ಸಚಿನ್ ಕೈಯಲ್ಲಿ ರಿಕಿ ರಿಮೋಟ್
ಮುಂಬೈ: ಪ್ರತಿ ಬಾರಿಯಂತೆ ಈ ಬಾರಿಯು ಇಂಡಿಯನ್ ಪ್ರೀಮಿಯರ್ ಲೀಗ್ ಹಲವಾರು ಅಚ್ಚರಿ, ಕುತೂಹಲ ಹಾಗೂ ಗೊಂದಲಗಳಿಗೆ ಕಾರಣವಾಗಿದೆ. ಅವುಗಳಲ್ಲಿ ಎಲ್ಲಕ್ಕಿಂತ ಅತಿ ಹೆಚ್ಚು ಅಚ್ಚರಿ ಮೂಡಿಸಿರುವ ವಿಷಯವೆಂದರೆ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಡಿಯಲ್ಲಿ ಆಡುತ್ತಿರುವುದು.
ಹೌದು, ಇಡೀ ಕ್ರಿಕೆಟ್ ಜಗತ್ತಿಗೆ ಸಚಿನ್ ಎಂದರೆ, ಕ್ರಿಕೆಟ್ನ ದೇವರು, ಸಮಕಾಲೀನ ಆಟಗಾರರಲ್ಲಿ ಸಚಿನ್ಗೆ ಮಿಗಿಲಾದ ಆಟಗಾರ ಮತ್ತೊಬ್ಬರಿಲ್ಲ. ಅಂತಲೇ ಕ್ರಿಕೆಟ್ ಜಗತ್ತು ನಂಬಿಕೊಂಡಿದೆ. ಆದರೆ, ಇಂತಹ ಸಂದರ್ಭದಲ್ಲಿ ಮುಂಬೈ ಐಪಿಎಲ್ ತಂಡವನ್ನು ಪ್ರತಿನಿಧಿಸುತ್ತಿರುವ ಸಚಿನ್ ತೆಂಡೂಲ್ಕರ್, ಆಸೀಸ್ನ ಪಾಂಟಿಂಗ್ ನಾಯಕತ್ವದಲ್ಲಿ ಏನು ಮಾಡುತ್ತಾರೆ? ಎಂಬುದು ಸಹ ಅವರ ಅಭಿಮಾನಿಗಳ ಪ್ರಶ್ನೆ ಮತ್ತು ಗೊಂದಲವಾಗಿದೆ.
ಆದರೆ, ಬ್ಯಾಟಿಂಗ್ ಮಾಂತ್ರಿಕ ಎನಿಸಿಕೊಂಡಿರುವ ಸಚಿನ್ ತಂಡದ ನಾಯಕತ್ವ ವಹಿಸಿಕೊಳ್ಳದಿರಬಹುದು. ತಂಡದ ಮೇಲೆ ನಿಯಂತ್ರಣ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ಇದುವರೆಗೂ ಪರಸ್ಪರ ಎದುರಾಳಿ ತಂಡದಲ್ಲಿ ಆಡಿದ ಆಟಗಾರರು. ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ಅವರನ್ನು ಹಿಂದಿಕ್ಕಲೆಂದೇ ಆಸ್ಟ್ರೇಲಿಯಾ ಪಾಂಟಿಂಗ್ಗೆ ಹೆಚ್ಚಿನ ಅವಕಾಶ ನೀಡುತ್ತಿದೆ ಎಂಬ ವದಂತಿಗಳಿಗೂ ಕೊರತೆ ಇಲ್ಲ. ಆದರೆ, ಈಗ ಈ ಇಬ್ಬರೂ ಆಟಗಾರರೂ ಒಂದೇ ತಂಡದಲ್ಲಿ, ಅದೂ ಪಾಂಟಿಂಗ್ ನಾಯಕತ್ವದಲ್ಲಿ ಸಚಿನ್ ಆಡುತ್ತಾರೆ ಎಂದರೆ ಸಚಿನ್ ಅಭಿಮಾನಿಗಳಿಗೆ ಹೇಗಾಗಬೇಡ ?
ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಭಾರತ ತಂಡದ ಮಾಜಿ ತರಬೇತುದಾರ ಜಾನ್ ರೈಟ್ ತಂಡದ ತರಬೇತುದಾರರಾಗಿದ್ದಾರೆ ಮತ್ತು ಭಾರತ ಸ್ಪಿನ್ ದಂತ ಕತೆ ಅನಿಲ್ ಕುಂಬ್ಳೆ ತಂಡದ ತಾಂತ್ರಿಕ ಸಲಹೆಗಾರರಾಗಿದ್ದಾರೆ. ಇಷ್ಟೆಲ್ಲ ಇರುವಾಗ ಪಾಂಟಿಂಗ್ ಸಚಿನ್ ಮೇಲೆ ಯಾವ ಹಕ್ಕೂ ಚಲಾಯಿಸಲೂ ಸಾಧ್ಯವಿಲ್ಲ.
ಅಲ್ಲದೆ ಪಾಂಟಿಂಗ್ ಸಹ ಸಚಿನ್ ತಮ್ಮ ತಂಡದಲ್ಲಿರುವ ಬಗ್ಗೆ ಗೌರವ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿರುವುದು ಸಚಿನ್ ಅಭಿಮಾನಿಗಳು ಸಂತಸಪಡಲಿಕ್ಕೆ ಸಾಕು ಎನಿಸುತ್ತಿದೆ.
ಅಲ್ಲದೆ ಸಚಿನ್ ಮಾತನ್ನು ಟೀಂ ಇಂಡಿಯಾದಲ್ಲೇ ತೆಗೆದು ಹಾಕುವುದಿಲ್ಲ ಎಂದ ಮೇಲೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರ ಅಭಿಪ್ರಾಯಕ್ಕೆ ಯಾರು ತಾನೆ ಎದುರು ನಿಲ್ಲುತ್ತಾರೆ. ಸಚಿನ್ ಹೇಗೆ ಬೇಕೋ ಹಾಗೆ ಆಡಲು ಮತ್ತು ಬದಲಾವಣೆ ಮಾಡಿಕೊಳ್ಳಲು ಸ್ವತಂತ್ರರಾಗಿದ್ದಾರೆ. ಹೀಗಿದ್ದಾಗ ಅವರ ಕೈಯಲ್ಲಿ ತಂಡದ ರಿಮೋಟ್ ಇಲ್ಲವೆಂದು ಹೇಗೆ ಹೇಳಲು ಸಾಧ್ಯ. ಅವರನ್ನು ಬೇಕೆಂದೇ ತೆಗೆದು ಹಾಕಿ ಪಾಂಟಿಂಗ್ ಅವರಿಗೆ ನಾಯಕತ್ವ ಪಟ್ಟ ಕಟ್ಟಿಲ್ಲ. ಕಳೆದ ವರ್ಷವೇ ಸಚಿನ್ ನಾಯಕತ್ವ ನಿರಾಕರಿಸಿದ ಕಾರಣ ಹರ್ಭಜನ್ ಸಿಂಗ್ ತಂಡವನ್ನು ಮುನ್ನಡೆಸಿದ್ದರು.
ಸಚಿನ್ ಎಂಬ ವ್ಯಕ್ತಿಯೇ ಹಾಗೇ, ಸಚಿನ್ ಎಂದರೆ ಕ್ರಿಕೆಟ್, ಕ್ರಿಕೆಟ್ ಎಂದರೆ ಸಚಿನ್ ಎಂಬಂತಿರುವಾಗ ಅವರಿಗೆ ನಾಯಕತ್ವದ ಹಂಗು ಎಲ್ಲಿಂದ ಬರುತ್ತದೆ. ಇಷ್ಟೇ ಅಲ್ಲ, ಟೀಂ ಇಂಡಿಯಾದಲ್ಲಿ ತಾವು ನಾಯಕತ್ವ ಬಿಟ್ಟುಕೊಟ್ಟ ಮೇಲೆ ಅದೆಷ್ಟು ನಾಯಕರ ಅಡಿಯಲ್ಲಿ ಸಚಿನ್ ಆಡಿಲ್ಲ. ಗಂಗೂಲಿ, ದ್ರಾವಿಡ್ ಹಾಗೂ ಧೋನಿ ಯಾರು ಬಂದರೂ ಸಚಿನ್ ಪ್ರತಿಷ್ಠೆಗೆ ಯಾವತ್ತೂ ಧಕ್ಕೆಯಾಗಿಲ್ಲ. ಹೀಗಿರುವಾಗ ಸಚಿನ್ ಯಾವಾಗಲೂ ಕ್ರಿಕೆಟ್ನ 'ಚಿನ್ನವೇ' ಅಲ್ಲವೇ?
ಅಲ್ಲದೆ ಕ್ರೀಡಾ ಸ್ಫೂರ್ತಿಯ ಮುಂದೆ ವೈಯಕ್ತಿಕ ಪ್ರತಿಷ್ಠೆಗಳು ಯಾವತ್ತಿದ್ದರೂ ಗೌಣವೇ ಹೌದು. ಅದು ಪ್ರತಿಯೊಬ್ಬ ಕ್ರಿಡಾ ಅಭಿಮಾನಿಗೂ ಗೊತ್ತಿರುವ ಸಾಮಾನ್ಯ ವಿಷಯ. ಹಾಗಿದ್ದಾಗ ಸಚಿನ್ ಅವರಿಗೂ ಅದು ಅನ್ವಯವಾಗುವುದರಲ್ಲಿ ತಪ್ಪೇನಿದೆ.
ಸಚಿನ್ ವಿಷಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಇನ್ನೊಂದು ಕೌತುಕದ ವಿಷಯವೆಂದರೆ, 2008ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದಾಗ ನಡೆದ 'ಮಂಕಿಗೇಟ್' ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ, ಆಸೀಸ್ನ ಅಂಡ್ರ್ಯೂ ಸೈಮಂಡ್ಸ್ ಮತ್ತು ಹರ್ಭಜನ್ ಸಿಂಗ್ ಸಹ ಮುಂಬೈ ಇಂಡಿಯನ್ಸ್ ತಂಡದಲ್ಲೇ ಆಡುತ್ತಿದ್ದಾರೆ. 2008 ಜನವರಿಯಲ್ಲಿ ಸಿಡ್ನಿ ಟೆಸ್ಟ್ನಲ್ಲಿ ಹರ್ಭಜನ್ ಸಿಂಗ್ ವಿರುದ್ಧ ಸೈಮಂಡ್ಸ್ ಜನಾಂಗೀಯ ನಿಂದನೆಯ ಆರೋಪ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

