ಪಂಜಾಬ್ ಕಿಂಗ್ಸ್- ನೈಟ್ ರೈಡರ್ಸ್ ಕಾದಾಟ
ಕೋಲ್ಕತಾ: ನಿಧಾನವಾಗಿ ಜಯದ ಹಾದಿ ಹಿಡಿದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಜಯದ ಹಾದಿಗಾಗಿ ತಡಕಾಡುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪರಸ್ಪರ ಸೆಣಸಲಿವೆ.
ಆಡಿರುವ ಏಳು ಪಂದ್ಯಗಳಲ್ಲಿ 5ರಲ್ಲಿ ಸೋಲು ಕಂಡಿರುವ, ಅದರಲ್ಲೂ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಹಾಲಿ ಚಾಂಪಿಯನ್ ಕೋಲ್ಕತಾ ಕೇವಲ 4 ಪಾಯಿಂಟ್ಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.
ಹೀಗಾಗಿ ಕೋಲ್ಕತಾ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ, ಉಳಿದಿರುವ 9 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸುವ ಅಗತ್ಯವಿದೆ.
ಇನ್ನೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವಾಸ ವೃದ್ಧಿಸಿಕೊಂಡಿದೆ. ಆದರೆ, ಪಂದ್ಯಾವಳಿಯಲ್ಲಿ ಇದುವರೆಗೂ ಪಂಜಾಬ್ ನೀಡಿದ ಪ್ರದರ್ಶನದ ಅವಲೋಕನ ಮಾಡಿದರೆ, ದುರ್ಬಲ ತಂಡ ಎನಿಸಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಕೋಲ್ಕತಾ ಗೆಲ್ಲುವ ಫೇವರಿಟ್ ಎನಿಸಿದೆ.
ರೈಡರ್ಸ್ಗೆ ಗಾಯದ ಕಾಟ: ಕೋಲ್ಕತಾ ತಂಡ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾದ ಜಾಕ್ ಕಾಲಿಸ್ ಮೊಣಕಾಲು ನೋವು ಮಾಡಿಕೊಂಡಿದ್ದು, ಬೆರಳಿಗೆ ಗಾಯ ಮಾಡಿಕೊಂಡಿರುವ ಮನೋಜ್ ತಿವಾರಿ ಹಾಗೂ ಲಕ್ಷ್ಮಿ ರತನ್ ಶುಕ್ಲಾ ಅಸ್ಥಿರಜ್ಜು ನೋವಿನಿಂದ ಬಳಲುತ್ತಿದ್ದಾರೆ.
ಗಾಯಗೊಂಡಿರುವ ಈ ಮೂವರು ಆಟಗಾರರ ಸ್ಥಾನದಲ್ಲಿ ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲಂ, ರೆಯಾನ್ ಟೆನ್ ಡಾಯಿಶಟ್, ಮನ್ವಿಂದರ್ ಬಿಸ್ಲಾ ಹಾಗೂ ಮೊಹ್ಮದ್ ಶಮಿ ಅಹ್ಮದ್ ಆಡುವ 11 ಆಟಗಾರರಲ್ಲಿ ಸೇರುವ ತವಕದಲ್ಲಿದ್ದಾರೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತವರಿನ ಅಂಗಣದಲ್ಲಿ ಕೆಕೆಆರ್ ವಿರುದ್ಧ ನಾಲ್ಕು ರನ್ಗಳ ಅಂತರದಿಂದ ಸೋತ ಸೇಡನ್ನು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಕಳೆದ ಬಾರಿ ಚಾಂಪಿಯನ್ ನೈಟ್ ರೈಡರ್ಸ್, ಈ ಬಾರಿ ಗೆಲ್ಲುವ ಚೈತನ್ಯ ಕಳೆದುಕೊಂಡಂತೆ ಕಾಣುತ್ತಿದೆ. ತಂಡದ ಪ್ರಮುಖ ಬೌಲರ್ ಸುನಿಲ್ ನಾರಾಯಣ್ ಪ್ರತಿ ಓವರ್ನಲ್ಲೂ ಆಕ್ರಮಣಕಾರಿ ದಾಳಿಯನ್ನು ನಡೆಸುತ್ತಿದ್ದಾರೆ. ಆದರೆ, ಎದುರಾಳಿ ಬ್ಯಾಟ್ಸ್ಮನ್ಗಳು ಅವರನ್ನು ದಂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ನೈಟ್ ರೈಡರ್ಸ್ ತಂಡಕ್ಕೆ ಇನ್ನಷ್ಟು ಮೊನಚಾದ ಬೌಲಿಂಗ್ ಪ್ರದರ್ಶಿಸುವ ಅಗತ್ಯವಿದ್ದು, ತಂಡದ ಬ್ಯಾಟಿಂಗ್ ವಿಭಾಗ ವೈಫಲ್ಯ ಕಾಣುತ್ತಿರುವುದು ಪ್ರಮುಖ ಆತಂಕವಾಗಿ ಕಾಡುತ್ತಿದೆ.
ಇನ್ನೊಂದೆಡೆ ಪಂದ್ಯಾವಳಿಯಲ್ಲೇ ದುರ್ಬಲ ಎನಿಸಿಕೊಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್, ನಿಧಾನವಾಗಿ ಜಯದ ಲಯ ಕಂಡುಕೊಂಡಿದೆ. ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 5 ವಿಕೆಟ್ ಅಂತರದಿಂದ ಜಯ ಸಾಧಿಸಿದ ನಂತರ ಅದು ತನ್ನ ವಿಶ್ವಾಸವನ್ನು ಮತ್ತಷ್ಟು ವೃದ್ಧಿಸಿಕೊಂಡಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 24 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಫಾರ್ಮ್ಗೆ ಮರಳಿದ ಹರ್ಮಿತ್ ಸಿಂಗ್ ಕೋಲ್ಕತಾ ವಿರುದ್ಧ ತಂಡಕ್ಕೆ ನೆರವಾಗುವ ಸಾಧ್ಯತೆಗಳಿವೆ. ಇನ್ನು ಬ್ಯಾಟಿಂಗ್ ವಿಭಾಗದ ಅಗ್ರ ಕ್ರಮಾಂಕದಲ್ಲಿ ಮಂದೀಪ್ ಸಿಂಗ್ ತಕ್ಕ ಪ್ರದರ್ಶನ ತೋರುತ್ತಿದ್ದು, ಡೇವಿಡ್ ಹಸ್ಸಿ ಹಾಗೂ ಡೇವಿಡ್ ಮಿಲ್ಲರ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಶ್ರಯವಾಗುತ್ತಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ರಿಕಿ ಪಾಂಟಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಂತೆ, ಕಿಂಗ್ಸ್ ಇಲೆವೆನ್ ಸಹ ಗಿಲ್ ಕ್ರಿಸ್ಟ್ ಅವರನ್ನು ಕೈಬಿಡುವ ಅಗತ್ಯವಿದೆ. ಡೇವಿಡ್ ಹಸ್ಸಿಗೆ ತಂಡ ಮುನ್ನಡೆಸುವ ಜವಾಬ್ದಾರಿ ನೀಡುವುದು ಸೂಕ್ತವೆನಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

