

ಸಾಧನೆ ಮಾಡಬೇಕೆಂಬ ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಮೂಡುಬಿದಿರೆಯ ಈ ಬಾಲಕಿ ಸಾಬೀತುಪಡಿಸಿದ್ದಾರೆ. ಕೇವಲ 15 ವರ್ಷದ ಪ್ರಾಯದಲ್ಲೇ ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಮೂಡುಬಿದಿರೆಯ ಹೆಸರಾಂತ ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ವಿಷ್ಣುಪ್ರಿಯಾ, ಕೇವಲ 15 ದಿನಗಳ ಅವಧಿಯಲ್ಲಿ 51 ಶಾಲೆಗಳಲ್ಲಿ ಯುವದಿನ ದೃಷ್ಟಿಕೋನ (Youth Orientation) ಹಾಗೂ ಪ್ರೇರಣಾ ಶಿಬಿರಗಳನ್ನು ನಡೆಸಿ ಪ್ರತಿಷ್ಠಿತ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' (Golden Book of World Records) ಪುಟ ಸೇರಿದ್ದಾರೆ.
ಹದಿಹರೆಯದ ವಿದ್ಯಾರ್ಥಿಗಳು ಎದುರಿಸುವ ಮಾನಸಿಕ ಒತ್ತಡ ಹಾಗೂ ಗೊಂದಲಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಷ್ಣುಪ್ರಿಯಾ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದ್ದರು.
ರಾಜ್ಯದಾದ್ಯಂತ ಇರುವ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಪ್ರತೀ ಶಾಲೆಯಲ್ಲೂ ಒಂದು ಗಂಟೆಯ ಕಾಲ ನಡೆದ ಈ ತರಗತಿಗಳು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸುವಲ್ಲಿ ಯಶಸ್ವಿಯಾದವು.
ಕೇವಲ 15 ದಿನಗಳಲ್ಲಿ ಕರ್ನಾಟಕದ 51 ಶಾಲೆಗಳಿಗೆ ಭೇಟಿ ನೀಡಿ ಸುಮಾರು 4,500 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅಧಿಕೃತವಾಗಿ ದಾಖಲೆ ನಿರ್ಮಿಸಿದ್ದಾರೆ.
ಆಗಸ್ಟ್ 24ರಿಂದ ಸೆಪ್ಟೆಂಬರ್ 11ರವರೆಗೆ ನಡೆದ ಈ ವಿಶಿಷ್ಟ ಅಭಿಯಾನದಲ್ಲಿ ವಿಷ್ಣುಪ್ರಿಯಾ ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಶಾಲೆಗಳಿಗೆ ತೆರಳಿದರು. ಪ್ರತಿ ಶಾಲೆಯಲ್ಲೂ ಸುಮಾರು ಒಂದು ಗಂಟೆಯ ಅವಧಿಯ ಮಾರ್ಗದರ್ಶನ ಕಾರ್ಯಕ್ರಮ ನಡೆಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡರು.
ಪರೀಕ್ಷೆ ಎಂದರೆ ಕೇವಲ ಅಂಕಗಳಿಗಾಗಿ ನಡೆಯುವ ಸ್ಪರ್ಧೆಯಲ್ಲ, ಸರಿಯಾದ ಯೋಜನೆ, ಸಮಯದ ನಿರ್ವಹಣೆ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವೂ ಯಶಸ್ಸಿನ ಭಾಗ ಎಂಬ ಸಂದೇಶವನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು. ಒತ್ತಡ ನಿರ್ವಹಣೆ, ಸಮಯ ನಿರ್ವಹಣೆ, ಪ್ರಾಯೋಗಿಕ ಅಧ್ಯಯನ ತಂತ್ರಗಳು ಹಾಗೂ ಪರಿಣಾಮಕಾರಿ ಪರೀಕ್ಷಾ ಸಿದ್ಧತೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಒಂದೆರಡು ಶಾಲೆಗಳಿಗೆ ಸೀಮಿತವಾಗದೆ, ರಾಜ್ಯದ ವಿವಿಧ ಭಾಗಗಳಲ್ಲಿರುವ 51 ಶಾಲೆಗಳನ್ನು ತಲುಪಿರುವುದು. 15 ದಿನಗಳ ಅವಧಿಯಲ್ಲಿ ಇಷ್ಟೊಂದು ಶಾಲೆಗಳಿಗೆ ಭೇಟಿ ನೀಡಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದ ಈ ಪ್ರಯತ್ನವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ನಿಕಟವಾಗಿ ಮೇಲ್ವಿಚಾರಣೆ ಮಾಡಿತ್ತು.
ವಿಷ್ಣುಪ್ರಿಯಾ ಅವರಿಗೆ ಮನೋವಿಜ್ಞಾನ ಮತ್ತು ಸಮಾಲೋಚನಾ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿದ್ದು, ಅವರು 6ನೇ ತರಗತಿಯಲ್ಲಿ ಓದುತ್ತಿದ್ದಾಗ. ಕಳೆದ ನಾಲ್ಕು ವರ್ಷಗಳಿಂದ ಈ ಕ್ಷೇತ್ರದ ಕುರಿತು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಅವರು, ಇಂಡಿಯನ್ ಕೌನ್ಸೆಲಿಂಗ್ ಸರ್ವೀಸಸ್ ಮೂಲಕ ಆನ್‌ಲೈನ್ ಕೋರ್ಸ್‌ಗಳನ್ನೂ ಪೂರ್ಣಗೊಳಿಸಿದ್ದಾರೆ.
ತಾವು ಕಲಿತ ವಿಷಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ, ಇತರ ವಿದ್ಯಾರ್ಥಿಗಳಿಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಕೈಗೊಂಡಿದ್ದಾಗಿ ವಿಷ್ಣುಪ್ರಿಯಾ ಹೇಳಿದ್ದಾರೆ.
ಒತ್ತಡವನ್ನು ಹೇಗೆ ನಿರ್ವಹಿಸಬೇಕು, ಸಮಯವನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ಪರೀಕ್ಷೆಗೆ ಪರಿಣಾಮಕಾರಿಯಾಗಿ ಹೇಗೆ ಸಿದ್ಧತೆ ನಡೆಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಸಾಧನೆಗೆ ಅಧಿಕೃತ ಮನ್ನಣೆ ದೊರೆಯಲಿದ್ದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಅಕ್ಟೋಬರ್ 1ರಂದು ಆಲ್ವಾಸ್ ಸೆಂಟ್ರಲ್ ಸ್ಕೂಲ್, ಮೂಡಬಿದ್ರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಷ್ಣುಪ್ರಿಯಾ ಅವರಿಗೆ ಪ್ರದಾನ ಮಾಡಲಾಗುತ್ತದೆ. ಆಲ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಒಬ್ಬ ವಿದ್ಯಾರ್ಥಿನಿ ತನ್ನ ಕಲಿಕೆಯ ವ್ಯಾಪ್ತಿಯನ್ನು ಶಾಲೆಯ ತರಗತಿಯಿಂದ ಹೊರಗೆ ವಿಸ್ತರಿಸಿ, ಸಾವಿರಾರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿರುವುದು ಈ ಸಾಧನೆಯ ವಿಶೇಷತೆ.
15 ದಿನಗಳಲ್ಲಿ 51 ಶಾಲೆಗಳನ್ನು ತಲುಪಿದ ವಿಷ್ಣುಪ್ರಿಯಾ ಅವರ ಪ್ರಯತ್ನ, ಶಿಕ್ಷಣವೆಂದರೆ ಕೇವಲ ವೈಯಕ್ತಿಕ ಸಾಧನೆಗಾಗಿ ಮಾತ್ರವಲ್ಲ, ಇತರರ ಬದುಕಿಗೂ ಉಪಯುಕ್ತವಾಗುವ ಜ್ಞಾನ ಹಂಚಿಕೆಯೂ ಹೌದು ಎಂಬ ಸಂದೇಶವನ್ನು ಸಾರಿದೆ.