ಮೂರನೇ ಗೆಲುವಿನ ಹುಮ್ಮಸ್ಸಿನಲ್ಲಿ ರಾಜಸ್ಥಾನ
ಮುಂಬೈ: ಪ್ರಮುಖ ಆಟಗಾರ ಯುವರಾಜ್ ಸಿಂಗ್ ಅನುಪಸ್ಥಿತಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಕಂಗಾಲಾಗಿರುವ ಪುಣೆ ವಾರಿಯರ್ಸ್ ತಂಡ, ಗುರುವಾರ ಸುಭ್ರತಾ ರಾಯ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಜಯ ಸಾಧಿಸಿದ್ದ ರಾಜಸ್ಥಾನ ರಾಯಲ್ಸ್ ಅದಕ್ಕೂ ಮುನ್ನ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಜಯಗಳಿಸಿತ್ತು.
ಹಾಗಾಗಿ, ಇದು ರಾಯಲ್ಸ್‌ಗೆ ಮೂರನೇ ಪಂದ್ಯ. ಸತತ ಎರಡು ಗೆಲುವುಗಳ ಉತ್ಸಾಹದಲ್ಲಿರುವ ಈ ತಂಡವನ್ನು ಸತತ ಎರಡು ಸೋಲುಗಳನ್ನು ಕಂಡು ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿರುವ ಪುಣೆ ವಾರಿಯರ್ಸ್ ತಂಡ ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲದ ವಿಷಯವಾಗಿದೆ.ಕಾಡಿದ್ದ ಯುವಿ ಗೈರು: ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ತಾನು ಆಡಿರುವ ಎರಡೂ ಪಂದ್ಯಗಳಲ್ಲಿ ಪುಣೆ ವಾರಿಯರ್ಸ್ ತಂಡ ಸೋತಿರುವುದಕ್ಕೆ ತಂಡದ ಪ್ರಮುಖ ಆಟಗಾರ ಯುವರಾಜ್ ಸಿಂಗ್ ಅವರ ಗೈರು ಕೂಡಾ ಒಂದು. ಫಿಟ್ನಿಸ್ ಸಮಸ್ಯೆಗೆ ಸಿಲುಕಿರುವ ಅವರು, ಪುಣೆಯ ಎರಡೂ ಪಂದ್ಯಗಳಿಂದ ದೂರ ಉಳಿದಿದ್ದರು. ಅವರ ಬ್ಯಾಟಿಂಗ್‌ನಿಂದ ವಂಚಿತವಾಗಿದ್ದಷ್ಟೇ ಅಲ್ಲ, ಬೌಲಿಂಗ್‌ನ ಉಪಯೋಗವೂ ತಂಡಕ್ಕೆ ಲಭ್ಯವಾಗಿರಲಿಲ್ಲ.
ಇದೀಗ, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಯುವಿ ವಾಪಸಾಗುವ ನಿರೀಕ್ಷೆಯಿದೆ. ಅವರು ಬಂದರೆ, ತಂಡದ ಬ್ಯಾಟಿಂಗ್ ಲೈನ್ ಸ್ವಲ್ಪ ಸುಧಾರಣೆ ಕಾಣಬಹುದು.
ಕೇವಲ ಯುವಿ ಅನುಪಸ್ಥಿತಿಯ ಸಮಸ್ಯೆಯಷ್ಟೇ ಅಲ್ಲ... ಉಳಿದ ಬ್ಯಾಟ್ಸ್‌ಮನ್‌ಗಳೂ ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯಕ್ಕೊಳಗಾಗಿರುವುದು ನಾಯಕ ಏಂಜಿಲೋ ಮ್ಯಾಥ್ಯೂಸ್‌ಗೆ ತಂಡದ ಬ್ಯಾಟಿಂಗ್ ಲೈನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದಾಗಿದೆ.
ಫಾರ್ಮ್ ಇಲ್ಲದೇ ಬಳಲುತ್ತಿರುವ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಅವರಿಗೆ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಬಹುದು. ಇನ್ನು, ಸ್ಯಾಮ್ಯುಯೆಲ್ಸ್‌ಗೂ ವಿಶ್ರಾಂತಿ ನೀಡುವ ಸಾಧ್ಯತೆಗಳಿದ್ದು ಅವರ ಜಾಗದಲ್ಲಿ ಆಸೀಸ್‌ನ ಮತ್ತೊಬ್ಬ ಆಟಗಾರ ಆರೋನ್ ಫಿಂಚ್ ಆಡಬಹುದು.
ಇನ್ನುಳಿದಂತೆ, ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಭಿಷೇಕ್ ನಾಯರ್ ಭರವಸೆಯ ಆಟಗಾರರಾಗಿದ್ದಾರೆ.
ಇನ್ನು, ಬೌಲಿಂಗ್ ವಿಭಾಗದಲ್ಲಿ, ಇತ್ತೀಚೆಗಿನ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಸಾಧನೆ ತೋರಿದ್ದ ಭುವನೇಶ್ವರ ಕುಮಾರ್ ಇರುವುದು ಪ್ರಮುಖ ಅಂಶ. ಅತ್ತ, ರಾಯಲ್ಸ್ ತಂಡ ಉತ್ಸಾಹದಲ್ಲಿ ಮುಳುಗೇಳುತ್ತಿದೆ. ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿ, ಈಗ ಸತತ ಮೂರನೇ ಜಯಕ್ಕಾಗಿ ಹಾತೊರೆಯುತ್ತಿದೆ.
ನಾಯಕ ರಾಹುಲ್ ದ್ರಾವಿಡ್ ಹಾಗೂ ಅಜಿಂಕ್ಯ ರಹಾನೆ - ಇಬ್ಬರೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇವರೊಂದಿಗೆ, ಫಾರ್ಮ್‌ನಲ್ಲಿರುವ ಸ್ಟುವರ್ಟ್ ಬಿನ್ನಿ ಹಾಗೂ ಕೆವಿನ್ ಕೂಪರ್ ಇಬ್ಬರೂ ಕಳೆದೆರಡೂ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಶ್ರೀಶಾಂತ್, ಶಾನ್ ಟೈಟ್, ಸಿದ್ಧಾರ್ಥ್ ತ್ರಿವೇದಿ ಅವರೂ ಉತ್ತಮವಾಗಿ ಆಡಿದ್ದು, ತಂಡದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

