ಕ್ರೀಡೆ

ಕ್ರಿಸ್ ಗೇಯ್ಲ್ ಭಯದಲ್ಲಿ ಮುಂಬೈ

Published On :

ಮುಂಬೈ: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 6ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡಗಳು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ.
ಪಂದ್ಯದಲ್ಲಿ ಮುಂಬೈ ಪರ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇದ್ದರೂ, ಆರ್ಸಿಬಿ ಪರ ಬ್ಯಾಟ್ನೊಂದಿಗೆ ಅಬ್ಬರಿಸುತ್ತಿರುವ ಕೆರಿಯಬಿಯನ್ನ ಕ್ರಿಸ್ ಗೇಯ್ಲ್ ಪಂದ್ಯದಲ್ಲಿ ಸ್ಟಾರ್ ಆಟಗಾರ ಎನಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ನಂತರ ವಿಶ್ವಾಸ ವೃದ್ಧಿಸಿಕೊಂಡಿರುವ ಮುಂಬೈ, ಪಂದ್ಯದಲ್ಲಿ ಗೆಲವು ಸಾಧಿಸಬೇಕಾದರೆ ಕ್ರಿಸ್ ಗೇಯ್ಲ್ ಅವರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸಲು ವಿಶೇಷ ಕಾರ್ಯತಂತ್ರ ಹೆಣೆಯಬೇಕಾದ ಅಗತ್ಯವಿದೆ.
ಕ್ರಿಸ್ ಗೇಯ್ಲ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸುವುದರೊಂದಿಗೆ, ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ ಭಾರೀ ಅಂತರದಿಂದ ಜಯ ಕಂಡುಕೊಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗೇಯ್ಲ್ ಮಿಂಚುವ ಸಾಧ್ಯತೆಗಳಿವೆ.
ಗೇಯ್ಲ್ ಫಾರ್ಮ್ನಲ್ಲಿರುವ ಹಿನ್ನೆಲೆಯಲ್ಲಿ, ಒಂದು ವೇಳೆ ಮುಂಬೈ ಮೊದಲು ಬ್ಯಾಟಿಂಗ್ ಮಾಡಿದರೆ ಸಾಧ್ಯವಾದಷ್ಟು ಹೆಚ್ಚಿನ ಮೊತ್ತ ಪೇರಿಸುವುದು ಸೂಕ್ತವಾಗಿದೆ.
ಕೋಲ್ಕತಾ ವಿರುದ್ಧ ಆಕರ್ಷಕ ಪ್ರದರ್ಶನ ನೀಡಿದ್ದ ಡ್ವೈನ್ ಸ್ಮಿತ್ ಮತ್ತು ರೋಹಿತ್ ಶರ್ಮಾ ಮುಂಬೈಗೆ ಜಯ ತಂದುಕೊಟ್ಟಿದ್ದರು. ಆದರೆ, ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್ ತೆಂಡೂಲ್ಕರ್ ಕೋಲ್ಕತಾ ವಿರುದ್ಧ ಮಿಂಚುವಲ್ಲಿ ವಿಫಲವಾಗಿದ್ದರು. ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಸೋಲನುಭವಿಸಿದ ನಂತರ ಕೋಲ್ಕತಾ ವಿರುದ್ಧ 5 ವಿಕೆಟ್ ಅಂತರದಿಂದ ಜಯ ಸಾಧಿಸಿರುವುದು ಕೋಲ್ಕತಾ ತಂಡದ ವಿಶ್ವಾಸ ವೃದ್ಧಿಸಿದೆ ಎಂದೇ ಹೇಳಬಹುದು.
ಆದರೆ, ತಂಡದಲ್ಲಿ ಸ್ಟಾರ್ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದರೂ, ಇದುವರೆಗೂ ಪಂದ್ಯಾವಳಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಜಯ ಸಾಧಿಸಿದೆ. ಆರಂಭಿಕರು ಭದ್ರ ಬುನಾದಿ ಹಾಕುವಲ್ಲಿ ವೈಫಲ್ಯ ಕಾಣುತ್ತಿರುವುದು ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ.
ಆದರೆ, ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ರಿಕಿ ಪಾಂಟಿಂಗ್, ಈ ಪಂದ್ಯದಲ್ಲಿ ಆಡುವರೇ ಎಂಬುದು ಕುತೂಹಲ ಮೂಡಿಸಿದೆ. ಇದುವರೆಗೂ 6 ಪಂದ್ಯಗಳನ್ನಾಡಿರುವ ಪಾಂಟಿಂಗ್ ಕೇವಲ 52 ರನ್ ದಾಖಲಿಸಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿರುವ ಮಿಚೆಲ್ ಜಾನ್ಸನ್, ಲಸಿತ್ ಮಾಲಿಂಗ ಅವರೊಂದಿಗೆ ತಕ್ಕ ಸಾಥ್ ನೀಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಹರ್ಭಜನ್ ಸಿಂಗ್ ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ. 7 ಪಂದ್ಯಗಳನ್ನು ಆಡಿರುವ ಹರ್ಭಜನ್ ಇದುವರೆಗೂ ಕೇವಲ 7 ವಿಕೆಟ್ ಮಾತ್ರ ಪಡೆದಿದ್ದಾರೆ. ಆದರೆ, ಪ್ರಗ್ಯಾನ್ ಓಜಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನೊಂದೆಡೆ ಆರ್ಸಿಬಿ ತಂಡ ತನ್ನ ಸ್ಟಾರ್ ಬ್ಯಾಟ್ಸ್ಮನ್ ಗೇಯ್ಲ್ ಫಾರ್ಮ್ನಲ್ಲಿ ಮುಂದುವರಿಯುವ ನಿರೀಕ್ಷೆ ಹೊಂದಿದೆ. 432 ರನ್ ಗಳಿಸಿರುವ ಗೇಯ್ಲ್ ಆರೇಂಜ್ ಕ್ಯಾಪ್ ಧರಿಸಿದ್ದಾರೆ. 333 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಸಹ ಫಾರ್ಮ್ನಲ್ಲಿದ್ದು, ಡಿವಿಲಿಯರ್ಸ್ ಸಹ ಅಚ್ಚುಕಟ್ಟಾದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.
ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ವೇಗಿ ಆರ್. ವಿನಯ್ ಕುಮಾರ್ ಮತ್ತು ರವಿ ರಾಮ್ಪಾಲ್ ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿಗೆ ನೆರವಾಗುತ್ತಿದ್ದಾರೆ. ವಿನಯ್ 8 ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ವಿರುದ್ಧ ಏಪ್ರಿಲ್ 4 ರಂದು ನಡೆದ ಪಂದ್ಯದಲ್ಲಿ ವಿನಯ್ ಕುಮಾರ್ 3 ವಿಕೆಟ್ ಪಡೆಯುವುದರೊಂದಿಗೆ ಆರ್ಸಿಬಿ 2 ರನ್ಗಳ  ಜಯ ಸಾಧಿಸಿತ್ತು. ಇನ್ನೊಬ್ಬ ವೇಗದ ಬೌಲರ್ ಜಯದೇವ್ ಉನಾದ್ಕತ್ 7 ಪಂದ್ಯಗಳಿಂದ 7 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.