ಕ್ರೀಡೆ

ಕ್ವಾರ್ಟರ್ ಫೈನಲ್‌ಗೆ ಸಿಂಧು

Published On :

ನವದೆಹಲಿ: ಭಾರತದ ಉದಯೋನ್ಮುಖ ತಾರೆ ಪಿ.ವಿ. ಸಿಂಧು, ಇಂಡಿಯಾ ಓಪನ್ ಸೂಪರ್ ಸೀರಿಸ್‌ನ ಮೂರನೇ ಸುತ್ತನ್ನು ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು, ಚೀನಾದ ಯು ಸುನ್ ಅವರನ್ನು 19-21, 21-19, 21-15 ಅಂತರದಲ್ಲಿ ಸೋಲಿಸಿ, ಮುಂದಿನ ಸುತ್ತಿಗೆ ಕಾಲಿಟ್ಟರು.
ಮೊದಲ ಸುತ್ತಿನ ಸೆಟ್‌ನಲ್ಲಿ ಇಬ್ಬರ ಆಟ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಂಕ ಗಳಿಕೆಯಲ್ಲಿ ಚೀನಾದ ಆಟಗಾರ್ತಿ ಯಾವಾಗಲೂ ಸಿಂಧು ಅವರಿಗಿಂತ ಮುಂದೆ ಸಾಗುತ್ತಿದ್ದರೂ, ಸಿಂಧು ಮಾತ್ರ ಯಾವುದೇ ರೀತಿಯಲ್ಲೂ ರಾಜಿಯಾಗದೇ ತೀವ್ರ ಪ್ರತಿಸ್ಪರ್ಧೆ ನೀಡಿದ ಅಂಕ ಗಳಿಕೆಯಲ್ಲಿ ಯು ಸುನ್ ಅವರ ನೆರಳಿನಂತೆ ಹಿಂಬಾಲಿಸುತ್ತಿದ್ದರು.
'ಸೇರಿಗೆ ಸವ್ವಾ ಸೇರು' ಎಂಬಂತೆ ಸಾಗಿದ ಈ ಕದನದ ಒಂದು ಹಂತದಲ್ಲಿ ಇಬ್ಬರೂ 17-17ರ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ, ಎರಡು ಅಂಕಗಳನ್ನು ವೇಗವಾಗಿ ಪಡೆದುಕೊಂಡ ಯು ಸುನ್, ಈ ಅಂತರವನ್ನು 17-19ಕ್ಕೆ ಹಿಗ್ಗಿಸಿಕೊಂಡರು. ಇದಾದ ಕೆಲ ನಿಮಿಷಗಳಲ್ಲೇ, ಸಿಂಧು ಸಹ ಎರಡು ಅಂಕಗಳನ್ನು ಗಳಿಸಿ ಅಂತರವನ್ನು 19-19ರ ಸಮಬಲ ಸಾಧಿಸಿದರು. ಆದರೆ, ವೇಗವಾಗಿ ಮತ್ತೆರಡು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಸುನ್, ಈ ಗೇಮ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.  
ಎರಡನೇ ಸೆಟ್‌ನಲ್ಲೂ ಈ ಇಬ್ಬರ ಕಾದಾಟ ಹೀಗೇ ಮುಂದುವರೆಯಿತು. ಇಲ್ಲೂ ಸುನ್ ಅವರು ಅಂಕಗಳಿಕೆಯಲ್ಲಿ ಮುಂದೆ ಸಾಗುತ್ತಿದ್ದರೆ, ಸಿಂಧು ಅವರನ್ನು ಹಿಂಬಾಲಿಸುತ್ತಿದ್ದರು. ಗೇಮ್‌ನ ಒಂದು ಹಂತದಲ್ಲಿ 13-18ರ ಅಂತರದಲ್ಲಿ ಮುಂದಿದ್ದ ಸುನ್ ಅವರಿಗೆ ಸೆಡ್ಡು ಹೊಡೆದ ಸಿಂಧು 18-18ರ ಸಮಬಲ ಸಾಧಿಸಿದರು.
ಅತ್ತ, ಸುನ್ ಸಹ ಪಟ್ಟು ಬಿಡದೇ 19-19ರ ಸಮಬಲ ಸಾಧಿಸಿದರು. ಆದರೆ, ಇಲ್ಲಿಂದ ಮುಂದಕ್ಕೆ ಸುನ್ ವಿರುದ್ಧ ಅಕ್ಷರಶಃ ಮುಗಿಬಿದ್ದ ಸಿಂಧು, ಸೆಟ್‌ನಲ್ಲಿ 21-19ರ ಅಂತರದಲ್ಲಿ ಜಯ ಸಾಧಿಸಿದರು.  ಮೂರನೇ ಹಾಗೂ ಅಂತಿಮ ಸೆಟ್‌ನಲ್ಲೂ ಇಬ್ಬರ ಹೋರಾಟ ಹೀಗೇ ಮುಂದುವರೆಯಿತು. ಅಂತಿಮವಾಗಿ, ಈ ಸೆಟ್‌ನಲ್ಲೂ ಗೆಲವು ಸಾಧಿಸುವುದರೊಂದಿಗೆ ಪಂದ್ಯದಲ್ಲೂ ಜಯ ಸಾಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.