ ವರದಿಯ ಆಧಾರದ ಮೇಲೆ ಪೊಲೀಸರು ಮುಂದಿನ ವಿಚಾರಣೆ ಮತ್ತು ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಬಹುದು. ಇದಲ್ಲದೆ, ಮಕ್ಕಳ ಕಲ್ಯಾಣ ಸಮಿತಿಯು (CWC) ಬಾಲಕನ ನೆರವಿಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಕೌನ್ಸೆಲರ್‌ಗಳನ್ನು ನೇಮಿಸಬೇಕು. ಇದರಿಂದ ಸೂಕ್ಷ್ಮ ಪ್ರಕರಣದಲ್ಲಿ ಪೊಲೀಸರು ಬಾಲಕನನ್ನು ಪದೇಪದೆ ವಿಚಾರಣೆ ನಡೆಸುವುದನ್ನು ತಪ್ಪಿಸಬಹುದು. ಆತನ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಡಾ. ಕವಿತಾ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X