ಕ್ರೀಡೆ

ಆರ್‌ಸಿಬಿಗೆ ರೋಚಕ ಜಯ

Published On :

ಬೆಂಗಳೂರು: ಅನಿರೀಕ್ಷಿತವಾಗಿ ಸೂಪರ್ ಓವರ್‌ಗೆ ಜಾರುವ ಮೂಲಕ ರೋಚಕವಾಗಿ ಅಂತ್ಯಗೊಂಡ ಪಂದ್ಯದಲ್ಲಿ ಆರ್‌ಸಿಬಿ ತಂಡ 4 ರನ್‌ಗಳ ಅಂತರದಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಪರಾಭವಗೊಳಿಸಿತು.
ಟಾಸ್ ಸೋತರೂ ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ, ಡೇರ್‌ಡೆವಿಲ್ಸ್ ತಂಡವನ್ನು 152 ರನ್‌ಗಳಿಗೆ ನಿಯಂತ್ರಿಸಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲಿ ಕೆ.ಎಲ್. ರಾಹುಲ್ (12) ಮತ್ತು ಕ್ರಿಸ್ ಗೇಯ್ಲ್ (13) ಬೇಗನೆ ಪೆವಿಲಿಯನ್ ಸೇರುವ ಮೂಲಕ ಆರಂಭಿಕ ಆಘಾತ ಅನುಭವಿಸಿತು.
ಆದರೆ, ನಂತರ ಬಂದ ವಿರಾಟ್ ಕೊಹ್ಲಿ (65) ಅರ್ಧ ಶತಕ ಮತ್ತು ಎಬಿ ಡಿವಿಲಿಯರ್ಸ್ (39) ಆಕರ್ಷಕ ಜತೆಯಾಟದಲ್ಲಿ ಡೆಲ್ಲಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ 3ನೇ ವಿಕೆಟ್‌ಗೆ 103 ರನ್ ಪೇರಿಸಿದ್ದರು. ಇನ್ನೇನು ಆರ್‌ಸಿಬಿ ಜಯದ ಹತ್ತಿರ ಸಮೀಪಿಸಿತು ಎನ್ನುವಾಗಲೇ, ಕೊಹ್ಲಿ ಜತೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಡಿವಿಲಿಯರ್ಸ್ 16ನೇ ಓವರ್‌ನ ಅಂತಿಮ ಎಸೆತದಲ್ಲಿ ರನೌಟ್ ಆದರು. ನಂತರ ಬಂದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಲಗುಬಗನೆ ಪೆವಿಲಿಯನ್ ಸೇರುವ ಮೂಲಕ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡು ಸೂಪರ್ ಓವರ್‌ಗೆ ಜಾರಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 15 ರನ್ ಪೇರಿಸಿತು. ನಂತರ 16 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 2 ವಿಕೆಟ್ ಕಳೆದುಕೊಂಡು ಕೇವಲ 11 ರನ್ ಕಲೆ ಹಾಕಿತು. ಇದರೊಂದಿಗೆ ಡೆಲ್ಲಿ ತಂಡ ಇದುವರೆಗೂ ಆಡಿದ ಎಲ್ಲ 5 ಪಂದ್ಯಗಳಲ್ಲೂ ಸೋಲನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.
50 ಎಸೆತಗಳನ್ನು ಎದುರಿಸಿದ ಕೊಹ್ಲಿ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು. 32 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು.
ಡೆಲ್ಲಿ ಪರ ಉಮೇಶ್ ಯಾದವ್ 2 ವಿಕೆಟ್ ಪಡೆದರೆ, ಆಶಿಶ್ ನೆಹ್ರಾ, ಮಾರ್ನೆ ಮಾರ್ಕೆಲ್ ಹಾಗೂ ಎಸ್. ನದೀಂ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲ ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ಕೇದಾರ್ ಜಾಧವ್ (29) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವುದರೊಂದಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರ್‌ಸಿಬಿಗೆ 153 ರನ್‌ಗಳ ಸ್ಪರ್ಧಾತ್ಮಕ ಸವಾಲೊಡ್ಡಿತ್ತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ತಂಡದ ಆರಂಭಿಕರಾದ ವೀರೇಂದ್ರ ಸೆಹ್ವಾಗ್ (25) ಮತ್ತು ಡೇವಿಡ್ ವಾರ್ನರ್ (15) ಭದ್ರ ಬುನಾದಿಯನ್ನೇ ಹಾಕಿದ್ದರು. ಆದರೆ, ನಂತರ ಮಧ್ಯಮ ಕ್ರಮಾಂಕದಲ್ಲಿ ಜಯವರ್ಧನೆ (28) ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಾಣುವ ಮೂಲಕ 5 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು.
ಆರ್‌ಸಿಬಿ  ಪರ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದರೆ, ಆರ್. ವಿನಯ್ ಕುಮಾರ್ ಮತ್ತು ಮೆಕ್‌ಡೊನಾಲ್ಡ್ ತಲಾ ಒಂದು ವಿಕೆಟ್ ಕಬಳಿಸಿದರು. ಆದರೆ, ಆರ್.ಪಿ. ಸಿಂಗ್ ನಾಲ್ಕು ಓವರ್‌ಗಳಲ್ಲಿ 48 ರನ್ ನೀಡಿ ದುಬಾರಿ ಎನಿಸಿದರು.

ಡೆಲ್ಲಿ ಡೇರ್‌ಡೆವಿಲ್ಸ್ 152/5 (20 ಓವರ್)
ವಾರ್ನರ್ ಸಿ ಮತ್ತು ಬಿ ವಿನಯ್ ಕುಮಾರ್ 15 (13), ಸೆಹ್ವಾಗ್ ಸಿ ಕೊಹ್ಲಿ ಬಿ ಮೆಕ್‌ಡೊನಾಲ್ಡ್ 25 (23), ಜುನೇಜಾ ಸಿ ವಿನಯ್ ಬಿ ಉನಾದ್ಕತ್ 17 (16), ಜಯವರ್ಧನೆ ರನೌಟ್ (ವಿನಯ್) 28 (31), ರೊಹ್ರೆರ್ ಸಿ ಕೊಹ್ಲಿ ಬಿ ಉನಾದ್ಕತ್ 14 (14), ಜಾಧವ್ ಅಜೇಯ 29 (16), ಪಠಾಣ್ ಅಜೇಯ 19 (8), ಇತರೆ 5.
ವಿಕೆಟ್ ಪತನ: 1-43, 2-43, 3-73, 4-91, 5-122
ಬೌಲಿಂಗ್: ರಾಮ್‌ಪಾಲ್ 4-1-28-0, ಆರ್‌ಪಿ ಸಿಂಗ್ 4-0-48-0, ಉನಾದ್ಕತ್ 4-0-24-2, ವಿನಯ್ 4-0-21-1, ಮೆಕ್‌ಡೊನಾಲ್ಡ್ 2-0-17-1, ಮಹಮದ್ 2-0-13-0

ಆರ್‌ಸಿಬಿ: 152/7 (20 ಓವರ್)
ಗೇಯ್ಲ್ ಸಿ ಯಾದವ್ ಬಿ ಮಾರ್ಕೆಲ್ 13 (9), ಕೆ.ಎಲ್. ರಾಹುಲ್ ಸಿ ಜಯವರ್ಧನೆ ಬಿ ನೆಹ್ರಾ 12 (12), ವಿರಾಟ್ ಕೊಹ್ಲಿ ಸಿ ಜಯವರ್ಧನೆ ಬಿ ಯಾದವ್ 65 (50), ಡಿವಿಲಿಯರ್ಸ್ ರನೌಟ್ (ಮಾರ್ಕೆಲ್) 39 (32), ಮೆಕ್‌ಡೊನಾಲ್ಡ್ ಸಿ ಅಂಡ್ ಬಿ ನದೀಮ್ 0 (2), ಅರುಣ್ ಕಾರ್ತಿಕ್ ರನೌಟ್ (ಪಠಾಣ್/ಮಾರ್ಕೆಲ್) 5 (5), ಸಯ್ಯದ್ ಮಹಮ್ಮದ್ ಸಿ ವಾರ್ನರ್ ಬಿ ಯಾದವ್ 1 (2), ವಿನಯ್ ಕುಮಾರ್ ಅಜೇಯ 1 (1), ರವಿ ರಾಂಪಾಲ್ ಅಜೇಯ 12 (7). ಇತರೆ 4.
ವಿಕೆಟ್ ಪತನ: 1-20, 2-26, 3-129, 4-129, 5-136, 6-138, 7-138.
ಬೌಲಿಂಗ್: ನೆಹ್ರಾ 4-0-31-1, ಮಾರ್ಕೆಲ್ 4-0-32-1, ಇರ್ಫಾನ್ ಪಠಾಣ್ 4-0-39-0, ಉಮೇಶ್ 4-0-22-2, ನದೀಂ 4-0-26-1.

-ಮಲ್ಲಿಕಾರ್ಜುನ ಕರಿಯಪ್ಪನವರ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.