ಅದೃಷ್ಟದ ನಿರೀಕ್ಷೆಯಲ್ಲಿ ಇಂಡೋನೇಷ್ಯಾ

ಬೆಂಗಳೂರು: ಏ.5 ರಿಂದ ಏ.7ರ ವರೆಗೆ ನಡೆಯಲಿರುವ ಏಷ್ಯಾ ಓಷಿಯಾನ್ ಡೇವಿಸ್ ಕಪ್ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಕ್ರೀಡಾಂಗಣ ಸಂಪೂರ್ಣ ಸಜ್ಜುಗೊಂಡಿದ್ದು, ಬಲಿಷ್ಠ ಭಾರತ ತಂಡವನ್ನು ಸೋಲಿಸಲು ಪ್ರವಾಸಿ ಇಂಡೋನೇಷ್ಯಾ ತಂಡ ಅದೃಷ್ಠದ ನಿರೀಕ್ಷೆಯಲ್ಲಿದೆ.
ಭಾರತ ತಂಡ ಬಲಿಷ್ಟವಾಗಿದೆ ಅದರ ಜತೆಗೆ ತಂಡದ ಪ್ರಮುಖ ಆಟಗಾರರು ತಂಡಕ್ಕೆ ವಾಪಸ್ಸಾಗಿರುವುದು ತಂಡದ ಬಲ ಹೆಚ್ಚಿಸಿದೆ.
ಆದರೆ ಕಣದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ನಾವು ಉತ್ತಮ ಫಲಿತಾಂಶವನ್ನು ಪಡೆಯಬಹುದು ಹಾಗಾಗಿ ನಾವು ಉತ್ತಮ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತೇವೆ. ಭಾರತ ತಂಡವನ್ನು ಮಣಿಸಲು ಬೇಕಾದ ಎಲ್ಲಾ ಪ್ರಯತ್ನವನ್ನು ನಡೆಸುತ್ತೇವೆ ಎಂದು ಇಂಡೋನೇಷ್ಯಾ ತಂಡದ ಆಟವಾಡದ ನಾಯಕ ಹೆನ್ರಿ ಸುಸಿಲೊ ಪ್ರಮೊನೊ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಯಾರು ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಸ್ಫರ್ಧಿಸಲಿದ್ದಾರೆ ಎಂಬುದನ್ನು ಇನ್ನು ನಿರ್ಧರಿಸಿಲ್ಲ, ಪಂದ್ಯ ಆರಂಭಕ್ಕು ಒಂದು ಗಂಟೆಗು ಮುನ್ನ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಇಂಡೋನೇಷ್ಯಾದ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ನಂ.1 ಸ್ಥಾನವನ್ನು ಗಳಿಸಿರುವ ಕ್ರಿಸ್ಟೋಫರ್ ರಂಕಟ್, ತಂಡದಲ್ಲಿನ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಿದ್ಧ. ಅಲ್ಲದೇ ತಂಡ ನನ್ನಿಂದ ಉತ್ತಮ ಪ್ರದರ್ಶನವನ್ನು ಎದುರು ನೋಡುತ್ತಿದ್ದು, ನನ್ನ ಪ್ರಯತ್ನವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಕೆಎಸ್ಎಲ್ಟಿಎ ಕ್ರೀಡಾಂಗಣದ ಕೋರ್ಟ್ ಬಗ್ಗೆ ಮಾತನಾಡಿದ ಕ್ರಿಸ್ಟೋಫರ್, ಇಲ್ಲಿನ ಕೋರ್ಟ್ ಹೆಚ್ಚು ಪುಟಿತವನ್ನು ಪಡೆಯುತ್ತಿದ್ದು ನನ್ನ ಆಟದ ಶೈಲಿಗೆ ಸೂಕ್ತವಾಗಿದೆ ಎಂದು ತಿಳಿಸಿದರು.
ಭಾರತದ ಯೂಕಿ ಬಾಂಬ್ರಿ ಈ ಹಿಂದೆ ನನಗೆ ಪ್ರಬಲ ಪೈಪೋಟಿಯನ್ನು ನೀಡಿದ್ದು, ಪಂದ್ಯ ಹೆಚ್ಚು ಕುತೂಹಲದಿಂದ ಕೂಡಿರಲಿದೆ ಎಂದು ಅಭಿಪ್ರಾಯಪಟ್ಟರು.
ಸಿದ್ಧತೆ ಪೂರ್ಣ: 28 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಡೇವಿಸ್ ಕಪ್ ಪಂದ್ಯಾವಳಿ ನಡೆಯಲಿದ್ದು, ಪಂದ್ಯಾವಳಿಗೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಯೋಜಕರಾದ ಸುಂದರ್ ರಾಜು, 28 ವರ್ಷಗಳ ಬಳಿಕ ಡೇವಿಸ್ ಕಪ್ ಬೆಂಗಳೂರಿಗೆ ಆಗಮಿಸಿದ್ದು, 3ನೇ ಬಾರಿಗೆ ಬೆಂಗಳೂರಿನಲ್ಲಿ ಡೇವಿಸ್ ಕಪ್ ಪಂದ್ಯಾವಳಿ ನಡೆಯುತ್ತಿದೆ. ಹಾಗಾಗಿ ಈ ಪಂದ್ಯಾವಳಿಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಈ ಪಂದ್ಯಾವಳಿ ಯಶಸ್ವಿಯಾಗಲಿದೆ ಎಂದು ತಿಳಿಸಿದರು.
ಆಟಗಾರರು ಮಧ್ಯಮ ವೇಗದ ಕೋರ್ಟ್ಗಳನ್ನು ಕೇಳಿದ ಹಿನ್ನಲೆಯಲ್ಲಿ ಅದಕ್ಕೆ ತಕ್ಕಂತೆ ಕೋರ್ಟ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಪಂದ್ಯಾವಳಿಯ ಆಯೋಜನೆಗೆ ರಾಜ್ಯ ಸರ್ಕಾರದಿಂದ ಉತ್ತಮ ನೆರವು ದೊರೆತಿದ್ದು, ಪಂದ್ಯಾವಳಿ ವೇಳೆ ಭದ್ರತೆಗಾಗಿ ಪೊಲೀಸ್ ಆಯುಕ್ತರ ಜತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ: ಡೇವಿಸ್ ಕಪ್ನಲ್ಲಿ ಭಾರತ ತಂಡದ ಪರ ಉತ್ತಮ ಸಾಧನೆ ಮಾಡಿರುವ ಆನಂದ್ ಅಮೃತ್ ರಾಜ್, ರಮೇಶ್ ಕೃಷ್ಣನ್, ರಾಮನಾಥ್ ಕೃಷ್ಣನ್ ಮತ್ತು ಮಹೇಶ್ ಭೂಪತಿ ಅವರಿಗೆ ಏ.6 ರಂದು ಸನ್ಮಾನ ಮಾಡಲಾಗುವುದು ಎಂದು ಸುಂದರ್ ರಾಜು ತಿಳಿಸಿದರು.
ಏ.6 ರಂದು ಡೇವಿಸ್ ಕಪ್ನ ಡಬಲ್ಸ್ ವಿಭಾಗದ ಪಂದ್ಯಗಳು ಆರಂಭವಾಗುವ ಮುನ್ನ ಈ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


