ಕ್ರೀಡೆ

ಸೇಡಿನ ತವಕದಲ್ಲಿ ಸೂಪರ್ ಕಿಂಗ್ಸ್

Published On :

ಕೋಲ್ಕತಾ: ಕಳೆದ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡದ ವಿರುದ್ಧ ತವರಿನಲ್ಲೇ ಸೋತು ಹ್ಯಾಟ್ರಿಕ್ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಶನಿವಾರ ನಡೆಯಲಿರುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಗುರುವಾರ ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ 86 ರನ್‌ಗಳ ಭರ್ಜರಿ ಜಯ ಸಾಧಿಸಿರುವ ಚೆನ್ನೈ ತಂಡ ಆತ್ಮ ವಿಶ್ವಾಸದೊಂದಿಗೆ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದೆ. ಅಲ್ಲದೇ ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಸೋತು, ಮೂರು ಪಂದ್ಯಗಳಲ್ಲಿ ಜಯಗಳಿಸಿದೆ.
ಇತ್ತ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಿದ ಕೆಕೆಆರ್, ಆಡಿರುವ ಐದು ಪಂದ್ಯದಳಲ್ಲಿ ಕೇವಲ ಎರಡರಲ್ಲಿ ಜಯಗಳಿಸಿದ್ದು, ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಅಲ್ಲದೇ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕೆಕೆಆರ್ ತಂಡದ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವುದು ತಂಡಕ್ಕೆ ನುಂಗಲಾರದ ತುತ್ತಾಗಿದೆ.
ಪ್ರಸ್ತುತ ಎರಡೂ ತಂಡಗಳ ಬಲಾಬಲವನ್ನು ನೋಡಿದರೆ ಕೆಕೆಆರ್ ತಂಡಕ್ಕಿಂತ ಚೆನ್ನೈ ತಂಡ ಹೆಚ್ಚು ಸಮತೋಲಿತವಾಗಿದೆ.
ಸಿಎಸ್‌ಕೆ ತಂಡದಲ್ಲಿ ಆರಂಭಿಕರಾದ ಮೈಕ್ ಹಸ್ಸಿ ಉತ್ತಮ ಲಯದಲ್ಲಿದ್ದು, ನಾಯಕ ಧೋನಿ, ಬದ್ರಿನಾಥ್, ಜಡೇಜಾ ಪರಿಸ್ಥಿತಿಗೆ ಅನುಗುಣವಾಗಿ ರನ್‌ಗಳಿಸುತ್ತಿದ್ದಾರೆ. ಇವರ ಜತೆಗೆ ಮುರಳಿ ವಿಜಯ್ ಹಾಗೂ ಸುರೇಶ್ ರೈನಾ ತಮ್ಮ ಲಯ ಕಂಡುಕೊಳ್ಳಬೇಕಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಕ್ರಿಸ್ ಮೊರಿಸ್, ಮೋಹಿತ್ ಶರ್ಮಾ, ಆರ್.ಅಶ್ವಿನ್ , ಆಲ್ಬಿ ಮಾರ್ಕೆಲ್, ಬ್ರಾವೊ ಬೌಲಿಂಗ್ ವಿಭಾಗದಲ್ಲಿ ಉತ್ತಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇನ್ನು ಕೆಕೆಆರ್‌ನ ಆಟಗಾರರ ಪ್ರದರ್ಶನ ನೋಡಿದರೆ, ನಾಯಕ ಗಂಭೀರ್ ಹಾಗೂ ಮಾರ್ಗನ್ ಸ್ಥಿರ ಪ್ರದರ್ಶನ ನೀಡಿದರೆ, ಕಾಲಿಸ್, ತಿವಾರಿ, ಬಿಸ್ಲಾ ಒಂದೆರಡು ಪಂದ್ಯದಲ್ಲಿ ಮಾತ್ರ ರನ್‌ಗಳಿಸಿದ್ದಾರೆ. ಆದರೆ ಯೂಸುಫ್ ಪಠಾಣ್ ತಮ್ಮ ಆರ್ಭಟವನ್ನು ಮರೆತಂತೆ ಆಡುತ್ತಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಸುನಿಲ್ ನಾರಾಯಣ್ ಮೇಲೆ ಕೆಕೆಆರ್ ಹೆಚ್ಚು ಅವಲಂಬಿತವಾಗಿದೆ. ಇವರಿಗೆ ಬಾಲಾಜಿ ಹಾಗೂ ಕಾಲಿಸ್ ತಕ್ಕ ಮಟ್ಟಿಗೆ ಸಾಥ್ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕೆಕೆಆರ್ ತಂಡದಲ್ಲಿ ಇದುವರೆಗೂ ವಯಕ್ತಿಕ ಪ್ರದರ್ಶನ ಹೊರಬಂದಿದೆ ಹೊರತು, ತಂಡದಿಂದ ಸಾಂಘಿಕ ಪ್ರದರ್ಶನ ಬಂದಿಲ್ಲ. ಇತ್ತ ಚೆನ್ನೈ ತಂಡ ಬ್ಯಾಟಿಂಗ್, ಬೌಲಿಂಗ್ ಜತೆಗೆ ಉತ್ತಮ ಆಲ್ರೌಂಡರ್‌ಗಳನ್ನು ಹೊಂದಿದೆ. ಎರಡೂ ತಂಡಗಳ ಬಲಾಬಲದಲ್ಲಿ ಸಿಎಸ್‌ಕೆ ಮೇಲುಗೈ ಸಾಧಿಸಿದ್ದು, ಶನಿವಾರ ಪಂದ್ಯದ ಫೇವರಿಟ್ ತಂಡವಾಗಿದೆ.
ಸಂಭಾವ್ಯ ಆಟಗಾರರು
ಸಿಎಸ್‌ಕೆ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶ್ರೀಕಾಂತ್ ಅನಿರುದ್ಧ, ಬಾಬಾ ಅಪರಾಜಿತ್, ಆರ್.ಅಶ್ವಿನ್, ಎಸ್.ಬದ್ರಿನಾಥ್, ಡ್ವೇನ್ ಬ್ರಾವೊ, ಅಖಿಲ ಧನಂಜಯ, ಡುಪ್ಲಿಸೆಸ್, ಜಾಸನ್ ಹೊಲ್ಡರ್, ಬೆನ್ ಹಿಲ್ಫಾನಾಸ್, ಮೈಕ್ ಹಸ್ಸಿ, ಇಮ್ತಿಯಾಜ್ ಅಹಮದ್, ರವೀಂದ್ರ ಜಡೇಜಾ, ಶಡಬ್ ಜಕಾಟಿ, ಆರ್.ಕಾರ್ತಿಕೇಯನ್, ನುವಾನ್ ಕುಲಸೇಕರ, ಬೆನ್ ಲಾಹ್ಲಿನ್, ರೋನಿತ್ ಮೋರೆ, ಆಲ್ಬಿ ಮಾರ್ಕೆಲ್, ಕ್ರಿಸ್ ಮೊರಿಸ್, ಡರ್ಕ್ ನ್ಯಾನಿಸ್, ಸುರೇಶ್ ರೈನಾ, ಅಂಕಿತ್ ರಜ್‌ಪೂತ್, ವೃದ್ಧಿಮಾನ್ ಸಾಹಾ, ವಿಜಯ್ ಶಂಕರ್, ಮೊಹಿತ್ ಶರ್ಮಾ, ಮುರಳಿ ವಿಜಯ್.

ಕೆಕೆಆರ್: ಗೌತಮ್ ಗಂಭೀರ್ (ನಾಯಕ), ಇಯಾನ್ ಮಾರ್ಗನ್, ಮನೋಜ್ ತಿವಾರಿ, ದೇಬಬ್ರತಾ ದಾಸ್, ಬ್ರಾಡ್ ಹ್ಯಾಡಿನ್, ಮನ್ವಿಂದರ್ ಬಿಸ್ಲಾ, ಬ್ರೆಂಡನ್ ಮೆಕಲಂ, ಶಕೀಬ್ ಅಲ್ ಹಸನ್, ರಿಯಾನ್ ಟೆನ್ ಡಸ್ಕೇಟ್, ಜಾಕ್ ಕಾಲಿಸ್, ಯೂಸುಫ್ ಪಠಾಣ್, ಲಕ್ಷ್ಮೀ ರತನ್ ಶುಕ್ಲಾ, ರಜತ್ ಭಾಟಿಯಾ, ರಿಯಾನ್ ಮೆಕ್‌ಲಾರೆನ್, ಬ್ರೆಟ್ ಲೀ, ಜೇಮ್ಸ್ ಪ್ಯಾಟಿನ್ಸನ್, ಲಕ್ಷ್ಮೀಪತಿ ಬಾಲಾಜಿ, ಇಕ್ಬಾಲ್ ಅಬ್ದುಲ್ಲಾ, ಮಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್, ಸರಬ್ಜೀತ್ ಲಡ್ಡಾ, ಸುನಿಲ್ ನಾರಾಯಣ್, ಸಚಿತ್ರಾ ಸೇನಾನಾಯಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.