ಕಶ್ಯಪ್ಗೆ ಸೋಲು
ನವದೆಹಲಿ: ಭಾರತದ ಅಗ್ರ ಬ್ಯಾಡ್ಮಿಂಟನ್ ತಾರೆ ಪರುಪಲ್ಲಿ ಕಶ್ಯಪ್ ಇಂಡಿಯಾ ಓಪನ್ ಸೂಪರ್ ಸಿರೀಸ್ನ ಪುರುಷರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲೇ ಸೋಲನುಭವಿಸುವ ಮೂಲಕ ಆಘಾತ ಅನುಭವಿಸಿದ್ದಾರೆ.
ಕಶ್ಯಪ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಇಂಡೋನೇಷ್ಯಾದ ತೌಫಿಕ್ ಹಿದಾಯತ್ ವಿರುದ್ಧ 21-13, 21-23, 18-21 ಸೆಟ್ಗಳಿಂದ ಸೋಲುವ ಮುನ್ನ ಬಲಿಷ್ಠ ಹೋರಾಟ ನಡೆಸಿದರು.
ಕಶ್ಯಪ್ ಮತ್ತು ತೌಫಿಕ್ ಇದುವರೆಗೂ ಆರು ಬಾರಿ ಪರಸ್ಪರ ಎದುರಾಗಿದ್ದು, ಕಶ್ಯಪ್ ಒಂದು ಬಾರಿ ಸಹ ಜಯ ಸಾಧಿಸಿಲ್ಲ.
ಮೊದಲ ಸೆಟ್ನಲ್ಲಿ ಆಕ್ರಮಣಕಾರಿ ಹೋರಾಟ ನಡೆಸಿದ ಕಶ್ಯಪ್ ಪಂದ್ಯದಲ್ಲಿ ಎದುರಾಳಿ ತೌಫಿಕ್ ಚೇತರಿಸಿಕೊಳ್ಳುವ ಮೊದಲೇ ವಿಜಯ ಸಾಧಿಸಿದ್ದರು.
ನೆಟ್ ಸಮೀಪ ಹೊಡೆತಗಳನ್ನು ಡ್ರಾಪ್ ಮಾಡಿದ ಕಶ್ಯಪ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ, ದ್ವಿತೀಯ ಸೆಟ್ನಲ್ಲಿ ತಿರುಗಿಬಿದ್ದ ತೌಫಿಕ್ ಬಿರುಸಿನ ಹೋರಾಟಕ್ಕೆ ಮುಂದಾದರು. ಆದರೆ, ಕಶ್ಯಪ್ ಸಹ ಹಿಂದೆ ಬೀಳಲಿಲ್ಲ. ಹೀಗಾಗಿ ಒಂದು ಹಂತದಲ್ಲಿ ಇಬ್ಬರೂ ಆಟಗಾರರು 20-20 ಅಂಕಗಳಿಂದ ಸಮಬಲ ಸಾಧಿಸಿದ್ದರು. ಸ್ಮ್ಯಾಷ್ ಬಾರಿಸಿದ ಕಶ್ಯಪ್ ಮ್ಯಾಚ್ ಪಾಯಿಂಟ್ ಗಳಿಸಿದ್ದರು. ಆದರೆ, ನಂತರ ನಿರಂತರ ತಪ್ಪುಗಳನ್ನು ಎಸಗಿದ್ದು ಕಶ್ಯಪ್ಗೆ ಹಿನ್ನಡೆ ಉಂಟುಮಾಡಿತು. ಇದರ ಸದುಪಯೋಗಪಡಿಸಿಕೊಂಡ ತೌಫಿಕ್ ಮೇಲುಗೈ ಸಾಧಿಸಿದರು.
ಇದು ಪಂದ್ಯಕ್ಕೆ ಹೊಸ ತಿರುವು ನೀಡಿತು. ಮೂರನೇ ಸೆಟ್ ಸಹ ಸಮಬಲದಿಂದಲೇ ಸಾಗಿತಾದರೂ, ಅಂತ್ಯದಲ್ಲಿ ತೌಫಿಕ್ ಮುನ್ನಡೆ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. 'ತೌಫಿಕ್ ನನ್ನ ಹೊಡೆತಗಳನ್ನು ಸಮರ್ಥವಾಗಿ ಎದುರಿಸಿದರು. ಹೀಗಾಗಿ ನೆಟ್ ಬಳಿಯೇ ಶ್ಯಾಟ್ ಡ್ರಾಪ್ ಮಾಡಲು ಯತ್ನಿಸಿದೆ. ನೆಟ್ ಬಳಿ ಆತ ಬರುವುದನ್ನು ನಾನು ತಪ್ಪಿಸಬೇಕಾಗಿತ್ತು. ಇದು ಯಾರು ಬೇಕಾದರೂ ಗೆಲ್ಲಬೇಕಾದ ಪಂದ್ಯವಾಗಿತ್ತು. ಆದರೆ, ಅಂತ್ಯದಲ್ಲಿ ತೌಫಿಕ್ ಉತ್ತಮ ಹೋರಾಟ ನಡೆಸಿದರು' ಎಂದು ಪಂದ್ಯದ ನಂತರ ಕಶ್ಯಪ್ ಹೇಳಿದರು.
ಏತನ್ಮಧ್ಯೆ, ಕೆ. ಶ್ರೀಕಾಂತ್ ದಿನದ ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.6 ಆಟಗಾರ ಡೆನ್ಮಾರ್ಕ್ನ ಜಾನ್ ಓ ಜಾರ್ಗನ್ಸೆನ್ ವಿರುದ್ಧ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅರವಿಂದ್ ಭಟ್ ವಿಶ್ವದ ನಂ.8 ಆಟಗಾರ ಕೆನಿಚಿ ಟೊಗೊ ವಿರುದ್ಧ ನಿರೀಕ್ಷೆಯಂತೆ ಸೋಲನುಭವಿಸಿದ್ದಾರೆ.
ಆದರೆ, ದಿನದ ಅಚ್ಚರಿ ಫಲಿತಾಂಶವೆಂದರೆ ಜಾರ್ಗನ್ಸೆನ್ ವಿರುದ್ಧ ಶ್ರೀಕಾಂತ್ ಜಯ ಸಾಧಿಸಿದ್ದು, ಶ್ರೀಕಾಂತ್ ಪಂದ್ಯದಲ್ಲಿ 21-7, 18-21, 21-12 ಸೆಟ್ಗಳ ಅಂತರದಿಂದ ಜಯ ಕಂಡುಕೊಂಡರು.
ಪಂದ್ಯದಲ್ಲಿ ಶ್ರೀಕಾಂತ್ 33 ಸ್ಮ್ಯಾಷ್ಗಳನ್ನು ಬಾರಿಸಿದರೆ, ಜಾರ್ಗನ್ಸೆನ್ 17 ಸ್ಮ್ಯಾಷ್ಗಳನ್ನು ಬಾರಿಸಿದರು. ಮೊದಲ ಸೆಟ್ನಲ್ಲಿ ಸುಲಭವಾಗಿ ಜಯ ಸಾಧಿಸಿದ ಶ್ರೀಕಾಂತ್, ದ್ವಿತೀಯ ಸೆಟ್ನಲ್ಲಿ ಅಲ್ಪ ಅಂತರದಿಂದ ಕೈಚೆಲ್ಲಿದರು. ಆದರೆ, ನಿರ್ಣಾಯಕ ಮತ್ತು ಮೂರನೇ ಸೆಟ್ನಲ್ಲಿ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

