ಆರ್‌ಸಿಬಿಗೆ ಗೆಲವು ತಂದ ಗೇಯ್ಲ್, ತಿವಾರಿ

ಬೆಂಗಳೂರು: ಕ್ರಿಸ್ ಗೇಯ್ಲ್ ಮತ್ತು ಸೌರಭ್ ತಿವಾರಿ ಜವಾಬ್ದಾರಿ ಹಾಗೂ ತಾಳ್ಮೆಯ ಆಟದ ನೆರವಿನಿಂದ ಆರ್‌ಸಿಬಿ ತಂಡ, ಶನಿವಾರ ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.
ಆದರೆ, ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಜಯ ಕಂಡಿತ್ತು. ಆ ಪಂದ್ಯಕ್ಕೆ ಹೋಲಿಸಿದರೆ, ಶನಿವಾರದ ಜಯ ಆರ್‌ಸಿಬಿ ಪಾಲಿಗೆ ನೀರಸವಾದ ಜಯವಾಗಿತ್ತು. ಪ್ರತಿ ಪಂದ್ಯವೂ ರೋಚಕವಾಗಿರಲೇಬೇಕಿಲ್ಲ ಎನ್ನುವುದು ಬೇರೆ ಮಾತು!
ಶನಿವಾರದ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ 19.4 ಓವರ್‌ಗಳಲ್ಲಿ 117 ರನ್‌ಗಳ ಸಾಧಾರಣ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ, 17.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ, ಗೆಲವಿನ ಪತಾಕೆ ಹಾರಿಸಿತು.
ರಾಜಸ್ಥಾನ ನೀಡಿದ್ದ ಗುರಿಯನ್ನು ಬೆನ್ನಟ್ಟಿ ಒತ್ತಡಕ್ಕೆ ಸಿಲುಕಿದ್ದ ಆರ್‌ಸಿಬಿ ಪರವಾಗಿ ಆರಂಭಿಕರಾದ ಗೇಯ್ಲ್ ಮತ್ತು ದಿಲ್ಷಾನ್ ಉತ್ತಮವಾಗೇ ಇನಿಂಗ್ಸ್ ಆರಂಭಿಸಿದರು. ಮೊದಲ ಆರು ಓವರ್‌ಗಳು ಮುಗಿಯುವ ಹೊತ್ತಿಗೆ ತಂಡದ ಮೊತ್ತವನ್ನು 50 ರನ್ ಅಂಚಿಗೆ (48 ರನ್) ತಂದು ನಿಲ್ಲಿಸುವಲ್ಲಿ ಈ ಇಬ್ಬರೂ ಯಶಸ್ವಿಯಾದರು. ಆದರೆ, 7ನೇ ಓವರ್‌ನಲ್ಲಿ ಈ ಜೋಡಿ ಬೇರ್ಪಟ್ಟಿತು. ದಿಲ್ಷಾನ್, ವ್ಯಾಟ್ಸನ್ ಬೌಲಿಂಗ್‌ನಲ್ಲಿ ಯಾಗ್ನಿಕ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ, ತಂಡದ ಮೊತ್ತ 53 ರನ್.
ದಿಲ್ಷಾನ್ ಹೊರನಡೆದ ನಂತರ ಬಂದಿದ್ದ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಫಾಕ್ನರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಆಗ, ಕ್ರೀಸ್‌ಗೆ ಕಾಲಿಟ್ಟಿದ್ದು ಎಬಿ ವಿಲಿಯರ್ಸ್.
ಆದರೆ, ವೈಯಕ್ತಿಕವಾಗಿ ಕೇವಲ 7 ರನ್ ಗಳಿಸಿದ ಡಿ ವಿಲಿಯರ್ಸ್ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು.
ನಂತರ ಬಂದಿದ್ದು ಎಡಗೈ ಆಟಗಾರ ಸೌರಭ್ ತಿವಾರಿ. ಗೇಯ್ಲ್ ಹಾಗೂ ತಿವಾರಿ- ಇಬ್ಬರೂ ಕತ್ತಿಯ ಮೇಲಿನ ನಡಿಗೆಯಂತೆ ಆಟವಾಡಿದರು.
ತಿವಾರಿ ಹೊಡೆಯಲಿಲ್ಲ.... ಕ್ರಿಸ್ ಸಿಡಿದೇಳಲಿಲ್ಲ. ಇದು ಗೇಯ್ಲ್ ಅವರಿಂದ ಬಾಣ-ಬಿರುಸುಗಳಂಥ ಬೌಂಡರಿ, ಸಿಕ್ಸರ್‌ಗಳನ್ನು ನಿರೀಕ್ಷಿಸುತ್ತಿದ್ದ ಆರ್‌ಸಿಬಿ ಅಭಿಮಾನಿಗಳು ಆಕಳಿಸುವಂತಾಯಿತು. ಇವರಿಬ್ಬರ ಸಮಯೋಚಿತ ಆಟದಿಂದ ತಂಡ ನಿಧಾನವಾಗಿ ಗೆಲವಿನ ಗೆರೆಯತ್ತ ಹೆಜ್ಜೆ ಇಟ್ಟಿತು.
ಕುಸಿದ ರಾಜಸ್ಥಾನ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ವ್ಯಾಟ್ಸನ್ ಹಾಗೂ ಅಜಿಂಕ್ಯ ರಹಾನೆ ಇಬ್ಬರೂ ಕ್ರಮವಾಗಿ 6 ಮತ್ತು 14 ರನ್ ಗಳಿಸಿ ಔಟಾದರು.
ಆನಂತರ, ಜೋಡಿಯಾದ ನಾಯಕ ದ್ರಾವಿಡ್ ಹಾಗೂ ಸ್ಟುವರ್ಟ್ ಬಿನ್ನಿ ಕುಸಿದಿದ್ದ ಇನಿಂಗ್ಸ್‌ಗೆ ಶಕ್ತಿ ತುಂಬಿದರು. 3ನೇ ವಿಕೆಟ್‌ಗೆ 40 ರನ್ ಸೇರಿಸಿದ ಇಬ್ಬರೂ ತಂಡದ ರನ್ ರೇಟ್ ಹೆಚ್ಚಿಸಲು ನೆರವಾದರು.
ಆದರೆ, ಬಿನ್ನಿ ಹಾಗೂ ದ್ರಾವಿಡ್ ಇಬ್ಬರೂ ಔಟಾದ ನಂತರ, ತಂಡ ಮತ್ತೆ ಕುಸಿತ ಅನುಭವಿಸಿತು. ಯಾಗ್ನಿಕ್, ಫಾಕ್ನರ್, ಚಾಂಡಿಲಾ, ಟೈಟ್, ಕೇವಲ ಒಂದಂಕಿ ರನ್ ಮಾತ್ರ ಗಳಿಸಿದರೆ, 'ಸ್ಲಾಪ್ ಗೋಟ್' ವಿವಾದ ಎಬ್ಬಿಸಿದ್ದ ಶ್ರೀಶಾಂತ್, ಶೂನ್ಯ ಗಳಿಸಿದರು.
ಆರ್‌ಸಿಬಿ ಬೌಲರ್‌ಗಳಾದ ವಿನಯ್ ಕುಮಾರ್ ಹಾಗೂ ಆರ್ ಪಿಸಿ ತಲಾ ಮೂರು ವಿಕೆಟ್ ಕಬಳಿಸಿ, ರಾಜಸ್ಥಾನ ತಂಡ 117 ರನ್ ಸಾಧಾರಣ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಕೋರ್ ಬೋರ್ಡ್
ರಾಜಸ್ಥಾನ್ ರಾಯಲ್ಸ್: 117 (19.4 ಓವರ್)
ವ್ಯಾಟ್ಸನ್ ಸಿ ಕಾರ್ತಿಕ್ ಬಿ ರಾಮ್‌ಪಾಲ್ 6(9), ರಹಾನೆ ಸಿ ದಿಲ್ಶಾನ್ ಬಿ ಉನಾದ್ಕತ್ 14(13), ದ್ರಾವಿಡ್ ಸಿ ರಾಮ್‌ಪಾಲ್ ಬಿ ಕಾರ್ತಿಕ್ 35(31), ಬಿನ್ನಿ ಸಿ ಅರುಣ್ ಬಿ ವಿನಯ್ 33(20), ಹಾಡ್ಜ್ ಸಿ ಅರುಣ್ ಬಿ ವಿನಯ್ 13(17), ಯಾಗ್ನಿಕ್ ಸಿ ರಾಮ್‌ಪಾಲ್ ಬಿ ಆರ್.ಪಿ ಸಿಂಗ್ 5(4), ಫಾಕ್ನರ್ ಸಿ ರಾಮ್‌ಪಾಲ್ ಬಿ ಆರ್.ಪಿ ಸಿಂಗ್ 3(7), ಚಂಡಿಲಾ ಅಜೇಯ 4(6), ಶ್ರೀಶಾಂತ್ ಎಲ್‌ಬಿಡಬ್ಲ್ಯೂ ಬಿ ವಿನಯ್ 0(2), ಟೈಟ್ ಬಿ ಆರ್.ಪಿ ಸಿಂಗ್ 1(3), ತ್ರಿವೇದಿ ಸಿ ಆರ್.ಪಿ ಸಿಂಗ್ ಬಿ ರಾಮ್‌ಪಾಲ್ 3(6), ಇತರೆ 0.
ವಿಕೆಟ್ ಪತನ: 1-10, 2-26, 3-66, 4-97, 5-105, 6-108, 7-110, 8-111, 9-112, 10-117
ಬೌಲಿಂಗ್: ರಾಮ್‌ಪಾಲ್ 3.4-1-19-2, ಆರ್.ಪಿ ಸಿಂಗ್ 4-0-13-3, ಉನಾದ್ಕತ್ 4-0-32-1, ವಿನಯ್ 4-0-18-3, ಕಾರ್ತಿಕ್ 4-0-35-1.
ಆರ್‌ಸಿಬಿ: 123/3 (17.5 ಓವರ್)
ದಿಲ್ಷಾನ್ ಸಿ ಯಾಗ್ನಿಕ್ ಬಿ ವ್ಯಾಟ್ಸನ್ 25(22), ಗೇಯ್ಲ್ ಅಜೇಯ 49(44), ಕೊಹ್ಲಿ ಬಿ ಫಾಕ್ನರ್ 1(4), ಡಿವಿಲಿಯರ್ಸ್ ಸಿ ಚಂಡಿಲಾ ಬಿ ವ್ಯಾಟ್ಸನ್ 7(8), ತಿವಾರಿ ಅಜೇಯ 25(29), ಇತರೆ 16.
ವಿಕೆಟ್ ಪತನ: 1-53, 2-57, 3-64
ಬೌಲಿಂಗ್: ಚಂಡಿಲಾ 4-0-21-0, ಶ್ರೀಶಾಂತ್ 1-0-9-0, ಟೈಟ್ 3-0-30-0, ಫಾಕ್ನರ್ 4-0-21-1, ವ್ಯಾಟ್ಸನ್ 2-0-11-2, ತ್ರಿವೇದಿ 3.5-0-26-0
ಚೇತನ್ ಓ.ಆರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


