ಗದಗ ಮೃಗಾಲಯಕ್ಕೆ ಹಸಿರು ಹೊದಿಕೆ; ನಳನಳಿಸುತ್ತಿದೆ ಜೀವಕಳೆ!

ಮೃಗಾಲಯವು ಯಾವಾಗಲೂ ಒಂದು ರೀತಿಯ ಆಕರ್ಷಣೆ. ಒಂದೇ ಸ್ಥಳದಲ್ಲಿ ಎಲ್ಲಾ ರೀತಿಯ ಜೀವಿಗಳ ನೇರವಾಗಿ ನೋಡುವುದು ಒಂದು ರೀತಿಯ ರೋಮಾಂಚನಕಾರಿ. ಸಾಮಾನ್ಯವಾಗಿ ಪ್ರವಾಸಕ್ಕೆ ಹೋದಾಗ ಮಕ್ಕಳೊಂದಿಗೆ ಮೃಗಾಲಯ ವೀಕ್ಷಣೆ ಮಾಡುವುದುಂಟು. ಮೃಗಾಲಯ ವೀಕ್ಷಣೆ ವೇಳೆ ತಂಪಾದ ವಾತಾವರಣ ಇದ್ದರೆ ಆ ಕ್ಷಣ ಮತ್ತಷ್ಟು ಆಹ್ಲಾದ ನೀಡುತ್ತದೆ.
ಗದಗ ಮೃಗಾಲಯದ ಉಪಗ್ರಹ ಚಿತ್ರ.
ಗದಗ ಮೃಗಾಲಯದ ಉಪಗ್ರಹ ಚಿತ್ರ.

ಮೃಗಾಲಯವು ಯಾವಾಗಲೂ ಒಂದು ರೀತಿಯ ಆಕರ್ಷಣೆ. ಒಂದೇ ಸ್ಥಳದಲ್ಲಿ ಎಲ್ಲಾ ರೀತಿಯ ಜೀವಿಗಳ ನೇರವಾಗಿ ನೋಡುವುದು ಒಂದು ರೀತಿಯ ರೋಮಾಂಚನಕಾರಿ. ಸಾಮಾನ್ಯವಾಗಿ ಪ್ರವಾಸಕ್ಕೆ ಹೋದಾಗ ಮಕ್ಕಳೊಂದಿಗೆ ಮೃಗಾಲಯ ವೀಕ್ಷಣೆ ಮಾಡುವುದುಂಟು. ಮೃಗಾಲಯ ವೀಕ್ಷಣೆ ವೇಳೆ ತಂಪಾದ ವಾತಾವರಣ ಇದ್ದರೆ ಆ ಕ್ಷಣ ಮತ್ತಷ್ಟು ಆಹ್ಲಾದ ನೀಡುತ್ತದೆ.

ಒಂದು ವೇಳೆ ಸುಡು ಬಿಸಿಲಿದ್ದರೆ, ಅದರಲ್ಲೂ ಮರಗಳಿಲ್ಲದಿದ್ದರೆ, ಬಂದಿದ್ದಾಯ್ತು...ಹೊರಗೆ ಹೋದರೆ ಸಾಕು ಎನಿಸುವಷ್ಟು ಇರಿಸು-ಮುರಿಸಾಗುವುದುಂಟು. ಆನಂದಕರ ಕ್ಷಣವನ್ನು ಅಹ್ಲಾದಿಸಲು ಸಾಧ್ಯವೇ ಆಗುವುದಿಲ್ಲ.

ಈ ಹಿಂದೆ ಸಾಕಷ್ಟು ಹಸಿರು ಮತ್ತು ನೆರಳು ಇಲ್ಲದ ಕಾರಣ ಗದಗದ ಮೃಗಾಲಯಕ್ಕೆ ಹೋಗಬೇಕೆಂದರೆ ಜನ ಮೂಗು ಮುರಿಯುತ್ತಿದ್ದರು. ಇದನ್ನರಿತ ಅಧಿಕಾರಿಗಳು ಮೃಗಾಲಯದಲ್ಲಿ ಮರ-ಗಿಡಗಳ ನೆಡುವ ಕಾರ್ಯಗಳನ್ನು ಆರಂಭಿಸಿದ್ದರು. ಇದರ ಫಲ ಇಂದು ಕಣ್ಣಿಗೆ ಕಾಣಿಸುತ್ತಿದೆ.

ಇಲ್ಲಿನ ಮೃಗಾಲಯದಲ್ಲಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಮೃಗಾಲಯದಲ್ಲಿನ ಹಸಿರು ಹೊದಿಕೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಮೃಗಾಲಯದಲ್ಲಿ 4 ಕಿ.ಮೀ ವರೆಗೂ ಮರಗಳು ಬಿಸಿಲಿನಿಂದ ಪ್ರವಾಸಿಗರಿಗೆ ರಕ್ಷಣೆ ನೀಡುತ್ತಿವೆ. ಈ ಹಿಂದೆ ಮರಗಳ ಸಂಖ್ಯೆ ವಿರಳವಾಗಿದ್ದವು. ಮೃಗಾಲಯಕ್ಕೆ ಬರುವ ಪ್ರವಾಸಿಗರು ಬಿಸಿಲು ತಡೆಯಲಾರದೆ ಮರಗಳ ಹುಡುಕಿ ಹೋಗಿ ನೆರಳನ್ನು ಆಶ್ರಯಿಸುತ್ತಿದ್ದರು. ಹೀಗಾಗಿ ಕಾಲ್ನಡಿಗೆ ಮಾರ್ಗದಲ್ಲಿ ಹೆಚ್ಚೆಚ್ಚು ಮರಗಳನ್ನು ನೆಡಲು ಮುಂದಾಗಿದ್ದೆವು ಎಂದು ಮೃಗಾಲಯ ಅಧಿಕಾರಿಗಳು ಹೇಳಿದ್ದಾರೆ.

ಇಂದು ಇಡೀ ಮೃಗಾಲಯವು ಹಸಿರು ಹೊದಿಕೆಯನ್ನು ಹೊಂದಿದ್ದು, ಪ್ರವಾಸಿಗರು ಬೇಸಿಗೆಯಲ್ಲೂ ಹಚ್ಚ ಹಸಿರನ್ನು ನೋಡಬಹುದಾಗಿದೆ. ಜಿಲ್ಲೆಯ ತಾಪಮಾನಕ್ಕೆ ಹೋಲಿಕೆ ಮಾಡಿದರೆ, ಇಲ್ಲಿನ ತಾಪಮಾನ 2 ಡಿಗ್ರಿ ಸೆಲ್ಸಿಯಸ್'ನಷ್ಟು ಕಡಿಮೆ ಇರುತ್ತದೆ. ಹೀಗಾಗಿ ಜಿಲ್ಲೆಗೆ ಬರುವ ಪ್ರವಾಸಿಗರು ಇಲ್ಲಿಗೆ ಬಂದು ತಂಪಾಗಿರಬಹುದು ಎಂದು ತಿಳಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯಂದು ಇಲ್ಲಿನ ಆಚರಣೆಗಳು ಸಾಮಾನ್ಯವಾಗಿಯೇ ಇರುತ್ತದೆ. ಆಡಂಬರದಿಂದ ಆಚರಣೆ ಮಾಡುವುದಿಲ್ಲ. ಹಸಿರು ರಕ್ಷಣೆಗೆ ಇಲ್ಲಿನ ಸಿಬ್ಬಂದಿಗಳು ಪ್ರತೀನಿತ್ಯ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಮರಗಳನ್ನು ನೆಡುವುದು, ನೀರುಹಾಕುವುದು ಮತ್ತು ಪೋಷಿಸುವ ಕಾರ್ಯ ಸದಾಕಾಲ ನಡೆಯುತ್ತಿರುತ್ತದೆ. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮೃಗಾಲಯದ ಆವರಣದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ. 2018ರಿಂದಲೇ ನಿಯಮ ಜಾರಿಯಲ್ಲಿದೆ. ನಿಯಮದ ಹಿನ್ನೆಲೆಯಲ್ಲಿ ಮೃಗಾಲಯವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಲಾಗಿದೆ. ಆವರಣದಲ್ಲಿ ಚಿಪ್ಸ್ ಪ್ಯಾಕೆಟ್, ಚಾಕೋಲೇಟ್ ಪ್ಯಾಕೆಟ್, ನೀರಿನ ಬಾಟಲಿ ಸೇರಿದಂತೆ ಯಾವುದೇ ಪ್ಲಾಸ್ಟಿಕ್ ಗಳೂ ಕಂಡು ಬರುವುದಿಲ್ಲ. ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಪ್ರವಾಸಿಗರಿಗೆ ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೇ ತಿಂಗಳಿನಲ್ಲಿ ಗದಗದಲ್ಲಿ 39-40 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಬಿಸಿಲಿನ ವಿರುದ್ಧ ಹೋರಾಡಲು ಪ್ರಾಣಿಗಳಿಗೆ ಸಾಕಷ್ಟು ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ತಾಪಮಾನ ಹೆಚ್ಚಾದ ಕಾರಣ, ಪ್ರಾಣಿಗಳನ್ನು ತಂಪಾಗಿಡಲು ಡಿಸೈನ್ ಬಿಲ್ಟ್ ಆಪರೇಟಿವ್ ಟ್ರಾನ್ಸ್‌ಫರ್ (ಡಿಬಿಒಟಿ) ನೀರಿನ ಸಂಪರ್ಕದ ಮೂಲಕ ಪ್ರಾಣಿಗಳಿಗೆ ನೀರನ್ನು ನೀಡಲಾಯಿತು. ಪ್ರತಿ ಪರ್ಯಾಯ ದಿನ, ಪ್ರಾಣಿಗಳಿಗೆ ಸ್ನಾನ ಮಾಡಿಸಲಾಗುತ್ತಿತ್ತು. ಮಾಂಸಾಹಾರಿ ಅಥವಾ ಇತರ ಆಹಾರಗಳನ್ನು ಐಸ್‌ನೊಂದಿಗೆ ನೀಡಲಾಯಿತು. ಮರಗಳು ಹೆಚ್ಚಾಗಿರುವ ಕಾರಣ ಪ್ರಾಣಿಗಳು ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿವೆ. ವಾತಾವರಣ ಪ್ರವಾಸಿಗರಿಗಷ್ಟೇ ಅಲ್ಲದೆ, ಇಲ್ಲಿನ ಪ್ರಾಣಿಗಳಿಗೂ ಮುದ ನೀಡುತ್ತಿವೆ. ಹುಲಿಗಳು, ಸಿಂಹಗಳು ಮತ್ತು ಚಿರತೆಗಳು ತಮ್ಮ ಆವರಣದೊಳಗೆ ಕೊಳಗಳನ್ನು ಹೊಂದಿವೆ.

ಬಿಂಕದಕಟ್ಟಿ ಗ್ರಾಮದ ಬಳಿ ಇರುವ ಗದಗ ಮೃಗಾಲಯವನ್ನು 1972 ರಲ್ಲಿ ಸ್ಥಾಪಿಸಲಾಯಿತು. ಇದನ್ನು ಬಿಂಕದಕಟ್ಟಿ ಮೃಗಾಲಯ ಎಂದೂ ಕೂಡ ಕರೆಯಲಾಗುತ್ತದೆ. ಆರಂಭದಲ್ಲಿ ಮೃಗಾಲಯದಲ್ಲಿ ಬೆರಳೆಣಿಕೆಯಷ್ಟು ಪ್ರಾಣಗಳಷ್ಟೇ ಇದ್ದವು. ಆದರೆ ಇಂದು ವಿವಿಧ ರೀತಿಯ ಪ್ರಭೇದಗಳಿಗೆ ನೆಲೆಯಾಗಿದೆ. ಮೃಗಾಲಯವು ಕಾಡು ಪ್ರಾಣಿಗಳನ್ನು ಪೋಷಿಸಲು ಮತ್ತು ಪುನರ್ವಸತಿ ನೀಡುತ್ತಿದೆ. ಮೃಗಾಲಯ ಆರಂಭವಾಗಿ 50 ವರ್ಷಗಳಾಗಿದ್ದು, ಇಂದು ಇಲ್ಲಿ 300 ಕ್ಕೂ ಹೆಚ್ಚು ಪ್ರಾಣಿಗಳು ಮತ್ತು ವಿವಿಧ ಪಕ್ಷಿಗಳಿವೆ.

ಮೃಗಾಲಯಕ್ಕೆ ಆಗಾಗ್ಗೆ ಭೇಟಿ ನೀಡುವ ರಮೇಶ ಬೊಮ್ಮನಗೌಡರ ಎಂಬುವವರು ಮಾತನಾಡಿ, ಕಳೆದ ಎರಡು ದಶಕಗಳಿಂದ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದೇವೆ. ಈ ಮೊದಲು ಮರಗಳಿರಲಿಲ್ಲ. ಆದರೀಗ ವಿಶ್ರಾಂತಿಗೆ ಕೇಂದ್ರ ಬಿಂದವಾಗಿದೆ. ಮರಗಳ ಪರಿಣಾಮ ಎಲ್ಲೆಡೆ ತಂಪಾದ ವಾತಾವರಣವಿದೆ. ಮೃಗಾಲಯದ ಆವರಣದೊಳಗೆ 3-4 ಕಿ.ಮೀ ನಡೆದರೂ ನಮಗೆ ಸುಸ್ತಾಗುವುದಿಲ್ಲ. ಇದು ಹಸಿರು ಮೃಗಾಲಯವಾಗಿ ಮಾರ್ಪಟ್ಟಿದೆ, ನಿರ್ವಹಣೆಯೂ ಉತ್ತಮವಾಗಿದೆ. ನೂರಾರು ಹಸಿರು ಮರಗಳನ್ನು ಹೊಂದಿರುವ ಮೃಗಾಲಯವರು ಹಲವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮುಂಗಾರು ಮಳೆ ಬಂದರೆ ಮತ್ತಷ್ಟು ಹಸಿರಾಗಲಿದೆ ಎಂದು ಹೇಳಿದ್ದಾರೆ.

ಪ್ರತೀ ವರ್ಷ ಜೂನ್ 5 ರಂದು ಪ್ರತಿ ಪರಿಸರ ದಿನದಂದು ಶಾಲಾ ಮಕ್ಕಳೊಂದಿಗೆ ಮೃಗಾಲಯಕ್ಕೆ ಭೇಟಿ ನೀಡುತ್ತಿರುತ್ತೇವೆ. ಮಕ್ಕಳು ಪರಿಸರದ ಮಹತ್ವವನ್ನು ತಿಳಿದುಕೊಳ್ಳಲು ಸ್ಪರ್ಧೆಗಳನ್ನು ನಡೆಸುತ್ತೇವೆಂದು ತಿಳಿಸಿದ್ದಾರೆ.

ಮೃಗಾಲಯದ ಸಿಬ್ಬಂದಿಯೊಬ್ಬರು ಮಾತನಾಡಿ, ಮೃಗಾಲಯವು ಪ್ಲಾಸ್ಟಿಕ್ ಮುಕ್ತವಾಗಿದ್ದು, ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಆವರಣವನ್ನು ಹಸಿರಾಗಿರಿಸುತ್ತೇವೆ. ಪ್ರವಾಸಿಗರು ನಡೆಯುವ ಮಾರ್ಗ ಹಸಿರಾಗಿರುವುದರಿಂದ ಪ್ರಾಣಿಗಳು ಮತ್ತು ಪಕ್ಷಿಗಳನ್ನು ವೀಕ್ಷಿಸಲು ಸಂತೋಷಪಡುತ್ತಾರೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಮ ಪ್ರತಿ ಪರ್ಯಾಯ ದಿನಗಳಲ್ಲಿ ಪ್ರಾಣಿಗಳು-ಪಕ್ಷಿಗಳಿಗೆ ಸ್ನಾನ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಮಾತನಾಡಿ, ಜುಲೈನಲ್ಲಿ ವನ ಮಹೋತ್ಸವ ಆಯೋಜಿಸಿ ಹೆಚ್ಚು ಗಿಡಗಳನ್ನು ಬೆಳೆಸುವ ಕುರಿತು ಜಾಗೃತಿ ಮೂಡಿಸುತ್ತೇವೆ. ಈ ವರ್ಷದ ವಿಶ್ವ ಪರಿಸರ ದಿನದ ವಿಷಯವೆಂದರೆ ಪ್ಲಾಸ್ಟಿಕ್'ನಿಂದಾಗುವ ಮಾಲಿನ್ಯಕ್ಕೆ ಪರಿಹಾರಗಳಾಗಿತ್ತು. ಪ್ರತೀಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಮೃಗಾಲಯದೊಳಗೆ ಉತ್ಪತ್ತಿಯಾಗುವ ವರ್ಮಿಕಾಂಪೋಸ್ಟ್ ಅನ್ನು ಮೃಗಾಲಯದಲ್ಲಿ ಮಾರಾಟ ಮಾಡುತಿದ್ದು, ಅದನ್ನು ಬಟ್ಟೆಯ ಚೀಲಗಳಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com