ಶಿ ಶಿಯಾನ್ ಮಣಿಸಿದ ಸಿಂಧು

ತೈಪೇ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವದ ನಂ.1 ಆಟಗಾರ್ತಿ ಚೀನಾದ ಶಿಶಿಯಾನ್ ವಾಂಗ್ ಅವರನ್ನು ಮಣಿಸುವ ಮೂಲಕ ಪಂದ್ಯಾವಳಿಯಲ್ಲಿ ಕ್ವಾರ್ಟರ್ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅನುಪಸ್ಥಿತಿಯಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 16ನೇ ಸ್ಥಾನ ಪಡೆದಿದ್ದ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದು, ವಾಂಗ್ ಅವರನ್ನು 15-21, 21-14, 22-20 ಸೆಟ್ಗಳ ಅಂತರದಲ್ಲಿ ಮಣಿಸಿದರು.
ಪ್ರಸ್ತುತ ವಿಶ್ವದ 6ನೇ ರ್ಯಾಕಿಂಗ್ ಪಡೆದಿರುವ ವಾಂಗ್ ಅವರನ್ನು ಮಣಿಸಲು ಸಿಂಧು 1 ಗಂಟೆ 2 ನಿಮಿಷಗಳ ಕಾಲ ಹೋರಾಟ ನಡೆಸಿದರು. ಪಂದ್ಯದ ಮೊದಲ ಸೆಟ್ನಲ್ಲಿ 15-21 ಅಂಕಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಸಿಂಧು, ನಂತರ ಪ್ರಬಲ ಹೋರಾಟ ನಡೆಸಿದರು. ಎರಡನೇ ಸೆಟ್ನಲ್ಲಿ ಆಕ್ರಮಣಕಾರಿಯಾಗಿ ದಾಳಿ ನಡೆಸಿದ ಅವರು, 21-14 ಅಂಕಗಳೊಂದಿಗೆ ಈ ಸೆಟ್ ಅನ್ನು ತಮ್ಮದಾಗಿಸಿಕೊಂಡರು. 3ನೇ ಸೆಟ್ನಲ್ಲೂ ಆಕ್ರಮಣಕಾರಿ ಮನೋಭಾವ ಮುಂದುವರಿಸಿದ ಅವರು, 22-20 ಅಂಕಗಳನ್ನು ಗಳಿಸುವ ಮೂಲಕ ಈ ಸೆಟ್ನಲ್ಲಿ ಮೇಲುಗೈ ಸಾಧಿಸಿ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದರು.
ಸಿಂಧು ಕ್ವಾರ್ಟರ್ ಫೈನಲ್ ಹಂತದಲ್ಲಿ ಏಳನೇ ಶ್ರೇಯಾಂಕಿತೆ ಜಪಾನ್ನ ಎರಿಕೊ ಹಿರೋಸ್ ಅವರನ್ನು ಎದುರಿಸಲಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನಲ್ಲಿ ಭಾರತದ ಪಿ.ಕಶ್ಯಪ್ ತಮ್ಮ ಎದುರಾಳಿ ತೈಪೇನ ಹಾನ್ ಚೌ ಚು ಅವರನ್ನು ಮಣಿಸಿದ್ದಾರೆ. ತಮ್ಮ ಎದುರಾಳಿಯಿಂದ ಹೆಚ್ಚು ಪ್ರತಿರೋಧ ಪಡೆಯದ ಕಶ್ಯಪ್, ಕೇವಲ 31 ನಿಮಿಷದಲ್ಲಿ ಹಾನ್ ಅವರನ್ನು 21-17, 21-19 ನೇರ ಸೆಟ್ಗಳಿಂದ ಪರಾಭವಗೊಳಿಸಿದರು.
ಈ ಮೂಲಕ 3ನೇ ಸುತ್ತಿಗೆ ಪ್ರವೇಶ ಪಡೆದಿರುವ ಕಶ್ಯಪ್, 15ನೇ ಶ್ರೇಯಾಂಕಿತ ಚೀನಾದ ಹೌನ್ ಗೌ ಅವರನ್ನು ಎದುರಿಸಲಿದ್ದಾರೆ.
ಭಾರತದ ಮತ್ತೊಬ್ಬ ಆಟಗಾರ ಸಾಯಿ ಪ್ರಣೀತ್ ತಮ್ಮ ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ. 36 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಪ್ರಣೀತ್ ತಮ್ಮ ಎದುರಾಳಿ ಜೆಂಗ್ಮಿಂಗ್ ವಾಂಗ್ ವಿರುದ್ಧ 15-21, 16-21 ನೇರ ಸೆಟ್ಗಳ ಸೋಲು ಅನುಭವಿಸಿದ್ದಾರೆ.
ಇನ್ನು ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಪ್ರಾಧ್ನ್ಯ ಗಾಡ್ರೆ ಜೋಡಿಯು ಹಾಂಕಾಂಗ್ನ ಲೋಕ್ ಯಾನ್ ಪೂನ್ ಹಾಗೂ ಯಿಂಗ್ ಸೂ ಟ್ಸೆ ಜೋಡಿ ವಿರುದ್ಧ 15-21, 11-21 ನೇರ ಸೆಟ್ಗಳ ಸೋಲನುಭವಿಸಿದ್ದು, ಈ ಮೂಲಕ ಡಬಲ್ಸ್ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ.
ರ್ಯಾಂಕಿಂಗ್: ಭಾರತೀಯರು ತಟಸ್ಥ
ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಪಡೆದ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಗುರುವಾರ ಬಿಡುಗಡೆ ಮಾಡಿದ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇವರ ಜತೆಗೆ ಪಿ.ವಿ ಸಿಂಧು ಕೂಡ ತಮ್ಮ 16ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ಕೂಡ ತಮ್ಮ 7ನೇ ಸ್ಥಾನದಲ್ಲಿ ಮುಂದುವರಿದರೆ, ಅಜಯ್ ರಾಮ್ ಹಾಗೂ ಸೌರಬ್ ವರ್ಮಾ ಕೂಡ ತಮ್ಮ ಸ್ಥಾನದಲ್ಲಿ ಯಾವುದೇ ಬದಲಾವಣೆ ಕಾಣದೆ ಕ್ರಮವಾಗಿ 30 ಹಾಗೂ 38ನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


