ಕ್ರೀಡೆ

ಧೋನಿ ಬಳಗಕ್ಕೆ ಭರ್ಜರಿ ಜಯ

Published On :

ಚಂಡೀಗಢ: ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್, ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು.  
ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ, 19.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 138 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡ, 17.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 139 ರನ್ ಗಳಿಸಿ ವಿಜಯದ ನಗೆ ಬೀರಿತು. 54 ಎಸೆತಗಳಲ್ಲಿ 86 ರನ್ ಬಾರಿಸಿ, ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಚೆನ್ನೈ ತಂಡದ ಆರಂಭಿಕ ಮೈಕ್ ಹಸ್ಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಕುಸಿದ ಪಂಜಾಬ್: ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಪಂಜಾಬ್ ತಂಡದ ಲೆಕ್ಕಾಚಾರವನ್ನು ಬೌಲರ್‌ಗಳಾದ ಬ್ರಾವೊ, ಡಿರ್ಕ್ ನೇನ್ಸ್ ಹಾಗೂ  ಕ್ರಿಸ್ ಮೊರಿಸ್ ತಲೆಕೆಳಗು ಮಾಡಿದರು. ಆರಂಭಿಕರನ್ನು ಬೇಗನೇ ಪೆವಿಲಿಯನ್‌ಗೆ ಕಳಿಸುವಲ್ಲಿ ನೇನ್ಸ್ ಯಶಸ್ವಿಯಾದರೆ, ಬ್ರಾವೊ ಹಾಗೂ ಮೊರಿಸ್ ಇಬ್ಬರೂ ಪಂಜಾಬ್ ಇನಿಂಗ್ಸ್‌ನ ಮಧ್ಯಮ ಕ್ರಮಾಂಕ ಶಿಥಿಲಗೊಳಿಸಿದರು.
ಇನಿಂಗ್ಸ್ ಆರಂಭಿಸಿದ ಮನದೀಪ್ ಸಿಂಗ್ ಹಾಗೂ ಗಿಲ್ ಕ್ರಿಸ್ಟ್ ಇಬ್ಬರಿಗೆ ಮೊದಲ ವಿಕೆಟ್‌ಗೆ ಕೇವಲ 19 ರನ್ ಮಾತ್ರ ಪೇರಿಸಲು ಸಾಧ್ಯವಾಯಿತು.
ಇನಿಂಗ್ಸ್‌ನ ಮೂರನೇ ಓವರ್‌ನಲ್ಲೇ ಗಿಲ್‌ಕ್ರಿಸ್ಟ್ ಔಟಾದರೆ, 3ನೇ ಓವರ್‌ನಲ್ಲಿ ಮನದೀಪ್ ವಿಕೆಟ್ ಒಪ್ಪಿಸಿ ಹೊರನಡೆದರು.
ಆಗ, ಇನಿಂಗ್ಸ್ ಜವಾಬ್ದಾರಿ ಹೊತ್ತಿದ್ದು ಮನನ್ ವೊಹ್ರಾ ಹಾಗೂ ಡೇವಿಡ್ ಹಸ್ಸಿ. 3ನೇ ವಿಕೆಟ್‌ಗೆ 30 ರನ್ ಪೇರಿಸಿದ ಈ ಜೋಡಿ, 7ನೇ ಓವರ್‌ನಲ್ಲಿ ಬೇರ್ಪಟ್ಟಿತು. 16 ರನ್ ಗಳಿಸಿದ್ದ ವೊಹ್ರಾ ಔಟಾದರು. ಆಗ ಕ್ರೀಸ್‌ಗೆ ಕಾಲಿಟ್ಟಿದ್ದು ಗುರ್‌ಪ್ರೀತ್ ಸಿಂಗ್.
ಹಸ್ಸಿ ಹೋರಾಟ: ಈ ಹಂತದಲ್ಲಿ, ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದ ಡೇವಿಡ್ ಹಸ್ಸಿ, ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರು. ಅವರಿಗೆ ಸೂಕ್ತ ಬೆಂಬಲ ನೀಡಿದ ಗುರ್‌ಪ್ರೀತ್ ಸಿಂಗ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ, 4ನೇ ವಿಕೆಟ್‌ಗೆ 43 ಎಸೆತಗಳಲ್ಲಿ ಸರಾಸರಿ 7.81 ರನ್‌ರೇಟ್‌ನೊಂದಿಗೆ 56 ರನ್ ಕಲೆಹಾಕಿತು. ಆದರೆ, 15ನೇ ಓವರ್‌ನಲ್ಲಿ ಹಸ್ಸಿ ಔಟಾಗುವುದರೊಂದಿಗೆ ಈ ಆರ್ಭಟ ನಿಂತಿತು. 16ನೇ ಓವರ್‌ನಲ್ಲಿ ಗುರ್‌ಪ್ರೀತ್ ಕೂಡಾ ವಿಕೆಟ್ ಒಪ್ಪಿಸಿದರು. ಈ ಇಬ್ಬರ ವಿಕೆಟ್ ಪತನಗೊಂಡ ನಂತರ, ಪಂಜಾಬ್ ತಂಡದ ಮತ್ಯಾವ ಬ್ಯಾಟ್ಸ್‌ಮನ್ ಸಹ ಚೆನ್ನೈನ ಆಕ್ರಮಣಕಾರಿ ಬೌಲಿಂಗ್ ಅನ್ನು ದಿಟ್ಟತನದಿಂದ ಎದುರಿಸಲಿಲ್ಲ. ಎಲ್ಲರೂ, ಒಂದಂಕಿ ರನ್ ಮಾಡಿ, ಪೆವಿಲಿಯನ್ ಪರೇಡ್ ನಡೆಸಿದರು. ಪ್ರವೀಣ್ ಕುಮಾರ್ ಅವರು ಔಟಾಗುವುದರೊಂದಿಗೆ ಪಂಜಾಬ್ ಇನಿಂಗ್ಸ್ ಅಂತ್ಯಗೊಂಡಿತು.
ಹಸ್ಸಿ ಆರ್ಭಟ: ಪಂಜಾಬ್ ನೀಡಿದ್ದ ಸುಲಭ ಮೊತ್ತವನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದ ಚೆನ್ನೈನ ಆರಂಭಿಕರಾದ ಮುರಳಿ ವಿಜಯ್ ಹಾಗೂ ಮೈಕ್ ಹಸ್ಸಿ ಇಬ್ಬರೂ ಅಬ್ಬರದ ಆಟ ಪ್ರದರ್ಶಿಸಿದರು. ಪಂಜಾಬ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇಬ್ಬರೂ, ವಿಕೆಟ್ ಕಳೆದುಕೊಳ್ಳದೇ ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.  
ಕಿಂಗ್ಸ್ ಇಲೆವೆನ್ ಪಂಜಾಬ್: 138 (19.5 ಓವರ್)
ಮನದೀಪ್ ಸಿಂಗ್ ಸಿ ಬ್ರಾವೊ ಬಿ ನೇನ್ಸ್ 9 (10), ಗಿಲ್‌ಕ್ರಿಸ್ಟ್ ಸಿ ಹಸ್ಸಿ ಬಿ ನೇನ್ಸ್ 9 (6), ವೊಹ್ರಾ ಸಿ ಹಸ್ಸಿ ಬಿ ಜಡೇಜಾ 16 (11), ಡೇವಿಡ್ ಹಸ್ಸಿ ಸಿ ಬ್ರಾವೊ ಬಿ ಅಶ್ವಿನ್ 41 (36), ಗುರ್‌ಪ್ರೀತ್ ಸಿಂಗ್ ಸಿ ನೇನ್ಸ್ ಬಿ ಬ್ರಾವೊ 31 (26), ಅಜರ್ ಮೆಹಮೂದ್ ಸಿ ಅಶ್ವಿನ್ ಬಿ ಮೋರಿಸ್ 8 (7), ಸತೀಶ್ ಸಿ ಮೋರಿಸ್ ಬಿ ಬ್ರಾವೊ 8 (6), ಫಿಯೂಶ್  ಸಿ ವಿಜಯ್ ಬಿ ಬ್ರಾವೊ 4 (5), ರಿಯಾನ್ ಹ್ಯಾರಿಸ್ ಸಿ ಬ್ರಾವೊ ಬಿ ಮೋರಿಸ್ 0 (2), ಪ್ರವೀಣ್ ಕುಮಾರ್ ರನೌಟ್ (ಧೋನಿ) 3 (5), ಪರ್ವಿಂದರ್ ಅಜೇಯ 1 (5). ಇತರೆ 1.
ವಿಕೆಟ್ ಪತನ: 1-19, 2-20, 3-50, 4-106, 5-116, 6-127, 7-133, 8-133, 9-134.
ಬೌಲಿಂಗ್: ಡಿರ್ಕ್ ನೇನ್ಸ್ 3.5-0-17-2, ಅಂಕಿತ್ ರಜಪೂತ್ 1-0-10-0, ಮೊರಿಸ್ 4-0-27-2, ರವೀಂದ್ರ ಜಡೇಜಾ 4-0-29-1, ಬ್ರಾವೊ 4-0-27-3, ಅಶ್ವಿನ್ 3-0-22-1.
ಚೆನ್ನೈ ಸೂಪರ್ ಕಿಂಗ್ಸ್: 139/0 (17.2 ಓವರ್)
ಮುರಳಿ ವಿಜಯ್ ಅಜೇಯ 50(50), ಹಸ್ಸಿ ಅಜೇಯ 86 (54). ಇತರೆ 3; ಬೌಲಿಂಗ್: ಪ್ರವೀಣ್  2.2- 0-18-0, ಹ್ಯಾರಿಸ್ 4-0-30-0, ಅಜರ್ ಮಹಮೂದ್ 4-0-34-0, ಪರ್ವಿಂದರ್ ಆವಾನಾ 2-0-20-0, ಫಿಯೂಶ್ ಚಾವ್ಲಾ 4-0-21-0, ಸತೀಶ್ 1-0-15-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.