ಕ್ರೀಡೆ

'ಗೋಡೆ' ಪಡೆಗೆ ಸನ್ ಸವಾಲು

Published On :

ಜೈಪುರ: ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಜಯದ ಹಾದಿಗೆ ಮರಳಲು ತಡಕಾಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡ ತವರಿನ ಅಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.
ರಾಜಸ್ಥಾನ ರಾಯಲ್ಸ್ ಇದುವರೆಗೂ ತವರಿನ ಅಂಗಣದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಜಯ ಕಂಡುಕೊಂಡಿದೆ. ಇದು ತಂಡಕ್ಕೆ ಪಂದ್ಯದಲ್ಲಿ ಇನ್ನಷ್ಟು ಬಲ ನೀಡಬಹುದು. ಆದರೆ, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ವಿರುದ್ಧ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವುದು ತಂಡದಲ್ಲಿ ಆತಂಕದ ವಾತಾವರಣ ಸೃಷ್ಟಿಮಾಡಿದೆ.
ಶೇನ್ ವ್ಯಾಟ್ಸನ್ ಫಾರ್ಮ್ಗೆ ಮರಳಿರುವುದು ರಾಜಸ್ಥಾನಕ್ಕೆ ವರವಾಗಿ ಪರಿಣಮಿಸಿದೆ. ವ್ಯಾಟ್ಸನ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮತ್ತು ಬೌಲಿಂಗ್ನೊಂದಿಗೂ ಮಿಂಚಿದ್ದರು. ಸನ್ರೈಸರ್ಸ್ ವಿರುದ್ಧವೂ ವ್ಯಾಟ್ಸನ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
ನಾಯಕ ರಾಹುಲ್ ದ್ರಾವಿಡ್ ಅವರೊಂದಿಗೆ, ವ್ಯಾಟ್ಸನ್, ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಬ್ರಾಡ್ ಹಾಡ್ಜ್, ಸ್ಟುವರ್ಟ್ ಬಿನ್ನಿ ಹಾಗೂ ದಿಶಾಂತ್ ಯಾಗ್ನಿಕ್ ಸಹ ಇನ್ನಷ್ಟು ಗಟ್ಟಿ ಪ್ರದರ್ಶನ ನೀಡುವ ಅಗತ್ಯವಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವ್ಯಾಟ್ಸನ್ ಫಾರ್ಮ್ಗೆ ಮರಳಿದ್ದು, ಜೇಮ್ಸ್ ಫಾಕ್ನರ್ ಹಾಗೂ ಸಿದ್ದಾರ್ಥ್ ತ್ರಿವೇದಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಮುಂಗೋಪಿ ಶ್ರೀಶಾಂತ್ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಸ್ಪಿನ್ ವಿಭಾಗದಲ್ಲಿ ಅಜಿತ್ ಚಾಂಡಿಲ್ ಮತ್ತು ಅಂಕಿತ್ ಚೌಹಾಣ್ ತಂಡಕ್ಕೆ ನೆರವಾಗುತ್ತಿದ್ದಾರೆ.
ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿದ ಸನ್ರೈಸರ್ಸ್ ಹೈದರಾಬಾದ್ಗೆ ಶಿಖರ್ ಧವನ್ ಲಭ್ಯರಾಗುವುದರೊಂದಿಗೆ ಗೆಲ್ಲುವ ಕಾತರದಲ್ಲಿದೆ. ಚೆನ್ನೈ ವಿರುದ್ಧ ಮೊದಲ ಬಾರಿಗೆ ಅಂಗಣಕ್ಕಿಳಿದಿದ್ದ ಧವನ್ ಅಜೇಯ 63 ರನ್ ಗಳಿಸುವ ಮೂಲಕ ತಂಡಕ್ಕೆ ಆಶ್ರಯವಾಗಿದ್ದರು.
ಬೌಲಿಂಗ್ ಶಕ್ತಿಯ ಮೇಲೆ ಪಂದ್ಯ ಗೆಲ್ಲುತ್ತಿದ್ದ ತಂಡಕ್ಕೆ ಈಗ ಧವನ್ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ನಾಯಕ ಕುಮಾರ ಸಂಗಕ್ಕಾರ ಮತ್ತು ಪಾರ್ಥೀವ್ ಪಟೇಲ್ ರನ್ ಗಳಿಸುವಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಆದರೆ, ಆಶೀಶ್ ರೆಡ್ಡಿ, ತಿಸರಾ ಪೆರೇರಾ, ಕೆಮರೂನ್ ವೈಟ್ ಹಾಗೂ ಡರೇನ್ ಸಾಮಿ ಉತ್ತಮ ಮೊತ್ತ ಕಲೆ ಹಾಕಲು ನೆರವಾಗುತ್ತಿದ್ದಾರೆ.
ಹೈದರಾಬಾದ್ಗೆ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ನೇತೃತ್ವದ ಬೌಲಿಂಗ್ ವಿಭಾಗವೇ ಪ್ರಮುಖ ಶಕ್ತಿಯಾಗಿದೆ.
ಸ್ಟೇಯ್ನ್ ಅವರೊಂದಿಗೆ ಇಶಾಂತ್ ಶರ್ಮಾ, ಅಮಿತ್ ಮಿಶ್ರಾ ಹಾಗೂ ಪೆರೇರಾ ಎದುರಾಳಿ ತಂಡಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. 14 ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ತಕ್ಕ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ.
ಅಂಕಪಟ್ಟಿಯಲ್ಲಿ ಮೇಲೆರಲು ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲ್ಲುವುದು ಮಹತ್ವದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.