'ಸಚಿನ್ ದಾಖಲೆ ಮುರಿಯಲು ಆತನೇ ಹುಟ್ಟಬೇಕು'
ಮುಂಬೈ: ಸಚಿನ್ ಹುಟ್ಟುಹಬ್ಬದ ಈ ಸಂದರ್ಭದಲ್ಲಿ, ಹಲವಾರು ಖ್ಯಾತನಾಮರು ಅವರಿಗೆ ಶುಭ ಹಾರೈಸಿ, ಅವರ ಸಾಧನೆಗಳನ್ನು ಕೊಂಡಾಡಿದ್ದಾರೆ.
ಸಚಿನ್ ಬಗ್ಗೆ ಮೆಚ್ಚುಗೆಯ ಮಾತನಾಡಿದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್, 'ಸಚಿನ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ, ಅವರ ಇನಿಂಗ್ಸ್ ವೃದ್ಧಿಯಾಗಲಿ' ಎಂದು ಕ್ರಿಕೆಟ್ ಪರಿಭಾಷೆಯಲ್ಲೇ ತಮ್ಮ ಶುಭಾಷಯ ತಿಳಿಸಿದರು. ನಂತರ, 'ಸಚಿನ್ ಹೆಸರಿನಲ್ಲಿರುವ ಹಲವಾರು ದಾಖಲೆಗಳನ್ನು ಯಾರು ಮುರಿಯುತ್ತಾರೆ ಎಂದು ಜನ ಕೇಳುತ್ತಾರೆ. ಇಂಥ ಸಂದರ್ಭಗಳಲ್ಲಿ ನಾನು ದಿಗ್ಮೂಢನಾಗುತ್ತೇನೆ. ಆದರೆ, ನನ್ನ ಪ್ರಕಾರ, ಸಚಿನ್ ಅವರ ದಾಖಲೆಗಳನ್ನು ಮುರಿಯಲು ಸಚಿನ್ ಅವರೇ ಮತ್ತೆ ಹುಟ್ಟಿಬರಬೇಕಷ್ಟೇ' ಎಂದರು.
ಇದೇ ವರ್ಷ ನವೆಂಬರ್ನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುತ್ತಿರುವುದರ ಬಗ್ಗೆ ಹೇಳಿದ ಅವರು, 'ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ, ಸಚಿನ್ ತಮ್ಮ 200 ಟೆಸ್ಟ್ ಪಂದ್ಯಗಳನ್ನು ಆಡಿದ ಮತ್ತೊಂದು ದಾಖಲೆ ಬರೆಯಲಿದ್ದಾರೆ. ಆದರೆ, ಅದು ಮತ್ತೊಂದು ಅಮೋಘ ಸಾಧನೆಯಾಗಲಿದೆ' ಎಂದರು.
ಸಚಿನ್ ಬಗ್ಗೆ ಇಷ್ಟು ಹೇಳಿದ ವೆಂಗ್ಸರ್ಕಾರ್, 20 ವರ್ಷಗಳ ಹಿಂದಿನ ನೆನಪೊಂದನ್ನು ಮೆಲುಕು ಹಾಕಿದರು. ಸಚಿನ್ ಬಗ್ಗೆ ಆ ನೆನಪನ್ನು ಅವರು ಹಂಚಿಕೊಂಡಿದ್ದು ಹೀಗೆ....
'ಆಗಿನ್ನೂ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದಲ್ಲಿ ಹೊಸದಾಗಿ ಕಾಲಿಟ್ಟಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬಂದಿರಲಿಲ್ಲ. ಆದರೆ, ಕಪಿಲ್ದೇವ್ನಂಥಾ ಹಿರಿಯರಿಗೆ ಸಚಿನ್ ಅಂದ್ರೆ ಪುಟ್ಟ ಹುಡುಗ ಅನ್ನೋ ಮನೋಭಾವ. ಏಕೆಂದರೆ, ಕಪಿಲ್ ಹಾಗೂ ಇನ್ನಿತರ ಅಂದಿನ ಭಾರತ ತಂಡದಲ್ಲಿನ ಆಟಗಾರರು ಯಾರೂ ಸಚಿನ್ ಆಟ ನೋಡಿರಲಿಲ್ಲ. ಆದರೆ, ನನಗೆ ಮಾತ್ರ ಸಚಿನ್ ಆಟ ಗೊತ್ತಿತ್ತು.
ಅದೊಂದು ದಿನ, ಭಾರತೀಯ ಕ್ರಿಕೆಟ್ ತಂಡ ಅಭ್ಯಾಸ ನಡೆಸುತ್ತಿದ್ದ ಸಿಸಿಐ ಕ್ರೀಡಾಂಗಣಕ್ಕೆ ಸಚಿನ್ಗೆ ಬರಲು ಹೇಳಿದೆ. ಸಚಿನ್ ಬಂದರು. ನಾನು ಕಪಿಲ್ ಅವರಿಗೆ ಸಚಿನ್ಗೆ ಬೌಲ್ ಮಾಡಲು ಹೇಳಿದೆ. ಆದರೆ, ಕಪಿಲ್ ಆರಂಭದಲ್ಲಿ ಇದಕ್ಕೆ ಒಪ್ಪಲಿಲ್ಲ. ನಂತರ, ಅಲ್ಲಿ ಅಭ್ಯಾಸ ನಡೆಸುತ್ತಿದ್ದ ಅರ್ಷದ್ ಅಯೂಬ್, ಚೇತನ್ ಶರ್ಮಾ ಹಾಗೂ ಮಣಿಂದರ್ ಸಿಂಗ್ ಅವರೆಲ್ಲರಿಗೂ ಬೌಲ್ ಮಾಡಲು ಹೇಳಿದೆ. ಆದರೆ, ಯಾರೂ ಪುಟ್ಟ ಹುಡುಗನಿಗೆ ಬೌಲ್ ಮಾಡಲು ಒಲ್ಲೆ ಎಂದರು. ಆದರೆ, ಕಪಿಲ್ ಅವರಿಗೆ ಪದೇ ಪದೇ ಕೇಳಿಕೊಂಡ ನಂತರವಷ್ಟೇ ಅವರು ಬೌಲ್ ಮಾಡಲು ಒಪ್ಪಿದರು. ಆಗಲೇ, ಅಲ್ಲಿದ್ದ ಎಲ್ಲರಿಗೂ ಸಚಿನ್ ಎಷ್ಟು ಪ್ರತಿಭಾವಂತ ಎಂದು ಗೊತ್ತಾಗಿದ್ದು' ಎಂದು ವೆಂಗ್ ಸರ್ಕಾರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

