ಕ್ರೀಡೆ

ಚೆನ್ನೈನಲ್ಲಿ ಗೆಲ್ಲುವುದೇ ದ್ರಾವಿಡ್ ಬಳಗ ?

Published On :

ಚೆನ್ನೈ: ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ವಿಶ್ವಾಸ ಹೆಚ್ಚಿಸಿಕೊಂಡಿರುವ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಚಮತ್ಕಾರದ ಪ್ರದರ್ಶನದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಾಂಘಿಕ ಹೋರಾಟ ನೀಡುವ ಮೂಲಕ ಜಯ ಕಾಣತೊಡಗಿದೆ.
ಇನ್ನೊಬ್ಬ ಆಲ್ರೌಂಡರ್ ಡ್ವೇನ್ ಬ್ರಾವೋ ಮತ್ತು ಕ್ರಿಸ್ ಮೊರಿಸ್ ಹಾಗೂ ಮೋಹಿತ್ ಶರ್ಮಾ ಸಹ ತಂಡಕ್ಕೆ ಆಶ್ರಯವಾಗುತ್ತಿದ್ದಾರೆ. ಆದರೆ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಸಾಧಾರಣ ಮೊತ್ತ ಬೆನ್ನಟ್ಟಿದ್ದ ಚೆನ್ನೈ ಬ್ಯಾಟ್ಸ್‌ಮನ್‌ಗಳು ಲಗುಬಗನೆ ಪೆವಿಲಿಯನ್ ಸೇರಿದ್ದು ತಂಡದಲ್ಲಿ ಆತಂಕ ಉಂಟುಮಾಡಿದೆ.
ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ 17 ಓವರ್‌ಗಳಲ್ಲಿ 89 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ, ನಂತರ ಬಂದ ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ 4 ವಿಕೆಟ್ ಅಂತರದಿಂದ ಜಯ ತಂದುಕೊಟ್ಟರು.
ಜಡೇಜಾ ಅವರೊಂದಿಗೆ ಫಾರ್ಮ್‌ಗೆ ಮರಳಿರುವ ಮೈಕ್ ಹಸ್ಸಿ ಅಗ್ರ ಕ್ರಮಾಂಕದಲ್ಲಿ ತಾಳ್ಮೆಯ ಬ್ಯಾಟಿಂಗ್ ನೆಡೆಸುವ ಮೂಲಕ ತಂಡ ಜಯ ಕಾಣುವಲ್ಲಿ ಅಮೋಘ ಕೊಡುಗೆಯನ್ನು ನೀಡಿದ್ದರು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 50 ಎಸೆತಗಳಲ್ಲಿ ಅಜೇಯ 65 ರನ್ ಕಲೆ ಹಾಕಿದ್ದರು. ಆ ಪಂದ್ಯದಲ್ಲಿ ಚೆನ್ನೈ 86 ರನ್‌ಗಳ ಅಂತರದಿಂದ ಜಯ ಕಂಡುಕೊಂಡಿತ್ತು. ಆದರೆ, ತಂಡದ ಭರವಸೆಯ ಬ್ಯಾಟ್ಸ್‌ಮನ್‌ಗಳಾದ ಮುರಳಿ ವಿಜಯ್ ಮತ್ತು ಸುರೇಶ್ ರೈನಾ ಫಾರ್ಮ್ ಕಳೆದುಕೊಂಡಿರುವುದು ಮಹೇಂದ್ರ ಸಿಂಗ್ ಧೋನಿ  ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಶರ್ಮಾ, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ವೀರೇಂದ್ರ ಸೆಹ್ವಾಗ್ ವಿಕೆಟ್ ಸೇರಿದಂತೆ 10 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.
ವೇಗದ ಬೌಲಿಂಗ್ ವಿಭಾಗದಲ್ಲಿ ಅಲ್ಬೀ ಮಾರ್ಕೆಲ್‌ಗೆ ಶರ್ಮಾ ಸಾಥ್ ನೀಡುತ್ತಿದ್ದರೆ, ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಇನ್ನು ಪ್ರವಾಸಿ ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲುವ ಮೂಲಕ ಬ್ಯಾಟಿಂಗ್ ವೈಫಲ್ಯದ ಆತಂಕದಲ್ಲಿ ಸಿಲುಕಿಕೊಂಡಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ, ತವರಿನಿಂದ ಹೊರಗೆ ಆಡುವ ಪಂದ್ಯಗಳಲ್ಲಿ ತನ್ನ ಪ್ರದರ್ಶನದಲ್ಲಿ ಚೇತರಿಕೆ ಕಂಡುಕೊಳ್ಳಬೇಕಾಗಿದೆ.
ಅಜಿಂಕ್ಯ ರಹಾನೆ, ರಾಹುಲ್ ದ್ರಾವಿಡ್ ಅವರೊಂದಿಗೆ ಶ್ರೀಶಾಂತ್ ಮತ್ತು ಸಿದ್ಧಾರ್ತ್ ತ್ರಿವೇದಿ ಇದುವರೆಗೂ ಪಂದ್ಯಾವಳಿಯಲ್ಲಿ ಕೊಂಚ ಸ್ಥಿರ ಪ್ರದರ್ಶನ ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಉತ್ತಮ ಆಟಗಾರರನ್ನೇ ಹೊಂದಿರುವ ರಾಜಸ್ಥಾನ ಚೆನ್ನೈ ವಿರುದ್ಧ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಂಭಾವ್ಯ ಆಟಗಾರರು
ಸಿಎಸ್‌ಕೆ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶ್ರೀಕಾಂತ್ ಅನಿರುದ್ಧ, ಬಾಬಾ ಅಪರಾಜಿತ್, ಆರ್.ಅಶ್ವಿನ್, ಎಸ್.ಬದ್ರಿನಾಥ್, ಡ್ವೇನ್ ಬ್ರಾವೊ, ಅಖಿಲ ಧನಂಜಯ, ಡುಪ್ಲಿಸೆಸ್, ಜಾಸನ್ ಹೊಲ್ಡರ್, ಬೆನ್ ಹಿಲ್ಫಾನಾಸ್, ಮೈಕ್ ಹಸ್ಸಿ, ಇಮ್ತಿಯಾಜ್ ಅಹಮದ್, ರವೀಂದ್ರ ಜಡೇಜಾ, ಶಡಬ್ ಜಕಾಟಿ, ಆರ್.ಕಾರ್ತಿಕೇಯನ್, ನುವಾನ್ ಕುಲಸೇಕರ, ಬೆನ್ ಲಾಹ್ಲಿನ್, ರೋನಿತ್ ಮೋರೆ, ಆಲ್ಬಿ ಮಾರ್ಕೆಲ್, ಕ್ರಿಸ್ ಮೊರಿಸ್, ಡರ್ಕ್ ನ್ಯಾನಿಸ್, ಸುರೇಶ್ ರೈನಾ, ಅಂಕಿತ್ ರಜ್‌ಪೂತ್, ವೃದ್ಧಿಮಾನ್ ಸಾಹಾ, ವಿಜಯ್ ಶಂಕರ್, ಮೊಹಿತ್ ಶರ್ಮಾ, ಮುರಳಿ ವಿಜಯ್.
ರಾಜಸ್ಥಾನ ರಾಯಲ್ಸ್: ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಅಜಿತ್ ಚಾಂಡಿಲಾ, ಅಂಕಿತ್ ಚವಾಣ್, ಅಮಿತ್ ಸಿಂಗ್, ಅಶೋಕ್ ಮನೇರಿಯಾ, ಬ್ರಾಡ್ ಹಾಡ್ಜ್, ಬ್ರಾಡ್ ಹಾಗ್, ದಿಶಾಂತ್ ಯಗ್ನಿಕ್, ಫಿಡೆಲ್ ಎಡ್ವರ್ಡ್ಸ್, ಹರ್ಮೀತ್ ಸಿಂಗ್, ಜೇಮ್ಸ್ ಫಾಕ್ನರ್, ಕೆವಿನ್ ಕೂಪರ್, ಕುಶಾಲ್ ಜನಿತ್ ಪೆರೇರಾ, ಒವೈಸ್ ಶಾ, ಪ್ರವೀಣ್ ತಂಬೆ, ರಾಹುಲ್ ಶುಕ್ಲಾ, ಶ್ರೀಶಾಂತ್, ಸಚಿನ್ ಬೇಬಿ, ಸ್ಯಾಮ್ಯುಯೆಲ್ ಬದ್ರೀ, ಸಂಜು ಸ್ಯಾಮ್‌ಸನ್, ಶೇನ್ ವ್ಯಾಟ್ಸನ್, ಶಾನ್ ಟೈಟ್, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್ ತ್ರಿವೇದಿ, ಸ್ಟುವರ್ಟ್ ಬಿನ್ನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.