ಕ್ರೀಡೆ

'ಭಜ್ಜಿ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ'

'ಭಜ್ಜಿ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ'
Published On :

ನವದೆಹಲಿ: ಐದಾರು ವರ್ಷಗಳ ಹಿಂದೆ ನಡೆದಿದ್ದ ವಿವಾದವೊಂದಕ್ಕೆ ಮರಳಿ ಜೀವ ಬಂದಿದೆ. ಮತ್ತೆ ಹೊಗೆಯಾಡುತ್ತಿದೆ. ಈ ಬಾರಿ ಈ ವಿವಾದದ ಕಿಚ್ಚು ಎಲ್ಲೆಲ್ಲಿ ಈ ಕಿಚ್ಚು ಹರಡಲಿದೆ ಎಂಬ ಕುತೂಹಲಕ್ಕೂ ಕಾರಣವಾಗಿದೆ.
ನಿಮಗೆ ನೆನಪಿರಬಹುದು. 2008ರ ಐಪಿಎಲ್ ಪಂದ್ಯವೊಂದರ ವೇಳೆ, ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ್ದು... ಶ್ರೀಶಾಂತ್ ಬಿಕಿ ಬಿಕ್ಕಿ ಅತ್ತಿದ್ದು... ಆನಂತರ ಈ ವಿವಾದ ವಿಚಾರಣೆಗೊಳಪಟ್ಟಿದ್ದು... ಈ ಎಲ್ಲಾ ಘಟನಾವಳಿಗಳ ಬಗ್ಗೆ ಶ್ರೀಶಾಂತ್ ಇದೇ ಮೊದಲ ಬಾರಿಗೆ ಟ್ವೀಟರ್ನಲ್ಲಿ ಬಾಯಿಬಿಟ್ಟಿದ್ದಾರೆ.
ಈಗ್ಯಾಕೆ ಹಳೇ ವಿಷಯ: ಗುರುವಾರ ಬೆಂಗಳೂರಿನಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದ ವೇಳೆ ಆರ್ಸಿಬಿಯ ವಿರಾಟ್ ಕೊಹ್ಲಿ ಹಾಗೂ ಕೆಕೆಆರ್ನ ಗೌತಮ್ ಗಂಭೀರ್ ಇಬ್ಬರೂ ಜಗಳವಾಡಿದ್ದರು. ಇದನ್ನು ವರದಿ ಮಾಡಿದ್ದ ಮಾಧ್ಯಮಗಳು, 2008ರಲ್ಲಿ ನಡೆದಿದ್ದ ಶ್ರೀಶಾಂತ್-ಭಜ್ಜಿ ನಡುವಿನ ಜಗಳವನ್ನು ಹೋಲಿಸಿದ್ದವು.
ಇದು ಶ್ರೀಶಾಂತ್ಗೆ ನೋವುಂಟು ಮಾಡಿದೆಯಂತೆ. ತಮ್ಮ ಟ್ವೀಟರ್ ಪ್ರತಿಕ್ರಿಯೆಯಲ್ಲಿ ಹೀಗೆ ಹೇಳಿಕೊಂಡಿರುವ ಅವರು, 'ಐಪಿಎಲ್ ಪಂದ್ಯಗಳಲ್ಲಿ ಇಂಥ ಘಟನೆಗಳು ನಡೆದಾಗಲೆಲ್ಲಾ ನನ್ನ ಹಾಗೂ ಭಜ್ಜಿ ನಡುವಿನ ಜಗಳವನ್ನೇ ಉದಾಹರಣೆಯಾಗಿ ತೆಗೆದುಕೊಂಡು ವರದಿ ಮಾಡಲಾಗುತ್ತದೆ. ಹಾಗೆ, ಪ್ರತೀಬಾರಿ ಉದಾಹರಿಸುವಾಗಲೂ, ಭಜ್ಜಿಯನ್ನು ಕೆಣಕಿದ್ದ ಕಾರಣದಿಂದಾಗಿಯೇ ಶ್ರೀಶಾಂತ್ ಒದೆ ತಿಂದ ಎನ್ನುವಂತೆ ವರದಿಗಳು ಬರುತ್ತಿವೆ. ಇದು ನನಗೆ ಬೇಸರ ತರಿಸುತ್ತಿದೆ. ಸತ್ಯವನ್ನು ಎಷ್ಟು ದಿನ ಅಂತ ಮುಚ್ಚಿಡಲಿ. 2008ರಲ್ಲಿ ನಡೆದಿದ್ದ ಘಟನೆಯ ಸತ್ಯಾಂಶ ಬೇರೆಯೇ ಇತ್ತು...' ಎಂದು ತಮ್ಮ ವಾದವನ್ನು ಶ್ರೀಶಾಂತ್ ಮಂಡಿಸುತ್ತಾರೆ.
ಏನದು ವಿವಾದ?: 2008ರ ಐಪಿಎಲ್ನಲ್ಲಿ ಶ್ರೀಶಾಂತ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದರು. ಭಜ್ಜಿ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆಗ, ಮುಂಬೈ ಇಂಡಿಯನ್ಸ್ ಸೋತಿತ್ತು. ಪಂದ್ಯ ಮುಗಿದ ಮೇಲೆ, ಪರಸ್ಪರ ಔಪಚಾರಿಕವಾಗಿ ಕೈಕುಲುಕಲು ಶ್ರೀಶಾಂತ್, ಭಜ್ಜಿಯೆಡೆಗೆ ಸಾಗಿದ್ದಾಗ, ಪಂದ್ಯ ಸೋತ ಬೇಸರದಲ್ಲಿದ್ದ ಭಜ್ಜಿ, ಶ್ರೀಶಾಂತ್ ಅವರ ಕೆನ್ನೆಗೆ ಹೊಡೆದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅವರು ಹಾಗೆ ಹೊಡೆಯಲು, ಶ್ರೀಶಾಂತ್ ಅವರು ಭಜ್ಜಿಯನ್ನು ಕೆಣಕಿದ್ದೇ ಕಾರಣವೆಂದೂ ಹೇಳಲಾಗಿತ್ತು.
ಇದರ ಬಗ್ಗೆ ಈಗ ಬಾಯಿಬಿಟ್ಟಿರುವ ಶ್ರೀಶಾಂತ್, 2008ರ ಘಟನೆಯ ಹಿಂದೆ ಭಜ್ಜಿಯದ್ದೇ ತಪ್ಪಿತ್ತು ಎಂದು ಹೇಳಿಕೊಂಡಿದ್ದಾರೆ. 'ಪಂದ್ಯ ಮುಗಿದ ಮೇಲೆ, ನಾನು ಭಜ್ಜಿ ಅವರನ್ನು ಅಭಿನಂದಿಸಲು ಹೋಗಿದ್ದೆ. ನಾನು ಹತ್ತಿರ ಹೋದ ಕೂಡಲೇ ನನ್ನ ಬೆನ್ನಿಗೆ ಸಿಟ್ಟಿನಿಂದ ಗುದ್ದು ಹಾಕಿದರು. ನನಗೆ ದುಃಖ ಉಮ್ಮಳಿಸಿ ಬಂತು. ಹಾಗಾಗಿ, ನಾನು ಅಳುತ್ತಾ ನಿಂತೆ' ಎಂದು ಅವರು ಹೇಳಿದ್ದಾರೆ.
ಕಪಾಳಕ್ಕೆ ಹೊಡೆದಿರಲಿಲ್ಲ: ವರದಿಗಳಲ್ಲಿ ಹೇಳಿದ್ದಂತೆ, ಭಜ್ಜಿ ನನ್ನ ಕಪಾಳಕ್ಕೆ ಹೊಡೆದಿರಲಿಲ್ಲ ಎಂದು ಹೇಳಿರುವ ಶ್ರೀಶಾಂತ್, ಅವರು ಬೆನ್ನಿಗೆ ಹೊಡೆದಿದ್ದರು ಎಂದು ಹೇಳಿದ್ದಾರೆ. ಆದರೆ, ಈ ಘಟನೆಯ ಹಿಂದಿನ ಕೆಲ ಸತ್ಯಗಳನ್ನು ಹೇಳುತ್ತಾ ಹೋಗಿರುವ ಅವರು, ಘಟನೆಯ ವಿಚಾರಣೆ ಸಂದರ್ಭದಲ್ಲಿ, ತಾವೇ (ಶ್ರೀಶಾಂತ್) ತಪ್ಪು ಮಾಡಿದ್ದು ಎಂದು ಹೇಳಬೇಕು ಎಂದು ಒತ್ತಡ ಹೇರಲಾಗಿತ್ತು ಎಂದು ಶ್ರೀಶಾಂತ್ ಹೇಳಿದ್ದಾರೆ.
ಪ್ರತಿಕ್ರಿಯೆಗೆ ನಕಾರ
ನವದೆಹಲಿ: ಶ್ರೀಶಾಂತ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ತಮ್ಮ ವಿರುದ್ಧ ಮಾಡಿರುವ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಲು ಹರ್ಭಜನ್ ಸಿಂಗ್ ನಿರಾಕರಿಸಿದ್ದಾರೆ. ಇದೀಗ, ಹೊಸದಾಗಿ ಎದ್ದಿರುವ ವಿವಾದದ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ಯಾವುದೇ ಹೇಳಿಕೆಯನ್ನು ನೀಡಲು ನಿರಾಕರಿಸಿದ ಭಜ್ಜಿ, 'ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಹೇಳಿಕೆ ನೀಡಲು ಇಚ್ಛಿಸುವುದೂ ಇಲ್ಲ' ಎಂದು ಅವರು ಹೇಳಿದ್ದಾರೆ.
ಅಕೌಂಟ್ ಡಿಲೀಟ್!
ನವದೆಹಲಿ: ಟ್ವೀಟರ್ನಲ್ಲಿ ಅಕೌಂಟ್ನಲ್ಲಿ ತಾವು ಹೇಳಿರುವ ಕೆಲ ವಿಚಾರಗಳಿಂದ ವಿವಾದ ಅಲೆ ಎದ್ದ ಹಿನ್ನೆಲೆಯಲ್ಲಿ, ವೇಗಿ ಶ್ರೀಶಾಂತ್ ಅವರು ತಮ್ಮ ಟ್ವೀಟರ್ ಖಾತೆಯನ್ನು ರದ್ದುಗೊಳಿಸಿದ್ದಾರೆ. 2008ರಲ್ಲಿ ಭಜ್ಜಿ ಅವರು ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ್ದರ ಘಟನೆಯ ಕುರಿತಂತೆ ಕೆಲ ವಿಷಯಗಳನ್ನು ಟ್ವೀಟರ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.