ಬಿಹಾರದಿಂದ ಸಾರಾಯಿ ಹುಡುಕಿಕೊಂಡು ಬರುವ 'ಕುಡುಕರಿಗೆ' ಪ್ರವೇಶ ನಿಷೇಧಿಸಿದ ಜಾರ್ಖಂಡ್ ಗ್ರಾಮ!
ಗಡಿ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುವುದು ಕೇವಲ ರಾಷ್ಟ್ರಗಳು ಮಾತ್ರವಲ್ಲ. ಜಾರ್ಖಂಡ್‌ನ ಹಳ್ಳಿಯೊಂದು ಅಪರಿಚಿತ ಮತ್ತು ಅನಗತ್ಯವಾಗಿ ಹೊರಗಿನವರು ತಮ್ಮ ಪ್ರದೇಶಕ್ಕೆ ನುಸುಳುವುದನ್ನು ತಡೆಯಲು ಮುಂದಾಗಿದೆ. ಹೀಗಾಗಿ ಗ್ರಾಮಕ್ಕಿರುವ ಎಲ್ಲಾ ದಾರಿಗಳಲ್ಲಿ ಕಾವಲಿಗೆ ಇಟ್ಟಿದೆ.
Published: 16th September 2022 05:01 PM | Last Updated: 16th September 2022 06:25 PM | A+A A-

ಬಿಹಾರದಿಂದ ಬರುವ ಕುಡುಕರಿಗೆ ಗ್ರಾಮಕ್ಕೆ ಪ್ರವೇಶ ನಿಷಿದ್ಧ
ರಾಂಚಿ: ಗಡಿ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುವುದು ಕೇವಲ ರಾಷ್ಟ್ರಗಳು ಮಾತ್ರವಲ್ಲ. ಜಾರ್ಖಂಡ್‌ನ ಹಳ್ಳಿಯೊಂದು ಅಪರಿಚಿತ ಮತ್ತು ಅನಗತ್ಯವಾಗಿ ಹೊರಗಿನವರು ತಮ್ಮ ಪ್ರದೇಶಕ್ಕೆ ನುಸುಳುವುದನ್ನು ತಡೆಯಲು ಮುಂದಾಗಿದೆ. ಹೀಗಾಗಿ ಗ್ರಾಮಕ್ಕಿರುವ ಎಲ್ಲಾ ದಾರಿಗಳಲ್ಲಿ ಕಾವಲು ಮಾಡುತ್ತಿದೆ.
ಬಿಹಾರದ ಅಂಚಿಗೆ ಹೊಂದಿಕೊಂಡಿರುವ ಕೋಡರ್ಮಾ ಜಿಲ್ಲೆಯ ಕಟೈಯ್ಯ ಪಂಚಾಯತ್ ವ್ಯಾಪ್ತಿಯ ಅಸ್ನಾ ಕೋಣಿ ಗ್ರಾಮದಲ್ಲಿ ಸಾಮಾನ್ಯವಾಗಿ ಕೋಲು, ದೊಣ್ಣೆ ಹಿಡಿದಿರುವ ಬಹುತೇಕ ಮಹಿಳೆಯರು ಹೆಚ್ಚಾಗಿ ಕಾವಲಿಗಿರುತ್ತಾರೆ. ನೆರೆಯ ರಾಜ್ಯದಿಂದ ಮದ್ಯವನ್ನು ಹುಡುಕಿಕೊಂಡು ಬರುವವರಿಂದ ನಿರಂತರ ತೊಂದರೆ ಅನುಭವಿಸಿದ ನಂತರ ಮತ್ತು ಈ ಪ್ರದೇಶದಲ್ಲಿ ಗದ್ದಲ ಸೃಷ್ಟಿಯಾದ ನಂತರ ಗ್ರಾಮಸ್ಥರು ಈ ಕ್ರಮಕ್ಕೆ ಮುಂದಾಗಿದ್ದಾರೆ.
'ಬಿಹಾರದಿಂದ ನೂರಾರು ಜನರು ಮದ್ಯ ಸೇವಿಸಲು ನಮ್ಮ ಗ್ರಾಮವನ್ನು ಪ್ರವೇಶಿಸುವುದರಿಂದ ಈ ಗ್ರಾಮದಲ್ಲಿ ವಾಗ್ವಾದಗಳು ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳಗಳು ನಿತ್ಯ ಉಂಟಾಗುತ್ತಿವೆ. ಆದ್ದರಿಂದ ನಾವು ಪಂಚಾಯಿತಿಯನ್ನು ಕರೆದು ಇಲ್ಲಿ ಮದ್ಯವನ್ನು ತೆಗೆದುಕೊಂಡು ಹೋಗಲು ಯಾರನ್ನೂ ಗ್ರಾಮಕ್ಕೆ ಪ್ರವೇಶಿಸದಂತೆ ಮಾಡಲು ನಿರ್ಧರಿಸಿದ್ದೇವೆ. ಇಂತಹ ಘಟನೆಗಳಿಂದ ಮಹಿಳೆಯರು ಹೆಚ್ಚು ಬಾಧಿತರಾಗಿರುವುದರಿಂದ, ಅವರು ಉಪಕ್ರಮವನ್ನು ಬೆಂಬಲಿಸಲು ತಕ್ಷಣವೇ ಒಪ್ಪಿಕೊಂಡರು' ಎಂದು ಸ್ಥಳೀಯ ರೈತ ತುನ್ನು ರಾಜವಂಶಿ ಹೇಳಿದರು.
ಸದ್ಯಕ್ಕೆ ಸಮಸ್ಯೆ ಬಗೆಹರಿದಿದೆ ಎಂದು 45 ವರ್ಷದ ದುಲ್ರಿ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ. 'ಹೊರಗಿನ ಯಾರಾದರೂ ಹಳ್ಳಿಯ ಕಡೆಗೆ ಬರುವುದನ್ನು ನಾವು ನೋಡಿದಾಗಲೆಲ್ಲಾ; ಇನ್ನು ಮುಂದೆ ಇಲ್ಲಿ ಮದ್ಯ ಸಿಗುವುದಿಲ್ಲ ಎಂದು ಹೇಳಿ ನಾವು ಅವರನ್ನು ನಿಲ್ಲಿಸುತ್ತೇವೆ. ಇದರಿಂದಾಗಿ ನಾವೀಗ ಶಾಂತಿಯುತವಾಗಿ ಬದುಕುತ್ತಿದ್ದೇವೆ. ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ನಾವು ಇಲ್ಲಿ ಎಚ್ಚರವಾಗಿರಬೇಕಾದ ಅತ್ಯಂತ ನಿರ್ಣಾಯಕ ಸಮಯ ಎಂದಿದ್ದಾರೆ.
ಇದನ್ನೂ ಓದಿ: ಪತ್ರಕರ್ತ ಪಾತ್ರಧಾರಿ ವಿದ್ಯಾರ್ಥಿಯಿಂದ ತನ್ನ ಶಾಲೆಯ ಅವ್ಯವಸ್ಥೆ ವಿಡಿಯೋ ವೈರಲ್; ಶಿಕ್ಷಕರ ಬೆದರಿಕೆ; ಸಚಿವರ ನೆರವಿನ ಭರವಸೆ!
ಗ್ರಾಮವು ಹಿಂದೆ ಯಾವಾಗಲೂ ಮದ್ಯವನ್ನು ಖರೀದಿಸಲು ಬರುವ ಜನರಿಂದ ಕಿಕ್ಕಿರಿದಿತ್ತು. ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿದ ನಂತರ ಈ ಸಮಸ್ಯೆ ಪ್ರಾರಂಭವಾದರೂ, ಕಾಲಕ್ರಮೇಣ ಪರಿಸ್ಥಿತಿ ಹದಗೆಟ್ಟಿತು. ಹೀಗಾಗಿ ಗ್ರಾಮಕ್ಕೆ ಪ್ರವೇಶಿಸುವ ಎಲ್ಲಾ ದಾರಿಗಳಲ್ಲೂ ಕಾವಲು ಕಾಯುವ ನಿರ್ಧಾರವನ್ನು ಒಂದು ವಾರದ ಹಿಂದೆ ತೆಗೆದುಕೊಳ್ಳಲಾಗಿದೆ.
'ಗ್ರಾಮಸ್ಥರು ಸರ್ವಾನುಮತದಿಂದ ಈ ನಿರ್ಧಾರವನ್ನು ತೆಗೆದುಕೊಂಡರು. ಗ್ರಾಮಸ್ಥರ ಹಲವಾರು ಗುಂಪುಗಳು, ಹೆಚ್ಚಾಗಿ ಮಹಿಳೆಯರು ಈ ಪ್ರದೇಶಗಳಲ್ಲಿ ಕಣ್ಗಾವಲು ಇಡಲು ಗ್ರಾಮದ ಸುತ್ತಲೂ ತಿರುಗುತ್ತಾರೆ' ಎಂದು ಸತ್ಗವಾನ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಉತ್ತಮ್ ಬೈದ್ಯ ಹೇಳಿದ್ದಾರೆ.
'ಹಳ್ಳಿಯ ಮಹಿಳೆಯರು ಮದ್ಯ ಮಾರಾಟದಲ್ಲಿ ತೊಡಗಿರುವ ಗ್ರಾಮಸ್ಥರ ವಿರುದ್ಧವೂ ಕ್ರಮಕೈಗೊಂಡಿದ್ದಾರೆ. ಗ್ರಾಮಕ್ಕೆ ಮದ್ಯವನ್ನು ಸಾಗಿಸುವ ಯಾರಾದರೂ ಕಂಡಾಗ ಅವರು ಅದನ್ನು ನಾಶಪಡಿಸುತ್ತಾರೆ. ಹೀಗಾಗಿ ಮದ್ಯ ಮಾರಾಟ ನಿಲ್ಲಿಸಲಾಗಿದೆ. ಅವರು ಪೊಲೀಸ್ ಬೆಂಬಲವನ್ನು ಕೂಡ ಪಡೆಯುತ್ತಿದ್ದಾರೆ. ಸ್ಥಳೀಯ ಎನ್‌ಜಿಒ ಕೂಡ ಬೆಂಬಲ ಸೂಚಿಸಿದೆ' ಎಂದು ಅವರು ಹೇಳಿದರು.
ಇದನ್ನೂ ಓದಿ: ಜಾರ್ಖಂಡ್: ಮಕ್ಕಳು ಶಾಲೆ ತಲುಪಲು ಕ್ರೌಡ್ ಫಂಡಿಂಗ್ ನಿಂದ ಸೇತುವೆ ಕಟ್ಟಿದ ಗ್ರಾಮಸ್ಥರು
'ಮದ್ಯ ಮಾರಾಟದಲ್ಲಿ ತೊಡಗಿರುವವರನ್ನು ಗ್ರಾಮಸ್ಥರು ಸಾಮಾಜಿಕವಾಗಿ ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ. ಇದು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿದೆ ಎಂದು ರಾಷ್ಟ್ರೀಯ ಜಾರ್ಖಂಡ್ ಸೇವಾ ಸಂಸ್ಥಾನದ ಕಾರ್ಯದರ್ಶಿ ಮನೋಜ್ ಡಾಂಗಿ ಹೇಳಿದ್ದಾರೆ.
ಗ್ರಾಮಸ್ಥರು ಕೈಗೊಂಡಿರುವ ಈ ಕ್ರಮವನ್ನು ಬೆಂಬಲಿಸಲು ಪೊಲೀಸರು ಕೂಡ ಹಲವಾರು ಸಾರಾಯಿ ಅಂಗಡಿಗಳನ್ನು ನಾಶಪಡಿಸಿದ್ದಾರೆ.