ವಿಚಿತ್ರ ವೆಟ್ಟೆಲ್

ಯಾವುದೇ ನಾಯಕನಿರಲಿ, ಕ್ರೀಡಾಳುವಿರಲಿ ಸೌಜನ್ಯತೆಯ ಎಲ್ಲೆ ಮೀರಿ ವರ್ತಿಸಿದರೆ ಆತನ ಘನತೆಯನ್ನು ಆತನೇ ಹಾಳುಗೆಡವಿಕೊಂಡ ಎಂದರ್ಥ. ಆತ ಹಲವಾರು ದಾಖಲೆಗಳ ಸರದಾರನಿರಬಹುದು, ವಿಶ್ವವೇ ಮೆಚ್ಚಿದ ವಿಜೇತನಿರಬಹುದು... ಆದರೆ, ಅನುಚಿತವಾಗಿ ವರ್ತಿಸಿದರೆ, ಹುಂಬನಾದರೆ, ಮತ್ತೊಬ್ಬರ ಯಶಸ್ಸನ್ನು ಕಸಿದುಕೊಳ್ಳುವ ದುರಾಸೆಯ ವ್ಯಕ್ತಿಯಾದರೆ ತನ್ನ ಬೆಲೆಯನ್ನು ತಾನೇ ಕಳೆದುಕೊಳ್ಳುತ್ತಾನೆ.
ಇತ್ತೀಚೆಗೆ ಮಲೇಷ್ಯಾ ಓಪನ್ ಜಿಪಿಯಲ್ಲಿ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟೆಲ್ ಮಾಡಿದ್ದೂ ಇದನ್ನೇ. ಎಫ್1 ರೇಸ್ನಲ್ಲಿ ತನ್ನದೇ ಚರಿತ್ರೆ, ಘನತೆ ಹೊಂದಿರುವ ರೆಡ್ಬುಲ್ ತಂಡದ ಕ್ರೀಡಾಳುವಾದ ವೆಟ್ಟೆಲ್, ಮಾ.24ರಂದು ನಡೆದ ಮಲೇಷ್ಯನ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ತಂಡದ ಸಹ ಆಟಗಾರ ಮಾರ್ಕ್ ವೆಬರ್ಗೆ ಸಿಗಬೇಕಿದ್ದ ಜಯವನ್ನು ಕಸಿದುಕೊಂಡ. ಅದೂ, ಯಾವ ರೀತಿಯಲ್ಲಿ... 'ವೆಬರ್ನನ್ನು ಗೆಲ್ಲಲು ಬಿಡು' ಎಂದು ರೆಡ್ಬುಲ್ ತಂಡದ ಮುಖ್ಯಸ್ಥರಿಂದ ನಿರ್ದೇಶನ ಬಂದರೂ, ಅದನ್ನು ನಿರ್ಲಕ್ಷಿಸಿದ ಆತ ವೆಬರ್ನನ್ನು ಹಿಂದಿಕ್ಕಿ ಮುಂದೆ ಸಾಗಿದ.
ಅಂತಿಮ 10 ಲ್ಯಾಪ್ಗಳಲ್ಲಿ ವೆಬರ್ನನ್ನು ಹಿಂದಿಕ್ಕಿ ಮುಂದೆ ಸಾಗಿದ ವೆಟ್ಟೆಲ್, ಮೊದಲಿಗನಾಗಿ ರೇಸ್ ಮುಕ್ತಾಯಗೊಳಿಸಿದ ಹಾಗೂ ತನ್ನ ವೃತ್ತಿ ಜೀವನದಲ್ಲಿ 27ನೇ ಬಾರಿ ರೇಸ್ ಜಯಿಸಿದ ಹಿರಿಮೆ ಗಳಿಸಿದ. ಆದರೆ, ತಂಡದ ನಿರ್ದೇಶನವನ್ನು ಕಾಲಕಸ ಮಾಡಿ ಮುಂದೆ ಸಾಗಿದ ಆತನ ವರ್ತನೆ, ಇಡೀ ಎಫ್ 1 ಕ್ಷೇತ್ರವನ್ನೇ ಹುಬ್ಬೇರಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ವೆಬರ್ ಕಂಡರೆ ಒಳಗೊಳಗೇ ಕರುಬುತ್ತಿದ್ದ ವೆಟಲ್ನ ವರ್ತನೆ, ಇದೀಗ ಬಹಿರಂಗಗೊಂಡಿದೆ ಹಾಗೂ ಸಾರ್ವಜನಿಕವಾಗಿ ಟೀಕೆ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಹಾಗಂತ, ವೆಟಲ್ಗೆ ವೆಬರ್ನನ್ನು ಚೇಸ್ ಮಾಡಲು ಅವಕಾಶವಿರಲಿಲ್ಲವೆಂದಲ್ಲ. ಮಲೇಷ್ಯಾ ರೇಸ್ನ ಅಂತಿಮ ಹಂತದಲ್ಲಿ ವೆಬರ್, ಎಲ್ಲರಿಗಿಂತ ಮುಂದೆ ಸಾಗುತ್ತಿದ್ದ. ಅವನ ಹಿಂದೆಯೇ ಇದ್ದದ್ದು ವೆಟ್ಟೆಲ್. ಮೊದಲ ಸ್ಥಾನಕ್ಕಾಗಿ ಇಬ್ಬರ ನಡುವೆ ಪೈಪೋಟಿಯಿತ್ತು. ಆದರೆ, ರೆಡ್ಬುಲ್ ತಂಡದ ಮುಖ್ಯಸ್ಥ ಹಾರ್ನರ್ಗೆ ವೆಬರ್ ಈ ಬಾರಿ ರೇಸ್ ಗೆಲ್ಲಲಿ ಎಂಬ ಇರಾದೆ. ವೆಟಲ್ ಹಾಗೂ ವೆಬರ್- ಇಬ್ಬರೂ ರೆಡ್ಬುಲ್ ತಂಡದವರೇ ಆಗಿದ್ದರಿಂದ, ತಂಡದ ದೃಷ್ಟಿಕೋನದಿಂದ ನೋಡುವುದಾದರೆ, ಇಬ್ಬರಲ್ಲಿ ಯಾರು ಮೊದಲು ಬಂದರೂ ಅಡ್ಡಿಯಿಲ್ಲ ಎನ್ನುವ ಹಾಗಿತ್ತು. ಆದ್ದರಿಂದ, ವೆಬರ್ ಮೊದಲ ಸ್ಥಾನ ಗಳಿಸಲಿ, ಯಾವಾಗಲೂ ಗೆಲ್ಲುವ ಕುದುರೆಯಾಗಿರುವ ವೆಟ್ಟೆಲ್ ಈ ಬಾರಿ ದ್ವಿತೀಯ ಸ್ಥಾನ ಗಳಿಸಿದರೂ ಪರವಾಗಿಲ್ಲ ಎಂಬುದೇ ಹಾರ್ನರ್ ಅಭಿಲಾಷೆಯಾಗಿರಬಹುದು. ಟ್ರ್ಯಾಕ್ ಮೇಲೆ ವೆಬರ್, ವೆಟ್ಟೆಲ್ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲೇ ರೇಸ್ ಮುಗಿಸುವವರಂತೆ ಸಾಗುತ್ತಿದ್ದರು.
ಆಗ, ಬಿತ್ತು ನೋಡಿ ವೆಟ್ಟೆಲ್ ಮಡಿಲಲ್ಲಿ ಬೆಂಕಿ! ಕಾರಿನ ವೇಗ ಹೆಚ್ಚಿಸಿಕೊಂಡ ಆತ, ವೆಬರ್ನನ್ನು ಹಿಂದಿಕ್ಕಲು ಯತ್ನಿಸಿದ. ಇದನ್ನು ಗಮನಿಸಿದ ಹಾರ್ನರ್, 'ವೆಬರ್ನನ್ನು ಮುಂದೆ ಹೋಗಲು ಬಿಡು...' ಎಂದು ವೆಟ್ಟೆಲ್ಗೆ ಸಂದೇಶ ಕಳುಹಿಸಿದ. ಆದರೆ, ವೆಟಲ್ನ ಉದ್ಧಟತನದ ಮನಸ್ಸು ಇದಕ್ಕೆ ಒಪ್ಪಲಿಲ್ಲ. ಕಾರಿನ ವೇಗ ಹೆಚ್ಚಿಸುತ್ತಾ ಅಂತಿಮವಾಗಿ ರೇಸ್ ಗೆದ್ದೇ ಬಿಟ್ಟ. ವೆಬರ್ ಎರಡನೇ ಸ್ಥಾನಕ್ಕೆ ಜಾರಿದ.
ಯಾಕೆ ಈ ಬಿರುಕು?
ಜರ್ಮನಿಯ ಸೆಬಾಸ್ಟಿಯನ್ ವೆಟ್ಟೆಲ್ ಎಫ್1 ರೇಸ್ನ ಮಿಂಚು. 2007ರಲ್ಲಿ ನಡೆದ ಯು.ಎಸ್. ಗ್ರ್ಯಾನ್ ಪ್ರೀಯಿಂದ ರೇಸ್ ಜಗತ್ತಿಗೆ ಕಾಲಿಟ್ಟ ವೆಟ್ಟೆಲ್, ಅಲ್ಲಿಂದ ಇಲ್ಲಿಯವರೆಗೂ 27 ಬಾರಿ ಮೊದಲಿಗನಾಗಿ ಹೊರಹೊಮ್ಮಿದ್ದಾನೆ. 48 ಬಾರಿ ಪೋಡಿಯಂ ಫಿನಿಶ್ ಕಂಡಿದ್ದಾನೆ. ಅಲ್ಲದೆ ಮೂರು ಬಾರಿ ವಿಶ್ವ ಚಾಂಪಿಯನ್.
ಅತ್ತ, ಮಾರ್ಕ್ ವೆಬರ್ ಕೂಡಾ ಕಮ್ಮಿಯಿಲ್ಲ. ವೆಟಲ್ನಷ್ಟೇ ಪ್ರತಿಭಾನ್ವಿತ. 2002ರಿಂದಲೇ ರೇಸ್ ಅಖಾಡಕ್ಕಿಳಿದಿರುವ ಈತ ವೆಟ್ಟೆಲ್ಗಿಂತಲೂ ಈ ಕ್ಷೇತ್ರದಲ್ಲಿ ಹಿರಿಯ. ಇದುವರೆಗೂ ಯಾವುದೇ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲವಾದರೂ, 9 ಬಾರಿ ಮೊದಲಿಗ. ಕಳೆದ ವರ್ಷದ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನ ಪಡೆದಿದ್ದಾನೆ. ಆದರೆ, ವೆಟಲ್ಗೆ ಅದ್ಯಾಕೋ ಈತನನ್ನು ಕಂಡರೆ ಅಷ್ಟಕ್ಕಷ್ಟೇ.
ತನಗಿಂತಲೂ ಹಿರಿಯನಾದರೂ, ಎಫ್1 ಕ್ಷೇತ್ರದಲ್ಲಿ ತನಗಿಂತಲೂ ಕಡಿಮೆ ಸಾಧನೆ ಮಾಡಿರುವ ಎಂಬ ಕಾರಣಕ್ಕೋ ಏನೋ... ವೆಟ್ಟೆಲ್ಗೆ ವೆಬರ್ನನ್ನು ಕಂಡರೆ ತಾತ್ಸಾರ. ಪ್ರಾಯಶಃ ಇದೇ ಕಾರಣಕ್ಕೇ ಇರಬೇಕು ಆತನನ್ನು ಸಮಯ ಸಿಕ್ಕಾಗಲೆಲ್ಲಾ ವೆಬರ್ ಮೇಲೆ ವೆಟ್ಟೆಲ್ ಸವಾರಿ ಮಾಡುವುದು. ಮಲೇಷ್ಯಾ ಜಿಪಿಯಲ್ಲೂ ಆತ ಇದನ್ನೇ ಮಾಡಿದ್ದು.
ರೋಸ್ಬರ್ಗ್ ವಿಧೇಯತೆ
ಆದರೆ, ಇಲ್ಲಿ ಮತ್ತೊಂದು ವಿಷಯ. ವೆಬರ್ ಹಾಗೂ ವೆಟ್ಟೆಲ್ ಬಿಟ್ಟರೆ ಅವರಿಗಿಂತ ತುಸು ದೂರದಲ್ಲೇ ಇದ್ದ ಮರ್ಸಿಡೀಸ್ನ ಕ್ರೀಡಾಳುಗಳಾದ ಲೂಯಿಸ್ ಹ್ಯಾಮಿಲ್ಟನ್ ಹಾಗೂ ನಿಕೋ ರೋಸ್ಬರ್ಗ್ ನಡುವೆ ಮೂರನೇ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿತ್ತು. ಇದನ್ನು ಗಮನಿಸಿದ ಆ ತಂಡದ ಮುಖ್ಯಸ್ಥರು, ರೋಸ್ಬರ್ಗ್ಗೆ 'ಹ್ಯಾಮಿಲ್ಟನ್ರನ್ನು ಮುಂದೆ ಸಾಗಲು ಬಿಡುವಂತೆ' ಸೂಚಿಸಿದರು. ಸೂಚನೆ ಸಿಕ್ಕಕೂಡಲೇ ತನ್ನ ಕಾರಿನ ವೇಗವನ್ನು ಒಂದು ಹಂತದ ನಿಯಂತ್ರಣಕ್ಕೆ ತಂದುಕೊಂಡ ರೋಸ್ಬರ್ಗ್ ಮೂರನೇ ಸ್ಥಾನದಲ್ಲಿ ರೇಸ್ ಮುಕ್ತಾಯಗೊಳಿಸಲು ಹ್ಯಾಮಿಲ್ಟನ್ಗೆ ಅವಕಾಶ ಮಾಡಿಕೊಟ್ಟ. ವಿಧೇಯತೆಯೆಂದರೆ ಇದು.
ಅಂತಿಮವಾಗಿ...
ಒಂದು ತಂಡವಾಗಲೀ, ಸಂಸ್ಥೆಯಾಗಲೀ ಅದಕ್ಕೆ ತನ್ನದೇ ಆದ ನೀತಿ, ನಿಯಮಗಳಿರುತ್ತವೆ. ಅದಕ್ಕೆ ತಕ್ಕಂತೆ ತಂಡದ ಸದಸ್ಯರು ನಡೆದುಕೊಳ್ಳಬೇಕಾಗುತ್ತದೆ. ತಮ್ಮದೇ ಸ್ವಾರ್ಥದ ಕಾರಣಗಳಿಂದ ನಿಯಮಗಳನ್ನು ಮುರಿದರೆ ಅಥವಾ ತಮ್ಮ ಸಂಸ್ಥೆ ನೀಡಿದ ಸೂಚನೆ, ನಿರ್ದೇಶನಗಳನ್ನು ಕಡೆಗಣಿಸಿದರೆ, ದುರಾಸೆ, ದುರಹಂಕಾರದ ಪರಮಾವಧಿ ಎನಿಸಿಕೊಳ್ಳುತ್ತದೆ.
-ಚೇತನ್ ಓ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


