ಕ್ರೀಡೆ

ಆರ್‌ಸಿಬಿಗೆ ಇಂದು ಸನ್‌ರೈಸರ್ಸ್ ಸವಾಲು

Published On :

ಹೈದರಾಬಾದ್: ತನ್ನ ಐಪಿಎಲ್ ಅಭಿಯಾನವನ್ನು ಗೆಲುವಿನ ಮೂಲಕ ಆರಂಭಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಭಾನುವಾರ ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡವನ್ನು ಎದುರಿಸಲಿದೆ. ಪುಣೆ ಎದುರು ಅದೃಷ್ಟದ ಜಯ ದಾಖಲಿಸಿದ ಸನ್‌ರೈಸರ್ಸ್‌ಗೆ ಆರ್‌ಸಿಬಿ ವಿರುದ್ಧದ ಪಂದ್ಯ ಮತ್ತೊಂದು ಅಗ್ನಿಪರೀಕ್ಷೆಯಾಗಲಿದೆ.
ಎರಡೂ ತಂಡಗಳೂ ತಮ್ಮ ಮೊದಲ ಪಂದ್ಯಗಳಲ್ಲಿ ಜಯಗಳಿಸಿದ್ದು, ಉತ್ಸಾಹದಲ್ಲಿವೆ. ಅದೇ ಉತ್ಸಾಹದಲ್ಲೇ ಎರಡೂ ತಂಡಗಳು ಕಣಕ್ಕಿಳಿಯಲಿವೆ.
ಪುಣೆ ವಿರುದ್ಧ ತಾನು ಆಡಿದ್ದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ಗೆ ಸಿಕ್ಕಿದ್ದು ಅದೃಷ್ಟದ ಜಯವೆಂದೇ ಹೇಳಿದರೆ, ಅದು ತಪ್ಪಾಗಲಿಕ್ಕಿಲ್ಲ. ಮೊದಲು ಬ್ಯಾಟ್ ಮಾಡಿ ಕೇವಲ ಅಲ್ಪ ಮೊತ್ತ ಪೇರಿಸಿದ್ದ ಸನ್‌ರೈಸರ್ಸ್, ಪುಣೆಗೆ ಸುಲಭ ಗುರಿಯನ್ನೇ ನೀಡಿತ್ತು. ಆದರೆ, ಈ ಅವಕಾಶವನ್ನು ಕೈಚೆಲ್ಲಿದ್ದು ಪುಣೆ ತಂಡವೇ. ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡ ಅದು ಪಂದ್ಯವನ್ನು ಸೋತಿತು. ಹೀಗೆ, ಚೊಚ್ಚಲ ಐಪಿಎಲ್ ಪಂದ್ಯದಲ್ಲೇ 22 ರನ್‌ಗಳ ದೊಡ್ಡ ಜಯ ಸಂಪಾದಿಸಿದ ಸನ್‌ರೈಸರ್ಸ್‌ಗೂ ಅದು ಅಚ್ಚರಿಯ ಗೆಲುವು. ಹಾಗಾಗಿ, ಮೊದಲ ಪಂದ್ಯದ ಗೆಲುವು ಕೇವಲ ಆಕಸ್ಮಿಕ ಎಂಬಂತಾಗಿರುವುದರಿಂದ, ಆ ತಂಡಕ್ಕೆ ಆರ್‌ಸಿಬಿ ವಿರುದ್ಧದ ಪಂದ್ಯ ನಿಜಕ್ಕೂ ಅಗ್ನಿಪರೀಕ್ಷೆಯಂತಾಗಲಿದೆ.
ಅತ್ತ, ಬೆಂಗಳೂರು ತಂಡವೂ ತನ್ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದೂ ಒಂದರ್ಥದಲ್ಲಿ ಅದೃಷ್ಟದ ಜಯ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕೇವಲ 2 ರನ್‌ಗಳ ಸಂಪಾದಿಸಿದ ಅದು ತನ್ನ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ಆದರೂ, ಕ್ರಿಸ್ ಗೇಯ್ಲ್ ಅವರ ಅಜೇಯ 92 ರನ್‌ಗಳ ಸಹಾಯಿಂದಲೇ ಮುಂಬೈ ಒಂದು ಸ್ಪರ್ಧಾತ್ಮಕ ಮೊತ್ತವನ್ನು ನೀಡಲು ಸಾಧ್ಯವಾಗಿದ್ದು. ಅಂದೇನಾದರೂ, ಕ್ರಿಸ್ ಗೇಯ್ಲ್ ಕೈಕೊಟ್ಟಿದ್ದರೆ, ಆರ್‌ಸಿಬಿ ಹೀನಾಯ ಸೋಲು ಅನುಭವಿಸುತ್ತಿತ್ತು.
ಎರಡೂ ತಂಡಗಳ ಮೊದಲ ಪಂದ್ಯಗಳನ್ನು ಗಮನಿಸಿದರೆ, ಬ್ಯಾಟಿಂಗ್ ವಿಭಾಗದಲ್ಲಿ ಕೊರತೆ ಎದ್ದು ಕಾಣುತ್ತಿದೆ. ಪದೇ ಪದೇ ಕ್ರಿಸ್ ಗೇಯ್ಲ್ ಮೇಲೆ ತಂಡ ಅವಲಂಬಿಸುತ್ತಿರುವುದು ಈ ಬಾರಿಯ ಐಪಿಎಲ್‌ನಲ್ಲೂ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಕುಸಿದಿದ್ದ ಆರ್‌ಸಿಬಿ ಇನಿಂಗ್ಸ್ ಅನ್ನು ಮೇಲೆತ್ತಿದ್ದೇ ಕ್ರಿಸ್‌ಗೇಯ್ಲ್.
ಹಾಗಂತ ಆರ್‌ಸಿಬಿ ಬ್ಯಾಟಿಂಗ್ ಪಡೆಯೇನೂ ದುರ್ಬಲವೇನಲ್ಲ. ವಿರಾಟ್ ಕೊಹ್ಲಿ, ತಿಲಕರತ್ನೆ ದಿಲ್ಶಾನ್, ಡೇನಿಯಲ್ ಕ್ರಿಶ್ಚಿಯನ್ ಹಾಗೂ ಡಿ ವಿಲಿಯರ್ಸ್ ಅವರಂಥ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಆರ್‌ಸಿಬಿಯಲ್ಲಿದ್ದಾರೆ. ಆದ್ದರಿಂದ, ಗೇಯ್ಲ್ ಮೇಲಷ್ಟೇ ಅವಲಂಬಿತರಾಗದೇ ಎಲ್ಲರೂ ಉತ್ತಮ ಪ್ರದರ್ಶನ ನೀಡಿದಲ್ಲಿ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತದೆ.
ಇನ್ನು, ಬೌಲಿಂಗ್ ಪಡೆಯೂ ಸದೃಢವಾಗಿದೆ. ಜಹೀರ್ ಖಾನ್ ಅವರ ಅಲಭ್ಯತೆ ತಂಡವನ್ನು ಕಾಡಿದ್ದರೂ, ಆರ್. ವಿನಯ್ ಕುಮಾರ್, ರವಿ ರಾಮ್‌ಪಾಲ್, ಮುತ್ತಯ್ಯ ಮುರಳೀಧರನ್, ಡೇನಿಯಲ್ ವೆಟ್ಟೋರಿ ಹಾಗೂ ಮುರಳಿ ಕಾರ್ತಿಕ್ ಇದ್ದಾರೆ.
ಇನ್ನು, ಹೈದರಾಬಾದ್‌ನ ಬ್ಯಾಟಿಂಗ್ ಪಡೆಯಲ್ಲಿ ಶಿಖರ್ ಧವನ್ ಹಾಗೂ ಜೆಪಿ ಡ್ಯುಮಿನಿ ಅವರಿಬ್ಬರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಆದರೆ, ನಾಯಕ ಕುಮಾರ ಸಂಗಕ್ಕಾರ, ಪಾರ್ಥೀವ್ ಪಟೇಲ್, ಕೆಮೆರೂನ್ ವೈಟ್, ತಿಸಾರಾ ಪರೇರಾ ಅವರುಳ್ಳ ಬ್ಯಾಟಿಂಗ್ ವಿಭಾಗ ಒಂದು ಸ್ಪರ್ಧಾತ್ಮಕ ಮೊತ್ತವನ್ನು ನೀಡಬಲ್ಲ ಛಾತಿ ಹೊಂದಿದೆ. ಆದರೆ, ಗಟ್ಟಿಯಾಗಿ ನಿಂತು ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕಷ್ಟೇ.
ಆದರೆ, ಆರ್‌ಸಿಬಿಯನ್ನು ಎದುರಿಸಲು ಅಷ್ಟು ಮಾತ್ರ ಸಾಕಾಗಲಿಕ್ಕಿಲ್ಲ. ಆರ್‌ಸಿಬಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಬೌಲರ್‌ಗಳೂ ಶ್ರಮಪಡಬೇಕಿದೆ. ಏಕೆಂದರೆ, ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲ ಕ್ರಿಸ್ ಗೇಯ್ಲ್ ಅವರನ್ನು ಕಟ್ಟಿಹಾಕುವುದು ಅಷ್ಟು ಸುಲಭದ ಮಾತಲ್ಲ. ಎಂಥಾ ಬೌಲಿಂಗ್ ಆಕ್ರಮಣವನ್ನೂ ಛಿದ್ರ ಮಾಡುವ ತಾಕತ್ತಿರುವ ಗೇಯ್ಲ್ ಅವರೇ ಆರ್‌ಸಿಬಿಯ ಪ್ರಮುಖ ಶಕ್ತಿ.
ಹಾಗೆ ನೋಡಿದರೆ, ಸನ್‌ರೈಸರ್ಸ್ ತಂಡದ ಬೌಲಿಂಗ್ ಚೆನ್ನಾಗಿದೆ. ಪುಣೆ ವಿರುದ್ಧದ ಮೊದಲ ಪಂದ್ಯದಲ್ಲಿ ಬೌಲರ್‌ಗಳ ಶ್ರಮವೇ ಆ ತಂಡಕ್ಕೆ ಜಯ ತಂದಿದ್ದು. ವಿಶ್ವದ ನಂಬರ್‌ಒನ್ ಬೌಲರ್ ಡೇಲ್ ಸ್ಟೇಯ್ನ್ ಅವರು ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ. ಅವರೊಂದಿಗೆ ಇಶಾಂತ್ ಶರ್ಮಾ, ತಿಸರಾ ಪೆರೇರಾ, ಅಮಿತ್ ಮಿಶ್ರಾ ಅವರೂ ಇದ್ದಾರೆ. ಪುಣೆ ವಿರುದ್ಧದ ಪಂದ್ಯದಲ್ಲಿ 19 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ, ಪಂದ್ಯಶ್ರೇಷ್ಠ ಗೌರವ ಪಡೆದಿದ್ದ ಅಮಿತ್ ಮಿಶ್ರಾ ಅವರ ಪ್ರದರ್ಶನವನ್ನು ಆರ್‌ಸಿಬಿ ಪಾಳಯದಲ್ಲಿ ಕೊಂಚ ಎಚ್ಚರಿಕೆಯ ಸಂದೇಶವನ್ನು ನೀಡಿರಲಿಕ್ಕೂ ಸಾಕು.
ಸಂಭಾವ್ಯ ಆಟಗಾರರು

ಆರ್‌ಸಿಬಿ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್‌ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಯ್ಲ್, ಮೊಯ್ಸಿಸ್ ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್‌ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪಿ.ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್‌ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೋಹೈಲ್, ಸೈಯದ್ ಮಹಮದ್, ಸೌರಬ್ ತಿವಾರಿ, ಜಯ್‌ದೇವ್ ಉನದ್ಕತ್, ಡೇನಿಯಲ್ ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.
ಸನ್‌ರೈಸರ್ಸ್ ಹೈದರಾಬಾದ್: ಕೆ. ಸಂಗಕ್ಕಾರ (ನಾಯಕ), ಅಕ್ಷತ್ ರೆಡ್ಡಿ, ಆಶೀಶ್ ರೆಡ್ಡಿ, ಡೇಲ್ ಸ್ಟೇಯ್ನ್, ಪಾಥೀವ್ ಪಟೇಲ್, ಕೆಮೆರೂನ್ ವೈಟ್, ಹನುಮ ವಿಹಾರಿ, ತಿಸಾರಾ ಪೆರೇರಾ, ರವಿ ತೇಜ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ನಥಾನ್ ಮೆಕಲಂ, ಅಂಕಿತ್ ಶರ್ಮಾ, ಆನಂದ್ ರಾಜನ್, ಬಿಪ್ಲಬ್ ಪದ್ಮನಾಭನ್, ಕ್ವಿಂಟನ್ ಡಿ ಕಾಕ್, ಸಚಿನ್ ರಾಣಾ, ಶಿಖರ್ ಧವನ್, ಸಂದೀಪ್ ತ್ಯಾಗಿ, ಟಿ. ಸರ್ಗುನನ್, ವೀರ್ ಪ್ರತಾಪ್ ಸಿಂಗ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.