
ರಾಮನಗರ: ಅನಕ್ಷರಸ್ಥರನ್ನು ಗುರುತಿಸಲು ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲಾ ಅನಕ್ಷರಸ್ಥರಿಗೂ ಅಕ್ಷರಗಳನ್ನು ಕಲಿಸಿದಾಗ ಮಾತ್ರ ಸಾಕ್ಷರತೆಯಂತಹ ಕಾರ್ಯಕ್ರಮಗಳು ಸಾಧ್ಯವಾಗುತ್ತವೆ. ಈ ನಿಟ್ಟಿನಲ್ಲಿ ವಯಸ್ಸಾದ ಮಹಿಳೆಯರೂ ಕೂಡ ಅಕ್ಷರ ಕಲಿಯಲು ಸರ್ಕಾರ ಸ್ಥಾಪಿಸಿರುವ ಗ್ರಂಥಾಲಯಗಳು ನೆರವಾಗುತ್ತಿದೆ.
ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುವ ಗ್ರಂಥಾಲಯಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳಗಷ್ಟೇ ಅಲ್ಲದೆ, ಅನಕ್ಷರಸ್ಥ ಮಹಿಳೆಯರಿಗೂ ಕಲಿಕಾ ಕೇಂದ್ರಗಳಾಗಿ ಮಾರ್ಪಟ್ಟಿವೆ.
ಅನಕ್ಷರಸ್ಥ ಮಹಿಳೆಯರಿಗೆ ಈ ಗ್ರಂಥಾಲಯಗಳು ಅಕ್ಷರ ಜ್ಞಾನ ನೀಡುತ್ತಿದ್ದು, ಈ ಮೂಲಕ ಅಕ್ಷರದ ಮೌಲ್ಯವನ್ನು ತಿಳಿಸುತ್ತಿದೆ. ಗ್ರಾಮದ ಮಹಿಳೆಯರು ಈ ಗ್ರಂಥಾಲಯದ ಮೂಲಕ ತಮ್ಮ ಓದುವ ಹಾಗೂ ಬರೆಯುವ ಕನಸ್ಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.
ನೀಲಸಂದ್ರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಗ್ರಂಥಾಲಯವು ಭೀರಮ್ಮ ಅವರಂತಹ ಅನೇಕ ಮಹಿಳೆಯರಿಗೆ ಅಕ್ಷರಾಭ್ಯಾಸ ಮಾಡಲು ನೆರವಾಗುತ್ತಿದೆ.
ಈ ಮೊದಲು ನನಗೆ ಪೆನ್ನನ್ನೂ ಹಿಡಿಯುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಆದರೆ, ಇದು ನಾನು ಎಲ್ಲಿಗೇ ಹೋದರೂ ನನ್ನೊಂದಿಗೆ ಒಂದು ಪೆನ್ನು ಇದ್ದೇ ಇರುತ್ತದೆ. ಪೆನ್ನಿನ ಕ್ಯಾಪ್ ತೆಗೆದು ಸಹಿ ಮಾಡಲು ಬಹಳ ಸಂತೋಷವಾಗುತ್ತದೆ. ಮುಂದೊಂದು ದಿನ ಯಾರ ಸಹಾಯವೂ ಇಲ್ಲದೆ, ಪುಸ್ತಕ ಓದುವ ನನ್ನ ಕನಸ್ಸನ್ನು ನನಸು ಮಾಡಿಕೊಳ್ಳುವ ಗುರಿಯಿದೆ ಎಂದು ರಾಮನಗರ ಜಿಲ್ಲೆಯ ನೀಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ನವಸಾಕ್ಷರ ಭೀರಮ್ಮ (60) ಅವರು ಹೇಳಿದ್ದಾರೆ.
65ರ ಹರೆಯದ ಪುಟ್ಟಗೌರಮ್ಮ ಕೂಡ ಈ ಗ್ರಂಥಾಲಯದಲ್ಲಿ ಖಾಯಂ ಸದಸ್ಯರಾಗಿದ್ದಾರೆ. ನಾನು ಮದುವೆಯಾದಾಗ ತುಂಬಾ ಚಿಕ್ಕವಳಾಗಿದ್ದೆ. ನನ್ನ ತಂದೆ ನನ್ನನ್ನು ಶಾಲೆಗೆ ಕಳುಹಿಸಲಿಲ್ಲ. ನಾನು ಅನಕ್ಷರಸ್ಥಳಾಗಿದ್ದೆ. ನನ್ನ ಮೊಮ್ಮಕ್ಕಳು ಈ ಗ್ರಂಥಾಲಯಕ್ಕೆ ಹೋಗುತ್ತಾರೆ. ನಾನೂ ಅವರೊಂದಿಗೆ ಹೋಗಲು ಪ್ರಾರಂಭಿಸಿದೆ. ಬಳಿಕ ನಾನು ಕೂಡ ಓದಲು ಮತ್ತು ಬರೆಯಲು ಕಲಿಯಬೇಕು ಎಂಬ ಆಲೋಚನೆ ಬಂದಿತ್ತು.
ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗೆ ಹೋದಾಗಲೆಲ್ಲ ಅಧಿಕಾರಿಗಳು ನನ್ನನ್ನು ಹೆಬ್ಬೆಟ್ಟು (ಅನಕ್ಷರಸ್ಥ) ಎಂದು ನಿಂದಿಸುತ್ತಿದ್ದರು. ನಾನು ನನ್ನ ಹೆಬ್ಬೆರಳಿನ ಗುರುತನ್ನು ನೀಡುತ್ತಿದ್ದೆ. ಆದರೆ, ಈಗ ಅವರು ನನ್ನ ಹೆಬ್ಬೆರಳಿನ ಗುರುತನ್ನು ನೀಡುವಂತೆ ಹೇಳಿದರೆ ಸಹಿ ಮಾಡಲು ಮುಂದಾಗುತ್ತೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಗೌರಮ್ಮ ಅವರು ಹೇಳಿದ್ದಾರೆ.
7ನೇ ತರಗತಿಯ ನಂತರ ಓದು ನಿಲ್ಲಿಸಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ 44 ವರ್ಷದ ಮಂಜುಳಾ ಎಂಬುವವರು ಕೂಡ ಇದೀಗ ಗ್ರಂಥಾಲಯ ಅಧಿಕಾರಿಗಳ ನೆರವಿನೊಂದಿಗೆ ಎಸ್ಎಸ್ಎಲ್'ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಅವರು ಮಾತನಾಡಿ, ಅನಕ್ಷರಸ್ಥರಿಗೆ ಕನ್ನಡ ಓದಲು ಮತ್ತು ಬರೆಯಲು ಸಹಾಯ ಮಾಡುತ್ತಿದ್ದೇವೆ. ಕಾರಣಾಂತರಗಳಿಂದ ಶಾಲೆ ಬಿಟ್ಟ ಮಹಿಳೆಯರೂ ಕೂಡ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಸಾಕಷ್ಟು ಮಹಿಳೆಯರು ಪದವೀಧರರಾಗಲು ಬಯಸುತ್ತಿದ್ದಾರೆ. ಜಿಲ್ಲಾಪಂಚಾಯತ್ ಗಳಲ್ಲಿ ಸ್ಥಾಪಿತವಾಗಿರುವ ಗ್ರಂಥಾಲಯ ಸಾಕಷ್ಟು ಸಹಾಯ ಮಾಡುತ್ತಿದ್ದು, ಈ ಗ್ರಂಥಾಲಯಗಳು ಅನಕ್ಷರಸ್ಥ ಮಹಿಳೆಯರನ್ನು ಓದಲು ಮತ್ತು ಬರೆಯಲು ಪ್ರೇರೇಪಿಸುತ್ತಿವೆ. ವಯಸ್ಸಾದ ಮಹಿಳೆಯರೂ ಕೂಡ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೆ ಶಾಲೆಗೆ ಹೋಗಲು ಪ್ರೇರೇಪಿಸುತ್ತಿದೆ ಎಂದು ಹೇಳಿದ್ದಾರೆ.
ನೀಲಸಂದ್ರ ಜಿಪಿ ವ್ಯಾಪ್ತಿಯಲ್ಲಿ 11 ಗ್ರಾಮಗಳಿದ್ದು, ಪ್ರತಿದಿನ ಸುಮಾರು 80 ಜನರು ಈ ‘ಅರಿವು ಕೇಂದ್ರ’ಕ್ಕೆ (ಗ್ರಂಥಾಲಯ) ಭೇಟಿ ನೀಡುತ್ತಾರೆ. ನಾವು ಅನಕ್ಷರಸ್ಥ ಮಹಿಳೆಯರಿಗೆ ಕನ್ನಡ ಓದಲು ಮತ್ತು ಬರೆಯಲು ಸಹಾಯ ಮಾಡುತ್ತೇವೆ. ಮಕ್ಕಳು ಕೂಡ ಅಜ್ಜ-ಅಜ್ಜಿಗೆ ಸಹಾಯ ಮಾಡುತ್ತಾರೆ. ಮೂವರು ಮಹಿಳೆಯರು ಈಗ SSLC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪರೀಕ್ಷೆ ಸಿದ್ಧತೆಗೆ ಸಹಾಯ ಮಾಡುತ್ತೇವೆ. ಕಲಿಯುವ ಹಂಬಲವಿರುವ ವೃದ್ಧರ ಮನೆಗಳಿಗೆ ಭೇಟಿ ನೀಡುತ್ತೇವೆಂದು ಗ್ರಂಥಪಾಲಕಿ ಶಿವರುದ್ರಮ್ಮ ಎ.ಆರ್. ಅವರು ತಿಳಿಸಿದ್ದಾರೆ.
Advertisement