ಮಿಂಚಿದ ಸೋಮ್, ಭಾಂಬ್ರಿ
ಬೆಂಗಳೂರು: ಸೋಮ್ದೇವ್ ದೇವ್ವರ್ಮನ್ ಮತ್ತು ಯೂಕಿ ಭಾಂಬ್ರಿ ರಭಸಕ್ಕೆ ಎದುರಾಳಿಗಳು ನಿರುತ್ತರ, ಅಭಿಮಾನಿಗಳ ಅಬ್ಬರ ಮುಗಿಲೆತ್ತರ, ಭಾರತಕ್ಕೆ ವಿಜಯದ ಉತ್ಸಾಹ.
ಇದು ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಇಂಡೋನೇಷ್ಯಾ ವಿರುದ್ಧ ನಡೆಯುತ್ತಿರುವ ಏಷ್ಯಾ ಓಶೇನಿಯಾ ಮೊದಲ ಹಂತದ ಡೇವಿಸ್ ಕಪ್ ಪಂದ್ಯಾವಳಿಯ ಮೊದಲ ದಿನದ ಜಲಕ್. ಶುಕ್ರವಾರ ನಡೆದ ಮೊದಲ ಸಿಂಗಲ್ಸ್ ಪಂದ್ಯಗಳಲ್ಲಿ ನಿರೀಕ್ಷೆಯಂತೆ ಜಯ ಸಾಧಿಸಿದ ಸೋಮ್ದೇವ್ ಮತ್ತು ಯೂಕಿ ಭಾಂಬ್ರಿ ಭಾರತಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟರು.
ಸೋಮ್ದೇವ್ ದೇವ್ವರ್ಮನ್ 90 ನಿಮಿಷ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಇಂಡೋನೇಷ್ಯಾದ ವಿಸ್ನು ಆದಿ ನುಗ್ರೊಹೊ ಅವರನ್ನು 6-1, 6-2, 6-2 ಅಂತರದಿಂದ ಪರಾಭವಗೊಳಿಸಿದರು.
ಪಂದ್ಯದಲ್ಲಿ ತಮ್ಮ ಅನುಭವ ಮತ್ತು ಕೌಶಲ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು, ಮೊದಲ ಸೆಟ್ನಿಂದಲೇ ಅದ್ಭುತ ಪ್ರದರ್ಶನ ನೀಡಿದ ಸೋಮ್ದೇವ್ ಎದುರಾಳಿಯನ್ನು ಮಣಿಸುವಲ್ಲಿ ಯಶಸ್ವಿಯಾದರು. ಎದುರಾಳಿ ವಿಸ್ನು ಸಹ ತಿರುಗೇಟು ನೀಡಲು ಯತ್ನಿಸಿದರು. ಆದರೆ, ಅವರ ಪ್ರಯತ್ನ ಬಲಿಷ್ಠ ಸೋಮ್ದೇವ್ ಎದುರು ನಡೆಯಲಿಲ್ಲ.
ಇನ್ನು ದ್ವಿತೀಯ ಪಂದ್ಯದಲ್ಲಿ ಯೂಕಿ ಭಾಂಬ್ರಿಗೆ ಎದುರಾಳಿ ಕ್ರಿಸ್ಟೊಫರ್ ರುಂಗ್ಕತ್ ಕೊಂಚ ಪ್ರತಿರೋಧ ಒಡ್ಡಿದರು. ಆದರೆ, ಚಣಾಕ್ಷ ಪ್ರದರ್ಶನ ನೀಡಿದ ಭಾಂಬ್ರಿ ಎದುರಾಳಿಯನ್ನು 6-3, 6-2, 6-2 ಸೆಟ್ಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ಮೊದಲ ಸೆಟ್ನಲ್ಲಿ ಕ್ರಿಸ್ಟೊಫರ್ ಬಿರುಸಿನ ಆಟಕ್ಕೆ ಮುಂದಾದರು. ಆದರೆ, ಅಂತಿಮವಾಗಿ ಕೈಚೆಲ್ಲಿದ ನಂತರವೂ ವೈಫಲ್ಯ ಕಂಡಿದ್ದು, ಭಾರತ ಮುನ್ನಡೆ ಕಂಡುಕೊಳ್ಳಲು ನೆರವಾಯಿತು.
ಬೌನ್ಸಿಯಾಗಿದ್ದ ಕೋರ್ಟ್ನಲ್ಲಿ ಆಟಗಾರರು ಹೊಡೆದ ಶಾಟ್ಗಳು ಲೈನ್ನ ಒಳಗೆ ಬೀಳುತ್ತಿದ್ದಿದು, ಪಂದ್ಯದ ಮೊದಲ ಸೆಟ್ನಲ್ಲೇ ಸ್ಪಷ್ಟವಾಗಿಯಿತು.
ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಸನಮ್ ಸಿಂಗ್ ಹೋರಾಟಕ್ಕಿಳಿಯುವ ಸಾಧ್ಯತೆಗಳಿವೆ.
ಕೈಕೊಟ್ಟ ಹೊನಲು ಬೆಳಕು ವ್ಯವಸ್ಥೆ
ಜನರನ್ನು ಆಕರ್ಷಿಸಬೇಕು ಎಂಬ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಿದ್ದ ರಾಜ್ಯ ಟೆನಿಸ್ ಸಂಸ್ಥೆ ಹೊನಲು ಬೆಳಕಿನಲ್ಲಿ ಆಡಿಸಲು ಯೋಜಿಸಿತ್ತು. ಆದರೆ, ಮೊದಲ ಸಿಂಗಲ್ಸ್ ಪಂದ್ಯಕ್ಕೆ ಇದ್ದಷ್ಟು ಪ್ರೇಕ್ಷಕರೂ, ದ್ವಿತೀಯ ಪಂದ್ಯಕ್ಕೆ ಆಗಮಿಸಲಿಲ್ಲ. ಹೀಗಾಗಿ ಪಂದ್ಯ ಆಯೋಜಕರ ಹೊನಲು ಬೆಳಕು ಉದ್ದೇಶ ಸಂಪೂರ್ಣ ವಿಫಲವಾಗಿದ್ದು, ಎದ್ದು ಕಾಣುತ್ತಿತ್ತು. ಎದುರಾಳಿ ತಂಡ ದುರ್ಬಲವಾಗಿದೆ, ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿಲ್ಲವಾದ್ದರಿಂದ ಜನರು ಪಂದ್ಯ ನೋಡಲು ಆಗಮಿಸುತ್ತಿಲ್ಲ ಎಂಬ ಮಾತುಗಳೂ ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿಬಂದವು. ಶನಿವಾರವಾದರೂ, ಪಂದ್ಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ ಪಂದ್ಯಾವಳಿಯ ಸಂಘಟಕರು.
ಪಂದ್ಯ ವೀಕ್ಷಿಸಿದ ಭೂಪತಿ- ಬೋಪಣ್ಣ
ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಮತ್ತು ಯುವ ಆಟಗಾರ ರೋಹನ್ ಬೋಪಣ್ಣ ಹಾಗೂ ವಿಜಯ್ ಅಮೃತ್ರಾಜ್ ಸೇರಿದಂತೆ ಹಲವು ಟೆನಿಸ್ ಆಟಗಾರರು ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಗ್ಯಾಲರಿಯಲ್ಲಿ ಕುಳಿತಿದ್ದು ಭೂಪತಿ ಮತ್ತು ಬೋಪಣ್ಣಗೆ ಅಭಿಮಾನಿಗಳು ಅಟೋಗ್ರಾಫ್ಗಾಗಿ ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

