ಕ್ರೀಡೆ

ಬೆಂಗ್ಳೂರಲ್ಲಿ ಸನ್‌ಸೆಟ್

ಬೆಂಗ್ಳೂರಲ್ಲಿ ಸನ್‌ಸೆಟ್
Published On :

ಬೆಂಗಳೂರು: ಕ್ರಿಸ್ ಗೇಯ್ಲ್ ಆಡದಿದ್ದರೂ ನಾವು ಗೆಲ್ಲುತ್ತೇವೆ, ಸನ್‌ರೈಸರ್ಸ್ ಬಲಿಷ್ಠ ಬೌಲಿಂಗ್ ವಿಭಾಗವನ್ನು ಧೂಳೀಪಟ ಮಾಡಬಲ್ಲೆವು ಎಂಬುದನ್ನು ವಿರಾಟ್ ಕೊಹ್ಲಿ ನಿರೂಪಿಸಿದರು. ಚಿನ್ನಸ್ವಾಮಿ ಅಂಗಣದಲ್ಲಿ ಮಂಗಳವಾರ ಸನ್‌ರೈಸರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಶೈಲಿಯೇ ಹಾಗಿತ್ತು.
ವಿರಾಟ್ ಕೊಹ್ಲಿ (ಅಜೇಯ 93) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಜರ್ಸ್ ತಂಡ, ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ನಿರೀಕ್ಷೆ ಮೀರಿ 161 ರನ್ ಕಲೆ ಹಾಕಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 3 ವಿಕೆಟ್ ಕಳೆದುಕೊಂಡು ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ 162 ರನ್ ಕಲೆಹಾಕುವ ಮೂಲಕ ಜಯದ ಸಂಭ್ರಮ ಆಚರಿಸಿತು. ಅಲ್ಲದೆ ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಸೋತ ಸೇಡನ್ನು ಅದು ಈ ಮೂಲಕ ತೀರಿಸಿಕೊಂಡಿತು.
ಆರಂಭಿಕರಾಗಿ ಅಂಗಣಕ್ಕಿಳಿದ ಮಾಯಾಂಕ್ ಅಗರ್ವಾಲ್ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಇನಿಂಗ್ಸ್ ಆರಂಭಿಸಿ, ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ, 20 ಎಸೆತಗಳನ್ನು ಎದುರಿಸಿ 29 ರನ್ ಗಳಿಸುತ್ತಿದ್ದಂತೆಯೇ ತಿಸಾರಾ ಪೆರೇರಾ ಬೌಲಿಂಗ್‌ನಲ್ಲಿ ಕುಮಾರ ಸಂಗಕ್ಕಾರ್‌ಗೆ ಕ್ಯಾಚ್ ನೀಡಿದ್ದು, ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.
ಆಗ ಅಂಗಣಕ್ಕಿಳಿದ ವಿರಾಟ್ ಕೊಹ್ಲಿ ಹೈದರಾಬಾದ್ ಬೌಲರ್‌ಗಳನ್ನು ಮನಬಂದತೆ ದಂಡಿಸಿದರು. ಕೇವಲ 47 ಎಸೆತಗಳನ್ನು ಎದುರಿಸಿದ ಕೊಹ್ಲಿ ಮೊತ್ತದಲ್ಲಿ 4 ಸಿಕ್ಸರ್ ಹಾಗೂ 11 ಬೌಂಡರಿಗಳು ಸೇರಿದ್ದವು.
ಆದರೆ, ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ (13) ಬೇಗನೆ ನಿರ್ಗಮಿಸುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಹೀಗಾಗಿ ಗೇಯ್ಲ್ ಇದ್ದರೆ ಮಾತ್ರ ಆರ್‌ಸಿಬಿಗೆ ಜಯ ಎಂಬುವವರಿಗೆ ಈ ಪಂದ್ಯದಲ್ಲಿ ಕೊಹ್ಲಿ ಉತ್ತರ ನೀಡಿದರು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಬೌಲಿಂಗ್ ಪ್ರದರ್ಶಿಸಿದ ಇಶಾಂತ್ ಶರ್ಮಾ, ತಿಸಾರಾ ಪೆರೇರಾ ಹಾಗೂ ಕೆಮರೂನ್ ವೈಟ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ, ಬ್ಯಾಟಿಂಗ್ ಮಾಡಿದ, ಸನ್‌ರೈಸರ್ಸ್ ಆರಂಭದಲ್ಲಿ ಅಕ್ಷತ್ ರೆಡ್ಡಿ (12) ಮತ್ತು ಪಾರ್ಥೀವ್ ಪಟೇಲ್ (20) ಹಾಗೂ ಸಂಗಕ್ಕಾರ (23) ಅಲ್ಪ ಮೊತ್ತಕ್ಕೆ ತೃಪ್ತಿಪಡುವ ಮೂಲಕ ನಿಧಾನಗತಿಯ ಆರಂಭ ಕಂಡಿತು. ಹೀಗಾಗಿ ಹೈದರಾಬಾದ್ ಸಾಧಾರಣ ಮೊತ್ತಕ್ಕೆ ತೃಪ್ತಿಪಡಲಿದೆ ಎಂಬುದು ಅಭಿಮಾನಿಗಳ ಅಂಬೋಣವಾಗಿತ್ತು. ಆದರೆ, ನಂತರ ಬಂದ ಕೆಮರೂನ್ ವೈಟ್ (52) ಮತ್ತು ತಿಸರಾ ಪೆರೇರಾ (40) ಬ್ಯಾಟಿಂಗ್ ಗುಡುಗಿನೊಂದಿಗೆ ಅದು 161 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
ಆರ್‌ಸಿಬಿ ಪರವಾಗಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಆರ್.ಪಿ. ಸಿಂಗ್ 27 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಆರ್. ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್ ಹಾಗೂ ಮುರಳಿ ಕಾರ್ತಿಕ್ ತಲಾ ಒಂದು ವಿಕೆಟ್ ಕಬಳಿಸಿದರು. ಆರ್‌ಸಿಬಿ ಪರ ಅಮೋಘ ಅರ್ಧ ಶತಕ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ಬೋರ್ಡ್
ಸನ್‌ರೈಸರ್ಸ್ ಹೈದರಾಬಾದ್ 161/6 (20 ಓವರ್)
ಅಕ್ಷತ್ ಸಿ ವಿನಯ್ ಬಿ ಆರ್‌ಪಿ ಸಿಂಗ್ 12 (11), ಪಟೇಲ್ ಬಿ ಮುರಳಿಧರನ್ 20 (19), ಸಂಗಕ್ಕಾರ ಸಿ ಕೊಹ್ಲಿ ಬಿ ಕಾರ್ತಿಕ್ 23 (24), ವೈಟ್ ಸಿ ಡಿವಿಲಿಯರ್ಸ್ ಬಿ ವಿನಯ್ 52 (34), ಪೆರೇರಾ ಬಿ ಸಿಂಗ್ 40 (24), ಆಶಿಶ್ ಬಿ ಸಿಂಗ್ 3 (4), ವಿಹಾರಿ ಅಜೇಯ 4, ಸಮಂತ್ರೆ ಅಜೇಯ 2 (2), ಇತರೆ 5.
ವಿಕೆಟ್ ಪತನ: 1-12, 2-50, 3-62, 4-142, 5-155, 6-155
ಬೌಲಿಂಗ್: ಆರ್‌ಪಿ ಸಿಂಗ್ 4-0-27-3, ವಿನಯ್ 4-0-43-1, ಉನಾದ್ಕತ್ 4-0-29-0, ಮುರಳಿಧರನ್ 4-0-23-1, ಕಾರ್ತಿಕ್ 3-0-21-1, ಹೆನ್ರಿಕೇಸ್ 1-0-18-0


ರಾಯಲ್ ಚಾಲೆಂಜರ್ಸ್ ಬೆಂಗಳೂರು 162/3 (17.4 ಓವರ್)
ಅಗರ್ವಾಲ್ ಸಿ ಸಂಗಕ್ಕಾರ ಬಿ ಪೆರೇರಾ 29 (20), ಗೇಯ್ಲ್ ಸಿ ಪಟೇಲ್ ಬಿ ಇಶಾಂತ್ 13 (15), ಕೊಹ್ಲಿ ಅಜೇಯ 93 (47), ಡಿವಿಲಿಯರ್ಸ್ ಸಿ ವಿಹಾರಿ ಬಿ ವೈಟ್ 15 (15), ಹೆನ್ರಿಕೇಸ್ ಅಜೇಯ 7 (9), ಇತರೆ 5.
ವಿಕೆಟ್ ಪತನ: 1-39, 2-47, 3-96
ಬೌಲಿಂಗ್: ವಿಹಾರಿ 1-0-12-0, ಸ್ಟೇಯ್ನ್ 4-0-16-0, ಇಶಾಂತ್ 3.4-0-30-1, ಪೆರೇರಾ 3-0-35-1, ಮಿಶ್ರಾ 4-0-42-0, ಆಶಿಶ್ 1-0-12-0, ವೈಟ್ 1-0-14-1


ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.