ದಕ್ಷಿಣದ ಹೀರೋಗಳನ್ನು ಗೌರವಿಸುವ ಮೂಲಕ ಭಾರತೀಯ ಸೇನೆಯ 75 ವರ್ಷಗಳ ಸಂಭ್ರಮಾಚರಣೆ: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸೇನಾ ದಿನಾಚರಣೆ

ಭಾರತ ಜನವರಿ 15, 2023ರಂದು 75ನೇ ಸೇನಾ ದಿನಾಚರಣೆಯನ್ನು ಆಚರಿಸುತ್ತದೆ. 1949ರ ಈ ದಿನದಂದು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಸಾಮಾನ್ಯವಾಗಿ ಪ್ರತಿವರ್ಷವೂ ದೆಹಲಿಯಲ್ಲಿ ಆಯೋಜಿಸಲಾಗುವ ಸೇನಾ ದಿನಾಚರಣೆಯ ಪೆರೇಡ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ.
Updated on

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ ಜನವರಿ 15, 2023ರಂದು 75ನೇ ಸೇನಾ ದಿನಾಚರಣೆಯನ್ನು ಆಚರಿಸುತ್ತದೆ. 1949ರ ಈ ದಿನದಂದು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಸಾಮಾನ್ಯವಾಗಿ ಪ್ರತಿವರ್ಷವೂ ದೆಹಲಿಯಲ್ಲಿ ಆಯೋಜಿಸಲಾಗುವ ಸೇನಾ ದಿನಾಚರಣೆಯ ಪೆರೇಡ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ.

ಕೇಂದ್ರ ಸರ್ಕಾರ ಪ್ರಮುಖ ದಿನಗಳನ್ನು ರಾಜಧಾನಿಯ ಹೊರಗೆ, ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಬೇಕು ಎಂದು ನಿರ್ಧಾರ ಕೈಗೊಂಡಿರುವುದರಿಂದ ಈ ವರ್ಷ ಸೇನಾ ದಿನಾಚರಣೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆ ಮೂಲಕ ಹೆಚ್ಚಿನ ನಾಗರಿಕರನ್ನು, ವಿಶೇಷವಾಗಿ ಯುವಕರನ್ನು ಭಾಗವಹಿಸುವಂತೆ ಆಕರ್ಷಿಸಲು ಸಾಧ್ಯವಾಗುತ್ತದೆ.

ದಕ್ಷಿಣ ಭಾರತದ ತ್ಯಾಗಗಳಿಗೆ ಗೌರವ: ದಕ್ಷಿಣ ಕಮಾಂಡಿನಲ್ಲಿ ಸೇನಾ ದಿನಾಚರಣೆ
ಭಾರತೀಯ ಸೇನೆ ಸೇನಾ ದಿನಾಚರಣೆಯನ್ನು ದಕ್ಷಿಣ ಕಮಾಂಡಿನ ಪ್ರದೇಶಕ್ಕೆ ತರುತ್ತಿರುವುದರಿಂದ, ನಾಗರಿಕರಿಗೆ ಹೆಮ್ಮೆ, ಕೃತಜ್ಞತೆ ಮತ್ತು ಗೌರವಗಳಿಗೆ ಸಾಕ್ಷಿಯಾಗುವ ಅವಕಾಶ ಸಿಗುತ್ತಿದೆ. 1895ರಲ್ಲಿ ಸ್ಥಾಪಿಸಲಾದ ದಕ್ಷಿಣ ಕಮಾಂಡಿನ ಮುಖ್ಯ ಕಚೇರಿ ಪುಣೆಯಲ್ಲಿದ್ದು, ಇದು ಜೋಧ್‌ಪುರ ಮತ್ತು ಭೋಪಾಲ್‌ನಲ್ಲಿ ಎರಡು ಕಾರ್ಪ್ಸ್‌ಗಳನ್ನು ಹೊಂದಿದೆ. 11 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಸೇರಿ, ದೇಶದ ಒಟ್ಟು 41% ಭೂ ಪ್ರದೇಶ ದಕ್ಷಿಣ ಕಮಾಂಡ್ ಅಡಿ ಬರುತ್ತದೆ.

ಈ ವರ್ಷದ ಸೇನಾ ದಿನಾಚರಣೆ ದಕ್ಷಿಣ ಭಾರತೀಯರ ತ್ಯಾಗ, ಶೌರ್ಯ ಮತ್ತು ಸೇವೆಗಳನ್ನು ಗುರುತಿಸುವ ಮತ್ತು ಕರ್ನಾಟಕದಲ್ಲಿ ಜನಿಸಿದ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರನ್ನು ಗೌರವಿಸುವ ಸರಿಯಾದ ಮಾರ್ಗವಾಗಿದೆ. ಪೆರೇಡ್‌ನಲ್ಲಿ ಮಿಲಿಟರಿ ಹಾರ್ಡ್‌ವೇರ್, ಕಾಂಟಿಂಜೆಂಟ್, ಹಾಗೂ ಕದನಗಳ ಪ್ರದರ್ಶನವಾಗಲಿದ್ದು, ಅದರೊಡನೆ ಶೌರ್ಯ ಪುರಸ್ಕಾರಗಳಾದ ಸೇನಾ ಮೆಡಲ್‌ಗಳ ಪ್ರದಾನ ನಡೆಯಲಿದೆ.

ಈ ದಿನ ಬ್ರಿಟಿಷರಿಂದ ಸೇನೆಯ ಅಧಿಕಾರ ಭಾರತಕ್ಕೆ ಹಸ್ತಾಂತರವಾಗಿದ್ದು, ಭಾರತದ ಸೇವೆಗೆ ತ್ಯಾಗ, ಬಲಿದಾನಗೈದ ಸೈನಿಕರ ನೆನಪುಗಳನ್ನು ಮೂಡಿಸುತ್ತದೆ. ಈ ಪೆರೇಡಿನಲ್ಲಿ ಎಂಟು ಚಲಿಸುವ ತಂಡಗಳಿರಲಿದ್ದು, ಅದರಲ್ಲಿ ಆರ್ಮಿ ಸರ್ವಿಸ್ ಕಾರ್ಪ್ಸ್‌ನ ಅಶ್ವದಳ ಹಾಗೂ ರೆಜಿಮೆಂಟಲ್ ಬ್ರಾಸ್ ಬ್ಯಾಂಡಿನ ಒಂದು ಮಿಲಿಟರಿ ಬ್ಯಾಂಡ್ ಸಹ ಇರಲಿದೆ. ಧ್ರುವ್ ಮತ್ತು ರುದ್ರ ಹೆಲಿಕಾಪ್ಟರ್‌ಗಳ ಫ್ಲೈ ಪಾಸ್ಟ್ ಹಾರಾಟವೂ ನಡೆಯಲಿದೆ.

ಈ ವರ್ಷದ ಪೆರೇಡ್ ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮಗಳನ್ನು ರಾಷ್ಟ್ರ ರಾಜಧಾನಿಯ ಹೊರಗೆ ನಡೆಸುವ ಯೋಜನೆಯ ಭಾಗವಾಗಿದೆ. ಆ ಮೂಲಕ ದೇಶದ ವಿವಿಧ ಭಾಗಗಳ ಜನರಲ್ಲಿ ಸೇನೆಯ ಕುರಿತು ಜಾಗೃತಿ ಮತ್ತು ಯುವಕರಲ್ಲಿ ಸೇನೆಯೆಡೆಗೆ ಆಸಕ್ತಿ ಮೂಡಿಸುವ ಉದ್ದೇಶ ಹಮ್ಮಿಕೊಳ್ಳಲಾಗಿದೆ. ಭಾರತೀಯ ವಾಯುಪಡೆಯ ದಿನಾಚರಣೆಯನ್ನು 2022ರಲ್ಲಿ ಚಂಡೀಗಢದಲ್ಲಿ ಆಯೋಜಿಸಲಾಯಿತು. ಸೇನಾ ದಿನಾಚರಣೆಯನ್ನು ಚೀಫ್ ಆಫ್ ಆರ್ಮಿ ಸ್ಟಾಫ್ ಮದ್ರಾಸ್ ಇಂಜಿನಿಯರ್ ಸೆಂಟರ್ ಯುದ್ಧ ಸ್ಮಾರಕದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಆರಂಭಿಸಲಾಗುತ್ತದೆ. ಅವರು ಬಳಿಕ ಪೆರೇಡ್ ವೀಕ್ಷಿಸಿ, ಶೌರ್ಯ ಪುರಸ್ಕಾರಗಳನ್ನು ವಿತರಿಸುತ್ತಾರೆ.

ಪ್ರಥಮ ಭಾರತೀಯ ಕಮಾಂಡರ್ ಇನ್ ಚೀಫ್ ಕಾರ್ಯಪ್ಪನವರ ಜೀವನ ಮತ್ತು ಕೊಡುಗೆ
ಕಾರ್ಯಪ್ಪನವರು 1899ರಲ್ಲಿ ಕರ್ನಾಟಕದ ಕೊಡಗಿನಲ್ಲಿ ಜನಿಸಿದರು. ಅವರ ತಂದೆ ಮಾದಪ್ಪ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಸ್ಯಾಮ್ ಮಾಣಿಕ್ ಶಾ ಅವರೊಡನೆ ಐದು ಸ್ಟಾರ್‌ಗಳ ಫೀಲ್ಡ್ ಮಾರ್ಷಲ್ ಹುದ್ದೆಗೆ ನೇಮಕಗೊಂಡರು. ಅವರು ಭಾರತದ ಪ್ರಥಮ ಸೇನಾ ಮಹಾದಂಡನಾಯಕರಾಗಿ ನೇಮಕಗೊಳ್ಳುವ ಮತ್ತು ಫೈವ್ ಸ್ಟಾರ್ ಜನರಲ್ ಆಗಿರುವುದನ್ನು ಹೊರತುಪಡಿಸಿ, ಅವರು ಭಾರತೀಯ ಸೇನೆ ಆರಂಭಗೊಂಡ ಅವಧಿಯಲ್ಲಿ ಸೇರ್ಪಡೆಗೊಂಡಿದ್ದವರಲ್ಲಿ ಒಬ್ಬರಾಗಿದ್ದರು.

1947ರ ಭಾರತ ಪಾಕ್ ಯುದ್ಧದಲ್ಲಿ ಕಾರ್ಯಪ್ಪನವರು ಭಾರತದ ಪಶ್ಚಿಮ ಪಡೆಗಳನ್ನು ಮುನ್ನಡೆಸಿದರು. ಅವರು ಕಾರ್ಗಿಲ್ ಪ್ರಾಂತ್ಯವನ್ನು ಮರುವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದೊಂದು ಮಹತ್ತರ ಸಾಧನೆಯಾಗಿತ್ತು.

ಅವರಿಗೆ ಗೌರವಾರ್ಥವಾಗಿ "ಆರ್ಡರ್ ಆಪ್ ದ ಕಮಾಂಡರ್ ಇನ್ ಚೀಫ್ ಆಫ್ ದ ಲೀಜನ್ ಆಫ್ ಮೆರಿಟ್ ನೀಡಲಾಯಿತು. 1993ನೇ ಇಸವಿಯಲ್ಲಿ, ತನ್ನ 94ನೇ ವಯಸ್ಸಿನಲ್ಲಿ ಕಾರ್ಯಪ್ಪನವರು ಬೆಂಗಳೂರಿನಲ್ಲಿ ವಿಧಿವಶರಾದರು. ಶಿಸ್ತಿನ ವ್ಯಕ್ತಿಯಾಗಿದ್ದ ಅವರ ಕೊಡುಗೆಗಳನ್ನು ಸೇನಾ ದಿನಾಚರಣೆಯ ಮೂಲಕ ನೆನಪಿಸಿ, ಗೌರವಿಸಲಾಗುತ್ತದೆ. ಅವರು ತನ್ನ ದೇಶಭಕ್ತಿಯ ಕಾರ್ಯಗಳಿಂದ ತಲೆಮಾರುಗಳ ಕಾಲ ಆದರ್ಶವಾಗಿ ಉಳಿದಿದ್ದಾರೆ.

ಮಾರ್ಗದರ್ಶನ: ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್‌ರ ಪಾತ್ರ
ಫೀಲ್ಡ್ ಮಾರ್ಷಲ್ ಎನ್ನುವುದು ಭಾರತೀಯ ಸೇನೆಯ ಅತ್ಯಂತ ಉನ್ನತ ಹುದ್ದೆಯಾಗಿದೆ. ಫೀಲ್ಡ್ ಮಾರ್ಷಲ್ ಎನ್ನುವುದು ಭಾರತೀಯ ಸೇನೆಯಲ್ಲಿ ಅತ್ಯುನ್ನತ ಹುದ್ದೆಯಾಗಿದ್ದು, 5 ಸ್ಟಾರ್ ರಾಂಕ್ ಆಗಿದೆ. ಇದು 4 ಸ್ಟಾರ್ ಹೊಂದಿರುವ ಜನರಲ್‌ಗಿಂತಲೂ ಉನ್ನತ ರಾಂಕ್ ಆಗಿದೆ. ಓರ್ವ ಫೀಲ್ಡ್ ಮಾರ್ಷಲ್ ಯಾವತ್ತೂ ನಿವೃತ್ತರಾಗುವುದಿಲ್ಲ. ಫೀಲ್ಡ್ ಮಾರ್ಷಲ್ ಅವರ ಸಾವಿನ ತನಕವೂ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಎಂದೇ ಪರಿಗಣಿಸಲಾಗುತ್ತದೆ.

ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಎನಿಸಿಕೊಳ್ಳಲು ಕೇವಲ ಎರಡು ಮಾರ್ಗಗಳು ಮಾತ್ರವೇ ಇವೆ. ಮೊದಲನೆಯದಾಗಿ, ಯಾವುದಾದರೂ ಪ್ರಮುಖ ಯುದ್ಧದಲ್ಲಿ ಭಾರತೀಯ ಸೇನೆಯನ್ನು ಗೆಲುವಿನತ್ತ ಮುನ್ನಡೆಸಿ, ಅದರ ಗೌರವಾರ್ಥವಾಗಿ ಫೀಲ್ಡ್ ಮಾರ್ಷಲ್ ರಾಂಕ್ ಗಳಿಸುವುದು. ಭಾರತದ ಎಲ್ಲ ಫೀಲ್ಡ್ ಮಾರ್ಷಲ್‌ಗಳ ನೇಮಕವೂ ಈ ಮೂಲಕವೇ ನಡೆದಿತ್ತು. ಇನ್ನೊಂದು ಮಾರ್ಗವೆಂದರೆ ಯುದ್ಧದ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರುವುದು.

 ಉದಾಹರಣೆಗೆ ಒಂದು ಯುದ್ಧ ಆರಂಭಗೊಂಡಿದೆ ಎಂದುಕೊಳ್ಳಿ. ಆಗ ಜನರಲ್ ವಯಸ್ಸು ನಿವೃತ್ತಿಯ ಅಂಚಿಗೆ ಬಂದಿರುತ್ತದೆ. ಆ ಪರಿಸ್ಥಿತಿಯಲ್ಲಿ ಏನು ಮಾಡಲು ಸಾಧ್ಯ? ಯುದ್ಧದ ಸಂದರ್ಭದಲ್ಲಿ ಸೇನೆಯ ಅತ್ಯುನ್ನತ ಹುದ್ದೆಯಲ್ಲಿರುವವರನ್ನು ಬದಲಾಯಿಸುವುದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಹುದು. ಅದಕ್ಕಿರುವ ಪರಿಹಾರ ಎಂದರೆ, ಜನರಲ್ ಅವರಿಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವುದು. ಯಾಕೆಂದರೆ ಫೀಲ್ಡ್ ಮಾರ್ಷಲ್ ನಿವೃತ್ತರಾಗುವುದಿಲ್ಲ. ಯುದ್ಧ ಮುಗಿದ ಬಳಿಕ ಅವರು ಆಡಳಿತಾತ್ಮಕ ಜವಾಬ್ದಾರಿಗಳನ್ನು ಮುಂದಿನ ಜನರಲ್‌ಗೆ ವರ್ಗಾಯಿಸಬಹುದು. ಆದರೆ ಭಾರತಕ್ಕೆ ಈ ರೀತಿ ಓರ್ವ ಫೀಲ್ಡ್ ಮಾರ್ಷಲ್ ನೇಮಕಗೊಳಿಸುವ ಅವಶ್ಯಕತೆ ಬಂದಿಲ್ಲ.

ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಫೀಲ್ಡ್ ಮಾರ್ಷಲ್‌ಗೆ ಸರಿಸಮನಾದ ಹುದ್ದೆಗಳೆಂದರೆ ಅಡ್ಮಿರಲ್ ಆಫ್ ದ ಫ್ಲೀಟ್ ಹಾಗೂ ಮಾರ್ಷಲ್ ಆಫ್ ದ ಏರ್ ಫೋರ್ಸ್ ಆಗಿವೆ. ಭಾರತೀಯ ನೌಕಾಪಡೆಯಲ್ಲಿ ಯಾವತ್ತೂ ಅಡ್ಮಿರಲ್ ಆಫ್ ದ ಫ್ಲೀಟ್ ನೇಮಕಾತಿ ನಡೆದೇ ಇಲ್ಲ. ಆದರೆ, ಮಾರ್ಷಲ್ ಆಫ್ ದ ಏರ್ ಫೋರ್ಸ್ ಹುದ್ದೆಗೆ ಒಂದು ಬಡ್ತಿ ನೀಡಲಾಗಿದೆ. ಅರ್ಜನ್ ಸಿಂಗ್ ಅವರು ಅವರ ನೇತೃತ್ವದಲ್ಲಿ ಭಾರತೀಯ ವಾಯುಪಡೆಯ ಕಮಾಂಡ್‌ಗೆ 1965ರ ಯುದ್ಧದಲ್ಲಿ ಜಯ ತಂದು ಕೊಟ್ಟ ಪರಿಣಾಮ, ಗೌರವಪೂರ್ವಕವಾಗಿ ಬಡ್ತಿ ನೀಡಲಾಯಿತು.

ಮಾರ್ಷಲ್ ಅವರನ್ನು ಗುರುತಿಸಲು ಇರುವ ಸೂಕ್ತ ಮಾರ್ಗ ಎಂದರೆ ಅವರ ಬ್ಯಾಟನ್. ಅದನ್ನು ಮಾರ್ಷಲ್ಸ್ ಬ್ಯಾಟನ್ ಎಂದೂ ಕರೆಯಲಾಗುತ್ತದೆ. ಅದು ಒಂದು ಚಿನ್ನದ ಬಾರ್ ಆಗಿದ್ದು, ಅದರ ತಲೆ ಭಾಗದಲ್ಲಿ ಒಂದಷ್ಟು ಅಲಂಕಾರಗಳಿರುತ್ತವೆ. ಮಾರ್ಷಲ್ಸ್ ಬ್ಯಾಟನ್ ಅವರ ಹುದ್ದೆಯ ಗೌರವ ಮತ್ತು ಪ್ರತಿಷ್ಠೆಯನ್ನು ಪ್ರತಿನಿಧಿಸುತ್ತದೆ. ಇನ್ನು ಭೂಸೇನೆಯ ವಿಚಾರಕ್ಕೆ ಬಂದರೆ, ಮಾರ್ಷಲ್ಸ್ ಬ್ಯಾಟನ್ ಎನ್ನುವುದು ಬಂಗಾರದ ಬ್ಯಾಟನ್ ಆಗಿದ್ದು, ಅದರ ಅಲಂಕಾರಿಕ ಶಿರಭಾಗದಲ್ಲಿ ಅಶೋಕ ಸ್ತಂಭ ಇರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com