ದಣಿವಿಲ್ಲದ ಪೇಸ್ಗೆ ಒಲಿಂಪಿಕ್ಸ್ ಆಸೆ
ಬೆಂಗಳೂರು: ರಾಜಧಾನಿ ಬೆಂಗಳೂರು ಡೇವಿಸ್ ಕಪ್ ಪಂದ್ಯಾವಳಿಯ ರಸದೌತಣ ಸವಿಯಲು ಸಿದ್ಧವಾಗಿದೆ. ರಸದೌತಣ ನೀಡಲು ಭಾರತದ ಟೆನಿಸ್ ತಾರೆಗಳು ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಅಂಗಣದಲ್ಲಿ ಭರದ ಸಿದ್ಧತೆ ನಡೆಸಿದ್ದಾರೆ. ಯುವ ಆಟಗಾರರು ಅಂಗಣದಲ್ಲಿ ಜಿಂಕೆಯಂತೆ ಜಿಗಿಯುತ್ತಾ ಮಾಡುತ್ತಿದ್ದ ಅಭ್ಯಾಸ ನೋಡಲು ಅದ್ಭುತವಾಗಿತ್ತು. ಅಭ್ಯಾಸ ವೀಕ್ಷಿಸಲು ಬಂದವರಿಗೆ ಅಲ್ಲೊಂದು ಅಚ್ಚರಿ ಕಾದಿತ್ತು. ಯುವಕರ ಗುಂಪಿನಲ್ಲಿ ಹಳೆ ಹುಲಿಯೊಂದು ಜಿಂಕೆಗಿಂತ ವೇಗವಾಗಿ ಚಿನ್ನಾಟವಾಡುತ್ತಿತ್ತು. ಅದೇ ಲಿಯಾಂಡರ್ ಪೇಸ್. ಪೇಸ್ ಇವರೇನಾ ಎಂಬುದೇ ಎಲ್ಲರ ಪ್ರಶ್ನೆ? ಕಾರಣ 40ರ ಅಂಚಿನಲ್ಲಿರುವ ಪೇಸ್ ಯುವಕರಿಗಿಂತ ಚುರುಕಾಗಿ ಪಾದರಸದಂತೆ ಅಂಗಣದಲ್ಲಿ ಹರಿದಾಡುತ್ತಿದ್ದರು.
ಈ ಸಂದರ್ಭದಲ್ಲಿ ಪೇಸ್ 'ಕನ್ನಡಪ್ರಭ'ದೊಂದಿಗೆ ತಮ್ಮಲ್ಲಿ ಹುದುಗಿರುವ ಟೆನಿಸ್ ಆಟದ ಬಗೆಗಿನ ಪ್ರೀತಿಯನ್ನು ಬಿಚ್ಚಿಟ್ಟರು.
ಅಂಗಣದಲ್ಲಿ ಯುವ ಆಟಗಾರರೊಂದಿಗೆ ನೀವು ಅವರಿಗಿಂತ ಯುವಕರಾಗಿ ಟೆನಿಸ್ನಲ್ಲಿ ಮುಳುಗುತ್ತಿರಿ ಕಾರಣ?
ಟೆನಿಸ್ ಒಂದು ಸುಂದರ ಕ್ರೀಡೆ. ಅದನ್ನು ಜೀವಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತೇನೆ. ಅಭ್ಯಾಸ ಮಾಡುವುದು, ಫಿಟ್ನೆಸ್ ಕಾಪಾಡಿಕೊಳ್ಳುವುದು ಹಾಗೂ ಮನಸ್ಸನ್ನು ಹಗುರಗೊಳಿಸಿಕೊಳ್ಳುವುದು ನನ್ನ ನಿತ್ಯದ ಕಾಯಕ. ಅಲ್ಲದೆ, ತಂಡದಲ್ಲಿರುವ ಯುವ ಆಟಗಾರರೇ ನನ್ನನ್ನು ಯುವಕನಾಗಿರುವಂತೆ ಮಾಡಿದ್ದಾರೆ. ನನ್ನನ್ನು ಸಂತೋಷವಾಗಿಟ್ಟಿದ್ದಾರೆ. ಅವರೊಂದಿಗೆ ನಾನು ಆಟವನ್ನು ಅನುಭವಿಸುತ್ತಿದ್ದೇನೆ. ಯಾವತ್ತೂ ನನಗೆ ಟೆನಿಸ್ ಅಂಗಣದಲ್ಲಿ ದಣಿವು ಅನಿಸಿಯೇ ಇಲ್ಲ. ಅಂಗಣಕ್ಕಿಳಿಯುವುದು, ಅಭ್ಯಾಸ ಮಾಡುವುದು ಫಿಟ್ನೆಸ್ ಕಾಪಾಡಿಕೊಂಡಿರುವುದು ಹಾಗೂ ಟೆನಿಸ್ ಬಗ್ಗೆ ನನ್ನಲ್ಲಿರುವ ಪ್ರೀತಿ, ಈ ವಯಸ್ಸಿನಲ್ಲೂ ಇಷ್ಟೊಂದು ಚುರುಕಾಗಿ ಆಡುವಂತೆ ಮಾಡಿದೆ.
ಇಂಡೋನೇಷ್ಯಾ ವಿರುದ್ಧ ಡೇವಿಸ್ ಕಪ್ ಪಂದ್ಯಾವಳಿಗೆ ತಯಾರಿ ಹೇಗೆ ನಡೆದಿದೆ?
ಅಭ್ಯಾಸ ತುಂಬಾ ಅದ್ಭುತವಾಗಿ ನಡೆದಿದೆ. ಬೆಂಗಳೂರು ನನ್ನ ನೆಚ್ಚಿನ ನಗರಗಳಲ್ಲೊಂದು. ಇಲ್ಲಿನ ವಾತಾವರಣ ಅಭ್ಯಾಸಕ್ಕೆ ತುಂಬಾ ಅನುಕೂಲಕರವಾಗಿದೆ. ಯುವ ಆಟಗಾರರೆಲ್ಲರೂ ತುಂಬಾ ಹುಮ್ಮಸ್ಸಿನಿಂದ ಅಭ್ಯಾಸ ನಡೆಸಿದ್ದಾರೆ. ಪಂದ್ಯಾವಳಿಯನ್ನು ಎದುರು ನೋಡುತ್ತಿರುವ ಯುವಕರಿಂದ ಕೂಡಿದ ತಂಡ, ಕಠಿಣ ಅಭ್ಯಾಸ ಮಾಡುತ್ತಿದ್ದು, ಪಂದ್ಯಾವಳಿಯನ್ನು ಎದುರು ನೋಡುತ್ತಿದೆ. ಅಲ್ಲದೆ, ಬೆಂಗಳೂರಿನ ಜನ ನನ್ನ ಆಟವನ್ನು ಸದಾ ಬೆಂಬಲಿಸುತ್ತಾರೆ.
ಲಿಯಾಂಡರ್ ಪೇಸ್ ಬ್ರೆಜಿಲ್ ಒಲಿಂಪಿಕ್ಸ್ನಲ್ಲೂ ಆಡುತ್ತಾರೆ ಎಂಬ ವದಂತಿ ಇದೆ?
ಪ್ರತಿ ಒಲಿಂಪಿಕ್ಸ್ನಲ್ಲೂ ಇದು ನನ್ನ ಕೊನೆಯ ಒಲಿಂಪಿಕ್ಸ್ ಎಂದೇ ಆಡುತ್ತೇನೆ. ಆದರೆ, ನನ್ನ ತಂದೆ, ನನ್ನ ಸ್ನೇಹಿತರು ನನ್ನನ್ನು ಮತ್ತೊಂದು ಒಲಿಂಪಿಕ್ಸ್ ಆಡುವಂತೆ ಪ್ರೇರೇಪಿಸುತ್ತಾರೆ. ವಯಸ್ಸಿಗೂ ಆಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಂಖ್ಯೆ ಎಣಿಸುವಾಗ ಮಾತ್ರ ನಾವು ಸಂಖ್ಯೆಯನ್ನು ಪರಿಗಣಿಸಬಹುದು. ನನ್ನ ಪ್ರೀತಿಯ ಆಟವಾಗಿರುವ ಟೆನಿಸ್ ಅನ್ನು ದೇಶವನ್ನು ಪ್ರತಿನಿಧಿಸಿ ಆಡುವುದೆಂದರೆ, ಅದು ನನ್ನಲ್ಲಿ ಹೊಸ ಶಕ್ತಿಯನ್ನೇ ತುಂಬಿಬಿಡುತ್ತದೆ, ನನ್ನನ್ನು ಮತ್ತಷ್ಟು ಯುವಕನನ್ನಾಗಿಸುತ್ತದೆ. ವೃತ್ತಿ ಜೀವನದಲ್ಲಿ ಇದುವರೆಗೂ ನನ್ನ ಆಟದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿದೆ ಎಂದು ಅನಿಸಿಲ್ಲ. ಹೀಗಾಗಿ ಬ್ರೆಜಿಲ್ ಒಲಿಂಪಿಕ್ಸ್ ಆಡುವುದರಲ್ಲಿ ತಪ್ಪೇನಿದೆ. ಅದಕ್ಕಾಗಿ ಇನ್ನೂ ಸಮಯವಿದೆ, ಕಾದು ನೋಡಿ.
ಬಲಿಷ್ಠ ಆಟಗಾರರೊಂದಿಗೆ ಆಡಿರುವ ನೀವು ಈಗ ಯುವ ಆಟಗಾರರೊಂದಿಗೆ ಹೇಗೆ ಹೊಂದಿಕೊಳ್ಳುತ್ತಿದ್ದೀರಿ?
ನಾನು 16 ವರ್ಷದವನಾಗಿದ್ದಾಗ 1990ರಲ್ಲಿ ನಾನು ನನ್ನ ಮೊದಲ ಡೇವಿಸ್ ಕಪ್ ಪಂದ್ಯವನ್ನಾಡಿದ್ದೇನೆ. ಅಲ್ಲಿಂದ ಇದುವರೆಗೂ ವಿಭಿನ್ನ ವ್ಯಕ್ತಿತ್ವ ಹೊಂದಿದ ಹಲವಾರು ಆಟಗಾರರೊಂದಿಗೆ ಆಡಿದ್ದೇನೆ. ಅಲ್ಲದೆ ಈಗಾಗಲೇ 6 ಒಲಿಂಪಿಕ್ಸ್ ಆಡಿದ್ದೇನೆ. ನಾನು ಏನು ಮಾಡುತ್ತೇನೆ ಅದನ್ನು ನಾನು ಪ್ರೀತಿಸುತ್ತೇನೆ. ಹೀಗಾಗಿ ಹಿರಿಯರೊಂದಿಗಾಗಲಿ ಅಥವಾ ಕಿರಿಯ ಆಟಗಾರರೊಂದಿಗೆ ಆಗಲಿ ಆಡುವುದನ್ನು ನಾನು ಭಿನ್ನವಾಗಿ ಪರಿಗಣಿಸುವುದಿಲ್ಲ. ಮಾರ್ಟಿನಾ ನವ್ರಾಟಿಲೋವಾ ಅವರೊಂದಿಗೆ ಆಡಿದ್ದೇನೆ. ಅವರು 50 ವರ್ಷದವರೆಗೂ ಟೆನಿಸ್ ಆಡಿದ್ದು ನಿಮಗೆ ನೆನಪಿರಬಹುದು. ಹೀಗಾಗಿ ವಯಸ್ಸು ಆಡುವುದಕ್ಕೆ ಅಡ್ಡಿ ಬರುವುದಿಲ್ಲ.
ರಾಜಧಾನಿ ಎಕ್ಸ್ಪ್ರೆಸ್ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?
ರಾಜಧಾನಿ ಚಿತ್ರದಲ್ಲಿ ನಟಿಸಿದ್ದು ಒಂದು ಅದ್ಭುತ ಅನುಭವ ನೀಡಿತು. ನಾನು ಅಲ್ಲಿ ಅದ್ಭುತ ಸಿನಿಮಾ ತಾರೆಗಳನ್ನು ಭೇಟಿ ಮಾಡಿದೆ. ಮೊದಲ ಬಾರಿ ನಟಿಸುವುದು ಕಠಿಣವಾಗಿತ್ತು. ಒಟ್ಟಾರೆ ಇದೊಂದು ವಿಭಿನ್ನ ಅನುಭವವಾಗಿತ್ತು.
ಭವಿಷ್ಯದಲ್ಲಿ ಚಲಚಿತ್ರದತ್ತ ಗಮನ ಹರೀಸುತ್ತೀರಿ ಎಂಬ ವದಂತಿ ಇದೆ?
ಸದ್ಯಕ್ಕೆ ನಾನು ನನ್ನ ಟೆನಿಸ್ ವೃತ್ತಿಗೆ ಮರಳಿದ್ದೇನೆ. ಬಿಡುವಿಲ್ಲದ ಟೆನಿಸ್ ವೇಳಾಪಟ್ಟಿ ನನ್ನನ್ನು ಆವರಿಸಿಕೊಂಡಿದೆ. ಅದರತ್ತ ಗಮನಹರಿಸಿದ್ದೇನೆ. ಆದರೆ, ಅವಕಾಶ ಬಂದರೆ ಚಿತ್ರದಲ್ಲಿ ನಟಿಸಲು ನಾನು ಸದಾ ಸಿದ್ಧವಾಗಿದ್ದೇನೆ.
- ಮಲ್ಲಿಕಾರ್ಜುನ ಕರಿಯಪ್ಪನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

