ವಿಜೇಂದರ್ ಸಿಂಗ್ ಬಚಾವ್

ನವದೆಹಲಿ: ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಜೇಂದರ್ ಅವರಿಂದ ಪಡೆಯಲಾಗಿದ್ದ ರಕ್ತ ಹಾಗೂ ಮೂತ್ರದ ನಮೂನೆಗಳ ಪರೀಕ್ಷೆ ನಡೆಸಿದ ರಾಷ್ಟ್ರೀಯ ಉದ್ದೀಪನಾ ನಿಗ್ರಹ ಆಯೋಗ (ಎನ್‌ಎಡಿಎ)ದ ವರದಿಯಲ್ಲಿ 'ವಿಜೇಂದರ್, ಹೆರಾಯಿನ್ ಸೇರಿದಂತೆ ಯಾವುದೇ ನಿಷೇಧಿತ ವಸ್ತುಗಳನ್ನು ಸೇವಿಸಿಲ್ಲ' ಎಂದು ಹೇಳಿದೆ. ಎನ್‌ಎಡಿಎ ನೀಡಿರುವ ವರದಿಯನ್ನು ಕೇಂದ್ರ ಕ್ರೀಡಾ ಇಲಾಖೆ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ. ವಿಜೇಂದರ್ ಜೊತೆಯಲ್ಲೇ, ಇತರ ನಾಲ್ವರು ಬಾಕ್ಸರ್‌ಗಳೂ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.
'ಮಾದಕ ವಸ್ತು ಸೇವನೆ ಜಾಲದಲ್ಲಿ ಆರೋಪಿಯಾಗಿರುವ ವಿಜೇಂದರ್ ನೀಡಿದ್ದ ರಕ್ತ ಹಾಗೂ ಮೂತ್ರದ ನಮೂನೆಗಳನ್ನು ಕೂಲಂಕಶ ಪರೀಕ್ಷೆ ನಡೆಸಿರುವ ಎನ್‌ಎಡಿಎ, ವರದಿ ಸಲ್ಲಿಸಿದ್ದು, ಇದರಲ್ಲಿ ವಿಜೇಂದರ್ ಯಾವುದೇ ನಿಷೇಧಿತ ವಸ್ತುಗಳನ್ನು ಸೇವಿಸಿಲ್ಲ ಎಂದು ಹೇಳಲಾಗಿದೆ' ಎಂದು ಸಚಿವಾಲಯ ಹೇಳಿದೆ. ಕೇವಲ ರಕ್ತ ಮತ್ತು ಮೂತ್ರದ ನಮೂನೆಗಳನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗಿದೆಯೆಂದೂ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಒತ್ತಿ ಹೇಳಿದೆ. ವಿಜೇಂದರ್ ಮೇಲೆ ಡ್ರಗ್ಸ್ ಸೇವನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದ ಕೇಂದ್ರ ಕ್ರೀಡಾ ಇಲಾಖೆ, ವಿಜೇಂದರ್ ಅವರಿಂದ ಅಗತ್ಯ ನಮೂನೆಗಳನ್ನು ಪಡೆದು ಪರೀಕ್ಷೆ ನಡೆಸುವಂತೆ ಎನ್‌ಎಡಿಎಯನ್ನು ಕೋರಿತ್ತು. ಅದರಂತೆ, ಎನ್‌ಎಡಿಎ ಪರೀಕ್ಷೆ ನಡೆಸಿತ್ತು.
ಅಸಹಕಾರ ತೋರಿದ್ದ ವಿಜಿ: ತಿಂಗಳ ಹಿಂದೆ ಪ್ರಕರಣ ಬಯಲಾದಾಗಿನಿಂದ ಬಹುದಿನಗಳವರೆಗೆ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯುತ್ತಾ ಬಂದಿದ್ದ ವಿಜೇಂದರ್, ಮೊದಮೊದಲು ಎನ್‌ಎಡಿಎ ಪರೀಕ್ಷೆಗೆ ತಮ್ಮ ರಕ್ತ ಹಾಗೂ ಮೂತ್ರದ ನಮೂನೆ ನೀಡಲು ನಿರಾಕರಿಸಿದ್ದರು. ಆದರೆ, ಆನಂತರ ತಮ್ಮ ಪಟ್ಟು ಸಡಿಲಿಸಿ, ನಮೂನೆಗಳನ್ನು ಏ. 3ರಂದು ನೀಡಿದ್ದರು. ಏತನ್ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿದ್ದ ಪಂಜಾಬ್ ಪೊಲೀಸ್, ವಿಜೇಂದರ್ ಅವರು ಅನಿವಾಸಿ ಭಾರತೀಯ ಅನೂಪ್ ಎಂಬಾತನಿಂದ ಡ್ರಗ್ಸ್‌ಗಳನ್ನು ಪಡೆದು ಸೇವಿಸುತ್ತಿದ್ದರೆಂದು ಆರೋಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


