ಕಿಂಗ್ಸ್ಗಳ ನಡುವಿನ ಕದನಕ್ಕೆ ಮೊಹಾಲಿ ರೆಡಿ

ಮೊಹಾಲಿ: ಕಳೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಬುಧವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ತನ್ನ ಆರಂಭಿಕ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಗಾಯಗೊಂಡಿರುವ ಸಿಂಹದಂತಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಪಂಜಾಬ್ ತಂಡವನ್ನು ಅದ್ಯಾವ ರೀತಿ ಎದುರಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಎರಡೂ ತಂಡಗಳ ಸಾಮರ್ಥ್ಯವನ್ನು ತಕ್ಕಡಿಯಲ್ಲಿ ತೂಗಿದರೆ, ಚೆನ್ನೈ ಸೂಪರ್ ಕಿಂಗ್ಸ್ನ ಸಾಮರ್ಥ್ಯವೇ ತುಸು ಹೆಚ್ಚು. ಏಕೆಂದರೆ, ಆ ತಂಡದಲ್ಲಿ ಇತ್ತೀಚೆಗೆ ನಡೆದ ಭಾರತ -ಆಸ್ಟ್ರೇಲಿಯಾ ಸರಣಿಯಲ್ಲಿ ಮಿಂಚಿದ ನಾಲ್ವರು ಆಟಗಾರರು ಇದ್ದಾರೆ. ಈ ತಂಡಕ್ಕೆ ಹೋಲಿಸಿದರೆ, ಕಿಂಗ್ಸ್ ಇಲೆವೆನ್ ತಂಡದಲ್ಲಿ ಅನನುಭವಿಗಳೇ ಹೆಚ್ಚು. ಹಾಗಾಗಿ, ಆ್ಯಡಮ್ ಗಿಲ್ಕ್ರಿಸ್ಟ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಇಲ್ಲಿನ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ವಿರುದ್ಧ ಗೆಲ್ಲಲು ಹೆಚ್ಚು ಶ್ರಮಪಡಬೇಕು. ಕಳೆದ ಪಂದ್ಯದಲ್ಲಿ ಮೊನಚು ಬೌಲಿಂಗ್ ಪ್ರದರ್ಶಿಸಿದ್ದ ತಮ್ಮ ತಂಡದ ಬೌಲರ್ಗಳ ಮೇಲೇ ಈ ಬಾರಿಯೂ ಗಿಲ್ಕ್ರಿಸ್ಟ್ ಹೆಚ್ಚು ಭರವಸೆ ಹೊಂದಿದ್ದಾರೆ. ವೇಗಿ ಪ್ರವೀಣ್ ಕುಮಾರ್ ಅವರು ಕಳೆದ ಪಂದ್ಯದಲ್ಲಿ ಚೆನ್ನೈ ತಂಡದ ಎರಡು ಪ್ರಮುಖ ವಿಕೆಟ್ಗಳನ್ನು ಕಬಳಿಸಿದ್ದರು. ಅಪಾಯಕಾರಿ ಬ್ಯಾಟ್ಸ್ಮನ್ ರಾಸ್ ಟೇಲರ್ ಅವರ ವಿಕೆಟ್ ಪಡೆದಿದ್ದರು. ಇವರೊಂದಿಗೆ, ರಿಯಾನ್ ಹ್ಯಾರಿಸ್, ಪರ್ವಿಂದರ್ ಆವಾನಾ, ಲೆಗ್ ಸ್ಪಿನ್ನರ್ ಫಿಯೂಶ್ ಚಾವ್ಲಾ ಅವರು ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರಗಳಾಗಿವೆ. ಇನ್ನು, ತಂಡದಲ್ಲಿರುವ ಆಲ್ರೌಂಡರ್ ಪಾಕಿಸ್ತಾನದ ಅಜರ್ ಮೆಹಮೂದ್ ಅವರೂ ಕಳೆದ ಪ್ರಮುಖ ಆಧಾರ ಸ್ತಂಭಗಳಲ್ಲೊಬ್ಬರು. ಕಳೆದ ಪಂದ್ಯದಲ್ಲಿ ಅವರು ಉತ್ತಮ ಆಟ ಪ್ರದರ್ಶಿಸಿದ್ದಾರೆ. ಅವರೊಂದಿಗೆ, ಡೇವಿಡ್ ಹಸ್ಸಿ ಅವರೂ ತಂಡದಲ್ಲಿದ್ದಾರೆ.
ಇನ್ನು, ಬ್ಯಾಟಿಂಗ್ ವಿಭಾಗದಲ್ಲಿ ಯುವ ಆಟಗಾರ ಮನದೀಪ್ ಸಿಂಗ್ ಭರವಸೆ ಮೂಡಿಸಿದ್ದಾರೆ. ಇವರೊಂದಿಗೆ ಮತ್ತೊಬ್ಬ ಆಟಗಾರ ಮನನ್ ವೊಹ್ರಾ ಕೂಡ ತಾವೊಬ್ಬ ಉತ್ತಮ ಬ್ಯಾಟ್ಸ್ಮನ್ ಎಂಬುದನ್ನು ತಮ್ಮ ಮೊದಲ ಪಂದ್ಯದಲ್ಲೇ ತೋರಿಸಿದ್ದಾರೆ. ಕಳೆದ ಪಂದ್ಯದಲ್ಲಿ 28 ಎಸೆತಗಳಿಂದ ಅವರು 43 ರನ್ ಗಳಿಸಿದ್ದರು.
ಆದರೆ, ಇವಿಷ್ಟೇ ಅಂಶಗಳು ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಡಲಾರದು. ಪಂದ್ಯದಿಂದ ಪಂದ್ಯಕ್ಕೆ ಪರಿಸ್ಥಿತಿಗಳು ವಿಭಿನ್ನವಾಗಿರುತ್ತವೆ. ಮೊದಲ ಪಂದ್ಯದಲ್ಲಿ ಪುಣೆ ತಂಡವನ್ನು ಮಣಿಸಿದ ಕೂಡಲೇ, ಚೆನ್ನೈ ತಂಡವನ್ನೂ ಅದು ಹಾಗೆಯೇ ಮಣಿಸುತ್ತದೆಂದಲ್ಲ. ಹಾಗಾಗಿಯೇ, ಬಲಿಷ್ಠ ತಂಡವಾದ ಚೆನ್ನೈ ತಂಡವನ್ನು ಎದುರಿಸಲು ಲೇಮನ್ ಅವರ ಮಾರ್ಗದರ್ಶನದಲ್ಲಿ ತಯಾರಾಗುತ್ತಿರುವ ಕಿಂಗ್ಸ್ ಪಡೆ ಹೆಚ್ಚು ಜಾಗರೂಕತೆಯ ಹೆಜ್ಜೆ ಇಡಬೇಕಿದೆ.
ಅತ್ತ, ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಗೆಲುವಿಗಾಗಿ ಕಾತರಿಸುತ್ತಿದೆ. ಕಳೆದ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ (26 ಎಸೆತದಲ್ಲಿ 51 ರನ್)ಯವರ ಆಕ್ರಮಣಕಾರಿ ಬ್ಯಾಟಿಂಗ್ನ ಹೊರತಾಗಿಯೂ ತಂಡ ಸೋಲು ಕಂಡಿತ್ತು. ಆದರೂ, ಧೋನಿ ಅವರ ಅದ್ಭುತ ಫಾರ್ಮ್ ಎದುರಾಳಿ ತಂಡಗಳ ಅರಿವಿಗೆ ಬಂದಿರುವುದಂತೂ ನಿಜ. ಇನ್ನು, ಬುಧವಾರದ ಪಂದ್ಯದಲ್ಲಿ ಸಿಎಸ್ಕೆ ಪರವಾಗಿ ಇನಿಂಗ್ಸ್ ಆರಂಭಿಸಲಿರುವ ಮೈಕಲ್ ಹಸ್ಸಿ ಹಾಗೂ ಮುರಳಿ ವಿಜಯ್ ಇಬ್ಬರೂ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಬಹುದು. ಮಧ್ಯಮ ಕ್ರಮಾಂಕದಲ್ಲಿ, ಡ್ವೇನ್ ಬ್ರಾವೊ ಹಾಗೂ ಸುರೇಶ್ ರೈನಾ ಅವರು ಇನಿಂಗ್ಸ್ಗೆ ಶಕ್ತಿ ತುಂಬಬಲ್ಲರು. ಬದ್ರಿನಾಥ್ ಹಾಗೂ ರವೀಂದ್ರ ಜಡೇಜಾ - ಇಬ್ಬರೂ ತಂಡದ ಕೊನೆಯ ಹಂತದ ಬ್ಯಾಟ್ಸ್ಮನ್ಗಳಾಗಿದ್ದಾರೆ.
ಮಾರ್ಕೆಲ್ ಆಡುವ ಸಾಧ್ಯತೆ: ಗಾಯದ ಸಮಸ್ಯೆಯಿಂದ ಚೆನ್ನೈ ಸೂಪರ್ ಕಿಂಗ್ಸ್ನ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಅಲ್ಬಿ ಮಾರ್ಕೆಲ್, ಸೋಮವಾರವಷ್ಟೇ ತಂಡವನ್ನು ಸೇರಿಕೊಂಡಿದ್ದಾರೆ. ಹಾಗಾಗಿ, ಬುಧವಾರದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆಗಳಿವೆ. ಬೌಲಿಂಗ್ ವಿಭಾಗದಲ್ಲಿ, ಆಸ್ಟ್ರೇಲಿಯಾದ ಬೆನ್ ಲಿಂಗ್ಲಿನ್ ಹಾಗೂ ಅಂಕಿತ್ ರಜಪೂತ್ ಅವರಿದ್ದಾರೆ.
ಸಂಭಾವ್ಯ ತಂಡಗಳು
ಕಿಂಗ್ಸ್ ಇಲೆವೆನ್ ಪಂಜಾಬ್: ಆ್ಯಡಮ್ ಗಿಲ್ಕ್ರಿಸ್ಟ್, ಶಾನ್ ಮಾರ್ಷ್, ಡೇವಿಡ್ ಹಸ್ಸಿ, ಡೇವಿಡ್ ಆ್ಯಂಡ್ರೂ ಮಿಲ್ಲರ್, ರಿಯಾನ್ ಹ್ಯಾರಿಸ್, ಡಿಮಿಟ್ರಿ ಮಸ್ಕೆರೆನ್ಹ್ಯಾಸ್, ಅಜರ್ ಮೆಹಮೂದ್, ಪಿಯೂಶ್ ಚಾವ್ಲಾ, ಪ್ರವೀಣ್ ಕುಮಾರ್, ಮನದೀಪ್ ಸಿಂಗ್, ಸಿದ್ದಾರ್ಥ್ ಚಿಂಟಿಸ್, ನಿತಿನ್ ಸೈನಿ, ಸನ್ನಿ ಸಿಂಗ್, ಭಾರ್ಗವ್ ಭಟ್, ಬಿಪುಲ್ ಶರ್ಮಾ, ಪಾಲ್ ಚಂದ್ರಶೇಖರ್ ವಾಲ್ತಾಟಿ, ಲ್ಯೂಕ್ ಪ್ಯುಮರ್ಬ್ಯಾಚ್, ಮನ್ಪ್ರೀತ್ ಸಿಂಗ್ ಗೋನಿ, ಗುರ್ಕೀರತ್ ರೂಪಿಂದರ್ ಸಿಂಗ್, ಪರ್ವಿಂದರ್ ಆವಾನಾ, ರಾಜಗೋಪಾಲ್ ಸತೀಶ್.
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ, ಶ್ರೀಕಾಂತ್ ಅನಿರುದ್ಧ, ಬಾಬಾ ಅಪರಾಜಿತ್, ಆರ್.ಅಶ್ವಿನ್, ಎಸ್.ಬದ್ರಿನಾಥ್, ಡ್ವೇನ್ ಬ್ರಾವೊ, ಅಖಿಲ ಧನಂಜಯ, ಡುಪ್ಲಿಸೆಸ್, ಜಾಸನ್ ಹೊಲ್ಡರ್, ಬೆನ್ ಹಿಲ್ಫಾನಾಸ್, ಮೈಕ್ ಹಸ್ಸಿ, ಇಮ್ತಿಯಾಜ್ ಅಹಮದ್, ರವೀಂದ್ರ ಜಡೇಜಾ, ಶಡಬ್ ಜಕಾಟಿ, ಆರ್.ಕಾರ್ತಿಕೇಯನ್, ನುವಾನ್ ಕುಲಸೇಕರ, ಬೆನ್ ಲಾಹ್ಲಿನ್, ರೋನಿತ್ ಮೋರೆ, ಆಲ್ಬಿ ಮಾರ್ಕೆಲ್, ಕ್ರಿಸ್ ಮೊರಿಸ್, ಡರ್ಕ್ ನ್ಯಾನಿಸ್, ಸುರೇಶ್ ರೈನಾ, ಅಂಕಿತ್ ರಜ್ಪೂತ್, ವೃದ್ಧಿಮಾನ್ ಸಾಹಾ, ವಿಜಯ್ ಶಂಕರ್, ಮೊಹಿತ್ ಶರ್ಮಾ, ಮುರಳಿ ವಿಜಯ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


