ಕ್ರೀಡೆ

ಗುರುಸಾಯಿ ದತ್, ಪವಾರ್‌ಗೆ ಸೋಲು

Published On :

ಸಿಡ್ನಿ: ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಬುಧವಾರದ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಮೂರನೇ ಸುತ್ತನ್ನು ಪ್ರವೇಶಿಸಿದ್ದ ಭಾರತದ ಗುರುಸಾಯಿದತ್ ಅವರು ಗುರುವಾರ ಪರಾಭವಗೊಂಡರು. ಮೂರನೇ ಸುತ್ತನ್ನು ಪ್ರವೇಶಿಸಿದ್ದ ಮತ್ತೊಬ್ಬ ಆಟಗಾರ ಆನಂದ್ ಪವಾರ್ ಅವರೂ ಗುರುವಾರದ ಪಂದ್ಯಾವಳಿಯಲ್ಲಿ ಪರಾಭವಗೊಂಡು, ಟೂರ್ನಿಯಿಂದ ಆಚೆ ನಡೆದಿದ್ದಾರೆ.
ಗುರುಸಾಯಿದತ್ ಅವರು ಮಲೇಷ್ಯಾದ ಲೀ ಚೋಂಗ್ ವೈ ಅವರ ವಿರುದ್ಧ 10-21, 21-18, 15-21 ಅಂತರದಲ್ಲಿ ಸೋಲು ಕಂಡರೆ, ಪವಾರ್ ಅವರು ಮಲೇಷ್ಯಾದವರೇ ಆದ ವೈ ಫೆಂಗ್ ಚೋಂಗ್ ವಿರುದ್ಧ 19-21, 15-21 ಅಂತರದಲ್ಲಿ ಪರಾಭವಗೊಂಡರು.
ಪಂದ್ಯಾವಳಿಯ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಕಣಕ್ಕಿಳಿದಿದ್ದ ಇತರ ಭಾರತೀಯ ಆಟಗಾರರು ಸೋಲು ಈಗಾಗಲೇ ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿದ್ದಾರೆ.  
ಗುರುಸಾಯಿದತ್ ಹಾಗೂ ಲೀ ಚೋಂಗ್ ವೈ ಅವರ ನಡುವಿನ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. ಮೊದಲ ಗೇಮ್‌ನಲ್ಲಿ ಗುರುಸಾಯಿದತ್ ಪರಾಭವಗೊಂಡರೂ, ಎರಡನೇ ಸೆಟ್‌ನಲ್ಲಿ ಉತ್ತಮ ಎದುರೇಟು ನೀಡಿ ಭಾರೀ ಅಂತರದಲ್ಲಿ ಗೆಲುವುನ್ನು ಕಂಡುಕೊಂಡರು.
ಮೂರನೇ ಸೆಟ್‌ನಲ್ಲಿ ಉತ್ತಮವಾಗಿ ಆಡಿದರು. ಒಂದು ಹಂತದಲ್ಲಿ ಲೀ ಅವರೊಂದಿಗೆ 7-7ರ ಸಮಬಲ ಸಾಧಿಸಿದ್ದರು. ಆದರೆ, ನಿಧಾನವಾಗಿ ಲೀ ಅವರ ಕೈ ಮೇಲಾಯಿತು. ಅಂತಿಮವಾಗಿ, ಲೀ ಅವರೇ ಮೂರನೇ ಗೇಮ್‌ನಲ್ಲಿ ಜಯ ಗಳಿಸುವ ಮೂಲಕ, ಪಂದ್ಯದಲ್ಲಿ ಜಯಭೇರಿ ಬಾರಿಸಿದರು.
ಅತ್ತ, ಪವಾರ್ ಹಾಗೂ ವೈ ಫೆಂಗ್ ನಡುವಿನ ಪಂದ್ಯದಲ್ಲಿ ಪವಾರ್ ಪಂದ್ಯ ಗೆಲ್ಲಲು ಸಾಕಷ್ಟು ಶ್ರಮವಹಿಸಿದರಾದರೂ, ಜಯ ಅವರ ಕೈಗೆ ಸಿಗಲಿಲ್ಲ. ಮೊದಲ ಗೇಮ್‌ನ ಒಂದು ಹಂತದಲ್ಲಿ 11-17 ಅಂತರದ ಹಿನ್ನಡೆ ಪಡೆದುಕೊಂಡಿದ್ದ ಅವರು, ವೈ ಫೆಂಗ್‌ಗೆ ತೀವ್ರ ಪೈಪೋಟಿ ನೀಡಿದರು. ಆದರೆ, ಅಂತಿಮವಾಗಿ ವೈ ಫೆಂಗ್ ಅವರೇ ಈ ಸೆಟ್‌ನಲ್ಲೂ ಗೆಲುವು ಸಾಧಿಸಿದರು.
ನಂತರದ ಸೆಟ್‌ನಲ್ಲೂ ಪವಾರ್ ಉತ್ತಮವಾಗಿ ಪ್ರತಿರೋಧ ತೋರಿದರಾದರೂ, ಅಂತಿಮವಾಗಿ ಜಯ ವೈ ಫೆಂಗ್ ಪಾಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.