ಸಯಾಲಿಗೆ ಸೋಲು
ತೈಪೇ: ಭಾರತದ ಸಯಾಲಿ ಗೋಖಲೆ ಏಷ್ಯನ್ ಚಾಂಪಿಯನ್ಷಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ನ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವೈಫಲ್ಯ ಕಂಡಿದ್ದಾರೆ. ಮಂಗಳವಾರ ನಡೆದ ಎರಡನೇ ಮತ್ತು ಅಂತಿಮ ಅರ್ಹತಾ ಸುತ್ತಿನ ಪಂದ್ಯವನ್ನು ಸಯಾಲಿ ಕೈಚೆಲ್ಲಿದರು.
ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪುಣೆ ಮೂಲದ 26 ವರ್ಷದ ಸಯಾಲಿ, ಲಂಕಾದ ಕವಿಂಡಿ ಇಶಾಂಡಿಕಾ ಸಿರಿಮನ್ನಗೆ ವಿರುದ್ಧ 21-16, 21-14 ನೇರ ಸೆಟ್ಗಳ ಅಂತರದಿಂದ ಸುಲಭವಾಗಿ ಜಯ ಸಾಧಿಸಿದ್ದರು.
ಆದರೆ, ದ್ವಿತೀಯ ಸುತ್ತಿನ ಪಂದ್ಯದಲ್ಲಿ ತೈಪೇಯ ಯಾ ಚಿಂಗ್ ಸೂ ವಿರುದ್ಧ 23-21, 10-21, 10-21 ಅಂತರದಿಂದ ಸೋಲುವ ಮುನ್ನ ಬಲಿಷ್ಠ ಪ್ರದರ್ಶನ ತೋರಿದರು.
ಬುಧವಾರದಿಂದ ಆರಂಭವಾಗಲಿರುವ ಪ್ರಧಾನ ಸುತ್ತಿನ ಪಂದ್ಯಾವಳಿಯಲ್ಲಿ ಭಾರತದ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದಾರೆ. ವಿಶ್ವದ ನಂ.7 ಆಟಗಾರ ಪರುಪಳ್ಳಿ ಕಶ್ಯಪ್ ಪುರುಷರ ಸಿಂಗಲ್ಸ್ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜಿ ಹೂನ್ ಹಾಂಗ್ ಅವರನ್ನು ಎದುರಿಸಲಿದ್ದಾರೆ. ಪಂದ್ಯಾವಳಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಕಶ್ಯಪ್ ಸೆಮಿಫೈನಲ್ವರೆಗೂ ಸುಲಭ ಎದುರಾಳಿಗಳನ್ನು ಹೊಂದಿದ್ದಾರೆ. ಆದರೆ, ಅಂತಿಮ ನಾಲ್ಕು ಪಂದ್ಯಗಳಲ್ಲಿ ಕಶ್ಯಪ್ ವಿಶ್ವದ ನಂ.2 ಆಟಗಾರ ಚೀನಾದ ಚೆನ್ ಲಾಂಗ್ ಅವರನ್ನು ಎದುರಿಸಬೇಕಾಗಬಹುದು.
ಪುರುಷರ ಸಿಂಗಲ್ಸ್ನಲ್ಲಿ ಭಾರತದ ಇನ್ನೊಬ್ಬ ಆಟಗಾರ, ಸಾಯಿ ಪ್ರಣೀತ್ ಬಿ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡೀವ್ಸ್ನ ಮೊಹ್ಮದ್ ಅಜ್ಫಾನ್ ರಶೀದ್ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಉದಯೋನ್ಮುಖ ತಾರೆ ಪಿ.ವಿ ಸಿಂಧು ಹಾಂಕಾಂಗ್ನ ಜೆಜ್ ಕಾ ಚಾನ್ ಅವರನ್ನು ಸುಲಭವಾಗಿ ಮಣಿಸುವ ಸಾಧ್ಯತೆಗಳಿವೆ. ಆದರೆ, ಸಿಂಧು ದ್ವಿತೀಯ ಸುತ್ತಿನಲ್ಲಿ ವಿಶ್ವದ ನಂ.6 ಆಟಗಾರ್ತಿ ವಾಂಗ್ ಶಿಕ್ಸಿಯಾನ್ ಅವರನ್ನು ಎದುರಿಸುವ ನಿರೀಕ್ಷೆಗಳಿವೆ.
ಪುರುಷರ ಡಬಲ್ಸ್ನಲ್ಲಿ ಭಾರತದ ತರುಣ್ ಕೋನಾ ಮತ್ತು ಅರುಣ್ ವಿಷ್ಣು ಜೋಡಿ ಮೊದಲ ಸುತ್ತಿನಲ್ಲಿ ವೀಯಟ್ನಾಂನ ಬಾವೋ ಡಕ್ ಡೌಂಗ್ ಮತ್ತು ಹಾಂಗ್ ನಾಮ್ ಗುಯೇನ್ ಜೋಡಿಯನ್ನು ಎದುರಿಸಲಿದೆ.
ಪ್ರಣವ್ ಜೆರ್ರಿ ಚೋಪ್ರಾ ಮತ್ತು ಅಕ್ಷಯ್ ದೆವಲ್ಕರ್ಮ್, ಮಾನು ಅತ್ರಿ ಮತ್ತು ಸುಮೀತ್ ರೆಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಭಾರತದ ಇತರ ಜೋಡಿಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

