ನಾಬ್ಸ್ ಮಾಸ್ಟರ್‌ಪ್ಲಾನ್

ನಮ್ಮ ಹಾಕಿ ಭವಿಷ್ಯ ಬದಲಾಗಲಿದೆ....
ಹೌದು, ಇದಕ್ಕಾಗಿ ಟೊಂಕ ಕಟ್ಟಿರುವುದು ಕೋಚ್ ಮೈಕೆಲ್ ನಾಬ್ಸ್. ತಮ್ಮದೇ ಮಾಸ್ಟರ್ ಪ್ಲಾನ್ ಮೂಲಕ ಭವಿಷ್ಯದಲ್ಲಿ ಉತ್ತಮ ತಂಡವನ್ನು ಕಟ್ಟುವ ಬಗ್ಗೆಹೆಚ್ಚು ಗಮನ ಹರಿಸುತ್ತಿದ್ದಾರೆ ಈ ಗುರು.
ಇದೇ ವರ್ಷಾಂತ್ಯಕ್ಕೆ ಕಿರಿಯರ ಹಾಕಿ ವಿಶ್ವಕಪ್ ನಡೆಯಲಿದೆ. ಇದು ಭಾರತದ ಹಾಕಿ ಮಟ್ಟಿಗೆ ಸುವರ್ಣ ಸಮಯ. ಎಲ್ಲ ಆಟಗಾರರ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಈ ವಿಶ್ವಕಪ್‌ನಲ್ಲಿ ಆಡಲಿರುವ ಆಟಗಾರರು ಭವಿಷ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುವರು ಎಂಬ ಚಿತ್ರಣ ನೀಡಲಿದೆ. ಹಾಗಾಗಿಯೇ ಮೈಕೆಲ್ ನಾಬ್ಸ್ ಈ ಕಿರಿಯರ ವಿಶ್ವಕಪ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ವಿಶ್ವಕಪ್‌ನಲ್ಲಿ ಕಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕು ಹಾಗೂ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಬಗ್ಗೆ ಅರಿವು ಮೂಡಿ ಅನುಭವ ಪಡೆಯಬೇಕೆಂಬುದು ನಾಬ್ಸ್ ಯೋಚನೆ. ಹೀಗಾಗಿ ಕಳೆದ ಸುಲ್ತಾನ್ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ, ತಂಡದಲ್ಲಿ ಬಹುತೇಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಯಿತು. ಕಿರಿಯ ಆಟಗಾರರಿಗೆ ತಂಡದಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು.
6 ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಭಾರತ ತಂಡ 5ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಆದಾಗ್ಯೂ ಭಾರತ ತಂಡದ ಸಾಧನೆ ಬಗ್ಗೆ ನಾಬ್ಸ್ ತೃಪ್ತಿಪಟ್ಟರು. ಏಕೆಂದರೆ ಹೆಚ್ಚು ಕಿರಿಯ ಆಟಗಾರರನ್ನು ಒಳಗೊಂಡಿದ್ದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೊರತುಪಡಿಸಿ ಉಳಿದ ಎಲ್ಲಾ ದೇಶಗಳ ಮೇಲೂ ಉತ್ತಮ ಪ್ರತಿರೋಧ ನೀಡಿತು. ಇದು ಮೈಕಲ್ ನಾಬ್ಸ್‌ಗೆ ಮುಂದಿನ ವಿಶ್ವಕಪ್‌ಗೆ ಧನಾತ್ಮಕ ಸೂಚನೆ ಸಿಕ್ಕಂತಾಗಿದೆ.
ಭಾರತದ ದೇಶಿಯ ಹಾಕಿ ತರಬೇತಿ ಹಾಗೂ ಅದರ ಗುಣಮಟ್ಟ ಉತ್ತಮವಾಗಿಲ್ಲ. ಇದು ಭಾರತೀಯ ಹಾಕಿ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ. ಇಲ್ಲಿನ ದೇಶಿ ಹಾಕಿಗೂ ಹಾಗೂ ಅಂತಾರಾಷ್ಟ್ರೀಯ ಪಂದ್ಯಕ್ಕೂ ಅಜಗಜಾಂತರ ವ್ಯತ್ಯಾಸವುಂಟು. ಹಾಗಾಗಿ ಕಿರಿಯ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಕಲ್ಪಿಸಿಕೊಟ್ಟ ನಾಬ್ಸ್, ಈ ಪಂದ್ಯಾವಳಿಯಲ್ಲಿ ಆಟಗಾರರು ಯಾವ ವಿಭಾಗದಲ್ಲಿ ನಿಯಂತ್ರಣ ಸಾಧಿಸಬೇಕೆಂದು ಅರಿತಿದ್ದಾರೆ. ಅಲ್ಲದೆ, ಆಟಗಾರರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯ ಸವಾಲುಗಳು ಎದುರಾಗುತ್ತವೆ, ಇಲ್ಲಿ ಯಾವ ಮಟ್ಟದ ಪ್ರದರ್ಶನ ನೀಡಬೇಕು, ಅದಕ್ಕೆ ಯಾವ ರೀತಿ ತಯಾರಿ ನಡೆಸಬೇಕು ಎಂಬ ಅನುಭವ ಪಡೆದಿದ್ದು ಅದಕ್ಕೆ ತಕ್ಕಂತೆ ಅಭ್ಯಾಸ ನಡೆಸಲು ವೇದಿಕೆ ಕಲ್ಪಿಸಿಕೊಡಲಾಯಿತು. ಅಲ್ಲದೆ, ತಮ್ಮ ದೇಶಿ ಪಂದ್ಯದ ವ್ಯವಸ್ಥೆಗೂ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆಗೂ ಇರುವ ವ್ಯತ್ಯಾಸ ತಿಳಿದು ಅದಕ್ಕೆ ತಕ್ಕ ರೀತಿಯಲ್ಲಿ ಆಟಗಾರರು ಸಜ್ಜಾಗಲು ಸಹಾಯಕವಾಗಿದೆ.
ಈ ಎಲ್ಲಾ ಯೋಜನೆಗಳು, ತಯಾರಿಗಳು ವಿಶ್ವಕಪ್‌ನಲ್ಲಿ ಪರಿಕ್ಷೆಯಾಗಲಿದ್ದು, ನಾಬ್ಸ್ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ಸಿಗುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಮತ್ತೆ ಅಂತಾರಾಷ್ಟ್ರೀಯ ಹಾಕಿಯಲ್ಲಿ ಭಾರತ ತನ್ನ ಪ್ರಭುತ್ವ ಸಾಧಿಸಲು ನಾಬ್ಸ್ ದೀರ್ಘಾವಧಿಯ ಯೋಜನೆ ರೂಪಿಸಿದ್ದು, ಉತ್ತಮ ತಂಡ ಕಟ್ಟಿ ವಿಜಯಿಯಾದರೆ ಅದು ನಮಗೆಲ್ಲ ಹೆಮ್ಮೆಯ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


