ಹೌ ಹೌ

ಮಾನವ ತನ್ನ ಬುದ್ಧಿಶಕ್ತಿಯಿಂದ ಅದೆಷ್ಟೋ ಪ್ರಾಣಿಗಳನ್ನು ಪಳಗಿಸಿದ್ದಾನೆ ನಿಜ. ಆದರೆ ಬುದ್ಧಿವಂತ ಮಾನವ ಅದರ ಸಾಮರ್ಥ್ಯದೊಂದಿಗೆ ಪೈಪೋಟಿಗಿಳಿದಿದ್ದಾನಾ? ಪುರಾಣ, ಇತಿಹಾಸ ಕೆದಕಿದರೆ, ಸಾವಿರ ದೃಷ್ಟಾಂತಗಳು ಸಿಕ್ಕಾವು. ಪ್ರಾಯೋಗಿಕವಾಗಿ ಯೋಚಿಸಿದರೆ ಅಸಾಧ್ಯ. ಅಂಥದ್ದರಲ್ಲಿ ಓಡಲೆಂದೇ ಜೀವಿಸಿರುವ ಕುದುರೆಯನ್ನು ಓಟದಲ್ಲಿ ಹಿಂದೆ ಹಾಕುವುದೆಂದರೆ... ಊಹಿಸುವುದು ತುಸು ಕಷ್ಟವೇ. ಆದರೆ ಕುದುರೆಯಂಥ ಕುದುರೆಯನ್ನೇ ಮಾನವನೊಬ್ಬ ಓಟದ ಸ್ಪರ್ಧೆಯಲ್ಲಿ ಹಿಂದೆ ಹಾಕಿರುವ ನಿದರ್ಶನಗಳಿವೆ. ಹೌ ಲಾಬ್ ಎಂಬಾತನೇ 32 ವರ್ಷಗಳಿಂದ ನಡೆಯುತ್ತಿರುವ ವಿಶಿಷ್ಟ ಸ್ಪರ್ಧೆಯಲ್ಲಿ ದಣಿವರಿಯದ ಪ್ರಾಣಿಯನ್ನು ಸೋಲಿಸಿದ ಧೀರ.
ಮನರಂಜನೆಗಂಥ ಹುಟ್ಟಿದ್ದು...
ಅಸಲಿ ಇಂಥ ಒಂದು ಆಲೋಚನೆ ಮೊದಲು ಹುಟ್ಟಿಕೊಂಡದ್ದು 1980ರಲ್ಲಿ. ಇಂಗ್ಲೆಂಡ್ನ ಲ್ಯಾಂಡ್ರಿಡ್ ವೆಲ್ಸ್ ಪಟ್ಟಣದ ಭೂಮಾಲೀಕ ಗಾರ್ಡನ್ ಗ್ರೀನ್ ಪಬ್ ಒಂದರಲ್ಲಿ ತನ್ನ ಗೆಳೆಯರೊಂದಿಗೆ ಹರಟುತ್ತಿದ್ದ ಸಂದರ್ಭ ಮಾನವ ಹಾಗೂ ಕುದುರೆಯಲ್ಲಿ ಗಟ್ಟಿಗರಾರು ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಅದನ್ನು ಮಾತಿಗಷ್ಟೇ ಮುಗಿಸದ ಗ್ರೀನ್ ವೆಲ್ಷ್ನಲ್ಲಿ ಪ್ರಾಯೋಗಿಕ ಸ್ಪರ್ಧೆ ನಡೆಸಿಯೇ ಬಿಟ್ಟ. 22 ಕಿ.ಮೀ. ಮ್ಯಾರಥಾನ್ನಲ್ಲಿ ಅಶ್ವಾರೂಢರೊಂದಿಗೆ ಮಾನವ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದು ಅಂದೇ... ಪ್ರಾರಂಭದ ವರ್ಷ ಗೆದ್ದವರಿಗೆ 1000 ಪೌಂಡ್ ಬಹುಮಾನ ನಿಗದಿ ಪಡಿಸಲಾಗಿತ್ತು. ಪ್ರತಿವರ್ಷ ಬಹುಮಾನದ ಮೊತ್ತವನ್ನು 1000 ಪೌಂಡ್ಗಳಷ್ಟು ಏರಿಸುವುದು ಈವರೆಗೂ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.
ಇಂಗ್ಲೆಂಡ್ ನಾಗರಿಕರು ಈ ಸ್ಪರ್ಧೆಯನ್ನು ಪ್ರೀತಿಯಿಂದ ಕಣ್ತುಂಬಿಕೊಂಡರು. ಅಲ್ಲಿಂದ ಸತತ 25 ವರ್ಷಗಳ ಕಾಲ ಕುದುರೆಯನ್ನು ಮೀರಿಸುವ ಗಟ್ಟಿಗ ಕಾಣಿಸಿಕೊಳ್ಳಲಿಲ್ಲ. ಹಾಗಂತ ಜನರ ಕುತೂಹಲ ಮಾತ್ರ ಒಂದಿಂಚೂ ಕಡಿಮೆಯಾಗಲಿಲ್ಲ.
ಪ್ರಾರಂಭದ ದಿನಗಳಲ್ಲಿ ಈ ಸ್ಪರ್ಧೆ ಕೇವಲ ಕುದುರೆ ಸವಾರರು ಹಾಗೂ ಓಟಗಾರರ ಮಧ್ಯೆ ನಡೆಯುತ್ತಿತ್ತು. ಒಂದೇ ವರ್ಷದಲ್ಲಿ ಸ್ಪರ್ಧೆ ಎಷ್ಟು ಜನಪ್ರಿಯವಾಯಿತೆಂದರೆ ಓಟಗಾರ್ತಿಯರೂ ಆಸಕ್ತಿ ತೋರಲು ಪ್ರಾರಂಭಿಸಿದರು. 1981ರಲ್ಲಿ ಆ್ಯನ್ ಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಹಿಳೆಯರ ಪ್ರವೇಶವಾಯಿತು. ಸ್ಪರ್ಧೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ 1985ರಲ್ಲಿ ಸೈಕಲ್ ಸವಾರರನ್ನೂ ಸೇರಿಸಿಕೊಳ್ಳಲಾಯಿತು. ಆದರೆ ಅವರೆಲ್ಲಾ ಎಷ್ಟೇ ಪ್ರಯತ್ನ ಪಟ್ಟರೂ ಕುದುರೆಯ ವೇಗಕ್ಕೆ ಸವಾಲೊಡ್ಡಲಾಗಲಿಲ್ಲ. ಆ ವರ್ಷ ಅಮೆರಿಕದ ಚಾಂಪಿಯನ್ ಸೈಕಲ್ ಸವಾರೆ ಜಾಕಿ ಫೀಲನ್ ಕೂದಲೆಳೆ ಅಂತರದಿಂದ ಪ್ರಥಮ ಸ್ಥಾನ ಪಡೆದ ಕುದುರೆಗಿಂತ ಹಿಂದೆ ಬಿದ್ದಳು. 1989ರಲ್ಲಿ ಸ್ಪರ್ಧಿಸಿದ ಬ್ರಿಟನ್ನ ಟಿಂ ಗೌಲ್ಡ್ ಮೊದಲ ಬಾರಿ ಕುದುರೆಯನ್ನು ಸೋಲಿಸಿದ. ಆದರೆ ಆತ ಸೈಕಲ್ನಲ್ಲಿ ಸವಾರಿ ನಡೆಸಿದ್ದರಿಂದ ಹೌನ ಸಾಧನೆಗೆ ಸಮವೆನಿಸಲಿಲ್ಲ.
'ಹೌ' ಇಟ್ ಕ್ಯಾನ್ ಪಾಸಿಬಲ್!
ಕುದುರೆಯನ್ನು ಸೋಲಿಸಲಾಗೋದಿಲ್ಲ ಬಿಡಿ ಎಂದಾಗಲೇ ಸಾಹಸ ರೇಖೆಯನ್ನು ದಾಟಿದಾತ ಹೌ ಲಾಬ್ ಯಾರೂ ನಿರೀಕ್ಷಿಸದ ರೀತಿಯಲ್ಲಿ ಮ್ಯಾರಥಾನ್ ಅನ್ನು 2:05:19 ಕಾಲಮಿತಿಯೊಳಗೆ ಮುಗಿಸಿದ. ಲಕ್ಕಿ ಎಂಬ ಕುದುರೆಯ ಮೇಲೆ ಸವಾರಿ ನಡೆಸಿದ ಜೆಫ್ರಿ ಅಲನ್(2:07:36) ಅಂದು ಶತ ಪ್ರಯತ್ನ ನಡೆಸಿದ್ದರೂ ಲಾಬ್ ಗೆಲವನ್ನು ತಡೆಯಲಾಗಿರಲಿಲ್ಲ. ಇದು ಒಂದೇ ಬಾರಿ ನಡೆದ ಘಟನೆಯಾಗಿದ್ದರೆ ಕಾಕತಾಳೀಯ ಅಂತ ಬಿಟ್ಟುಬಿಡಬಹುದಾಗಿತ್ತು. ಆದರೆ 2007ರಲ್ಲಿ ಫ್ಲೋರಿನ್ ಹೊಲಿಂಜರ್ (2:20:30) ಅದೇ ಲಕ್ಕಿ ಕುದುರೆ ಹಾಗೂ ಜೆಫ್ರಿ ಅಲನ್(2:31:26) ಅನ್ನು ಸೋಲಿಸಿದಾಗ ಹೌದು ಕುದುರೆಯನ್ನೂ ಸೋಲಿಸುವುದು ಸಾಧ್ಯ ಅಂತನ್ನಿಸಿತು.
ಲಾಬ್ ಗೆಲವಿನ ನಗು....
ಸತತ 25 ವರ್ಷಗಳಲ್ಲೂ ತುರಗವೇ ಗೆಲವಿನ ನಗು ಬೀರಿದಾಗ, ಸೈಕಲ್ ರೇಸಿಗರಿಂದಲೂ ಕುದುರೆಯನ್ನು ಹಿಂದಕ್ಕೆ ಹಾಕಲು ಸಾಧ್ಯವಾಗಲಿಲ್ಲ ಎಂದಾದಾಗ ಈ ಸ್ಪರ್ಧೆ ಮನರಂಜನೆಗಷ್ಟೇ ಸೀಮಿತವಾಗಿ ಉಳಿದಿತ್ತು. ಇಂತಹ ಸಮಯದಲ್ಲೇ ಇತಿಹಾಸ ರಚಿಸಿದಾತ ಹೌ ಲಾಬ್. 2004ರಲ್ಲಿ 40 ಕುದುರೆಗಳೊಂದಿಗೆ 500 ಓಟಗಾರರು ಕಣದಲ್ಲಿದ್ದರು. ಈ ಸಂದರ್ಭದಲ್ಲಿ ಬಾಜಿ ಕಟ್ಟುವವರು ಯಾವ ಕುದುರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದರೇ ಹೊರತು ಓಟಗಾರರ ಬಗ್ಗೆ ಯಾರೂ ಚಿಂತಿಸಿರಲಿಲ್ಲ. 25 ವರ್ಷಗಳ ಇತಿಹಾಸ ಗಮನಿಸಬೇಕಾದರೆ ಚಿಂತಿಸಬೇಕಾದ ಅವಶ್ಯಕತೆಯೂ ಇರಲಿಲ್ಲ. ಈ ಹಿಂದೆ ಕೆಲವೊಂದು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದ ಲಾಬ್ ಮೊದಲ ಬಾರಿಗೆ ಇಂಥ ವಿಶಿಷ್ಟ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದ. ಹಾಗಾಗಿ ಆತನ ಸಾಮರ್ಥ್ಯದ ಬಗ್ಗೆ ಲೆಕ್ಕಾಚಾರ ಹಾಕುವಷ್ಟು ವ್ಯವಧಾನವಾದರೂ ಹೇಗೆ ಬರಬೇಕು? ಸ್ಪರ್ಧೆಗೆ ಇಳಿಯುವ ಮುನ್ನ ತಾನು ಕುದುರೆಯನ್ನು ಸೋಲಿಸಬಲ್ಲೆ ಎಂದು ಸ್ವತಃ ಲಾಬ್ಗೂ ಅನ್ನಿಸಿರಲಿಲ್ಲವಂತೆ. ಆದರೆ ಇಡೀ ಯುರೋಪ್ ನೋಡು ನೋಡುತ್ತಿರುವ ಹಾಗೇ ತುರಗವನ್ನು ಹಿಂದಿಕ್ಕಿ ಗುರಿ ತಲುಪಿದ 27ರ ಹರೆಯದ ಯುವಕ 25 ಸಾವಿರ ಪೌಂಡ್ ಬಹುಮಾನ ಜೇಬಿಗಿಳಿಸಿಕೊಂಡ.
-ಗಣೇಶ್ ಪ್ರಸಾದ್ ಕುಂಬ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


