ಕ್ರೀಡೆ

ಸಾಧಾರಣ ಮೊತ್ತ ಪೇರಿಸಿದ ಪಂಜಾಬ್

Published On :

ಚಂಡೀಗಢ: ನಾಯಕ ಗಿಲ್‌ಕ್ರಿಸ್ಟ್ ಸೇರಿದಂತೆ, ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಬುಧವಾರ ನಡೆದ ಪಂದ್ಯದಲ್ಲಿ ಎದುರಾಳಿ ಚೆನ್ನೈಗೆ ಪಂದ್ಯ ಗೆಲ್ಲಲು 139 ರನ್‌ಗಳ ಸಾಧಾರಣ ಸವಾಲು ನೀಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್, 19.5  ಓವರ್‌ಗಳಲ್ಲಿ 138 ರನ್ ಮಾತ್ರ ಗಳಿಸಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ಸಂದರ್ಭದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್‌ನ ಇನಿಂಗ್ಸ್ ಆರಂಭವಾಗಿರಲಿಲ್ಲ.
ಇನಿಂಗ್ಸ್ ಆರಂಭಿಸಿದ ಮನದೀಪ್ ಸಿಂಗ್ ಹಾಗೂ ನಾಯಕ ಗಿಲ್ ಕ್ರೀಸ್ಟ್ ಇಬ್ಬರೂ ಮೊದಲ ವಿಕೆಟ್‌ಗೆ ಕೇವಲ 19 ರನ್ ಮಾತ್ರ ಪೇರಿಸಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲೇ ಗಿಲ್‌ಕ್ರಿಸ್ಟ್ ಔಟಾದರೆ, 3ನೇ ಓವರ್‌ನಲ್ಲಿ ಮನದೀಪ್ ವಿಕೆಟ್ ಒಪ್ಪಿಸಿ ಹೊರನಡೆದರು.
ಆಗ, ಇನಿಂಗ್ಸ್ ಜವಾಬ್ದಾರಿ ಹೊತ್ತಿದ್ದು ಮನನ್ ವೊಹ್ರಾ ಹಾಗೂ ಡೇವಿಡ್ ಹಸ್ಸಿ. 3ನೇ ವಿಕೆಟ್‌ಗೆ 30 ರನ್ ಪೇರಿಸಿದ ಈ ಜೋಡಿ, 7ನೇ ಓವರ್‌ನಲ್ಲಿ ಬೇರ್ಪಟ್ಟಿತು. 16 ರನ್ ಗಳಿಸಿದ್ದ ವೊಹ್ರಾ ಔಟಾದರು.
ಆಗ ಕ್ರೀಸ್‌ಗೆ ಕಾಲಿಟ್ಟಿದ್ದು ಗುರ್‌ಪ್ರೀತ್ ಸಿಂಗ್.
ಈ ಹಂತದಲ್ಲಿ, ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದ ಡೇವಿಡ್ ಹಸ್ಸಿ, ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರು. ಅವರಿಗೆ ಸೂಕ್ತ ಬೆಂಬಲ ನೀಡಿದ ಗುರ್‌ಪ್ರೀತ್ ಸಿಂಗ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ, 4ನೇ ವಿಕೆಟ್‌ಗೆ 43 ಎಸೆತಗಳಲ್ಲಿ ಸರಾಸರಿ 7.81 ರನ್‌ರೇಟ್‌ನೊಂದಿಗೆ 56 ರನ್ ಕಲೆಹಾಕಿತು.
ಆದರೆ, 15ನೇ ಓವರ್‌ನಲ್ಲಿ ಹಸ್ಸಿ ಔಟಾಗುವುದರೊಂದಿಗೆ ಈ ಆರ್ಭಟ ನಿಂತಿತು. 16ನೇ ಓವರ್‌ನಲ್ಲಿ ಗುರ್‌ಪ್ರೀತ್ ಕೂಡಾ ವಿಕೆಟ್ ಒಪ್ಪಿಸಿದರು.
ಈ ಇಬ್ಬರ ವಿಕೆಟ್ ಪತನಗೊಂಡ ನಂತರ, ಪಂಜಾಬ್ ತಂಡದ ಮತ್ಯಾವ ಬ್ಯಾಟ್ಸ್‌ಮನ್ ಸಹ ಚೆನ್ನೈನ ಆಕ್ರಮಣಕಾರಿ ಬೌಲಿಂಗ್ ಅನ್ನು ದಿಟ್ಟತನದಿಂದ ಎದುರಿಸಲಿಲ್ಲ. ಎಲ್ಲರೂ, ಒಂದಂಕಿ ರನ್ ಮಾಡಿ, ಪೆವಿಲಿಯನ್ ಪರೇಡ್ ನಡೆಸಿದರು. ಪ್ರವೀಣ್ ಕುಮಾರ್ ಅವರು ಔಟಾಗುವುದರೊಂದಿಗೆ ಪಂಜಾಬ್ ಇನಿಂಗ್ಸ್ ಅಂತ್ಯಗೊಂಡಿತು. ಪಂಜಾಬ್ ತಂಡ 19.5 ಓವರ್‌ಗಳಲ್ಲಿ 138 ರನ್ ಮಾತ್ರ ಗಳಿಸಿತು.
ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವೆನ್ ಪಂಜಾಬ್: 138 (19.5 ಓವರ್)
ಡೇವಿಡ್ ಹಸ್ಸಿ  41 (36), ಗುರ್‌ಪ್ರೀತ್ ಸಿಂಗ್ 31 (26)
ಬೌಲಿಂಗ್: ಬ್ರಾವೋ 22/3, ನೇನ್ಸ್ 17/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.