ಕ್ರೀಡೆ

ಆನಂದ್ ಪವಾರ್, ಸಿಂಧು ಪರಾಭವ

Published On :

ನವದೆಹಲಿ: ಇಂಡಿಯಾ ಸೂಪರ್ ಸೀರಿಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಪಂದ್ಯಾವಳಿಯ ಸೂಪರ್ ಸಿರೀಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಶನಿವಾರ ನಡೆದ ಪುರುಷರ ಹಾಗೂ ಮಹಿಳೆಯರ ವಿಭಾಗಗಳ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತದ ಆಟಗಾರರು ಸೋಲು ಅನುಭವಿಸಿದರು.
ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಆನಂದ್ ಪವಾರ್ ಅವರು ಜಪಾನ್‌ನ ಕೆನೆಚಿ ಟ್ಯಾಗೊ ಅವರ ವಿರುದ್ಧ 21-16, 21-11 ಅಂತರದಲ್ಲಿ ಸೋಲು ಕಂಡರೆ, ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು ಥಾಯ್ಲೆಂಡ್‌ನ ರ್ಯಾಚೆನೊಕ್ ಇಂಟಾನನ್ ವಿರುದ್ಧ 21-12, 21-6 ಅಂತರದಲ್ಲಿ ಪರಾಭವಗೊಂಡರು.
ಆನಂದ್ ಸೋಲು: ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಅಜಯ್ ಜಯರಾಮ್ ವಿರುದ್ಧ ಜಯಗಳಿಸಿ, ಪುರುಷರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದ ಆನಂದ್, ಶನಿವಾರ ನಡೆದ ಟ್ಯಾಗೊ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಜಯ ಗಳಿಸಲು ವಿಫಲರಾದರು. ಪಂದ್ಯಾವಳಿಯ 6ನೇ ಶ್ರೇಯಾಂಕದ ಟ್ಯಾಗೊ ಅವರ ಮಿಂಚಿನ ಆಟದ ಮುಂದೆ ಶ್ರೇಯಾಂಕ ರಹಿತ ಆನಂದ್ ಶರಣಾಗಲೇಬೇಕಾಯ್ತು. ಪಂದ್ಯದ ಮೊದಲ ಸೆಟ್‌ನಲ್ಲಿ ಟ್ಯಾಗೊಗೆ ತೀವ್ರ ಪೈಪೋಟಿ ನೀಡಿದ್ದ ಆನಂದ್, ಪಂದ್ಯದ ಎರಡನೇ ಸುತ್ತಿನಲ್ಲಿ ಮಂದಗತಿಯ ಆಟ ಪ್ರದರ್ಶಿಸಿದರು. ಉತ್ತಮ ಪೈಪೋಟಿಯ ಹೊರತಾಗಿಯೂ ಮೊದಲ ಸೆಟ್‌ನಲ್ಲಿ ಸೋಲು ಕಂಡಿದ್ದ ಆನಂದ್, ಎರಡನೇ ಸೆಟ್‌ನಲ್ಲೂ ಪರಾಭವಗೊಂಡರು.
ಇಬ್ಬರ ನಡುವಿನ ಮೊದಲ ಸೆಟ್‌ನ ಹೋರಾಟ ಕುತೂಹಲಕಾರಿಯಾಗಿತ್ತು. ಮೊದಲ ಸೆಟ್‌ನ ಒಂದು ಹಂತದಲ್ಲಿ 6-6ರ ಸಮಬಲ ಸಾಧಿಸಿದ್ದ ಪವಾರ್, ನಂತರ ಹಿನ್ನಡೆ ಅನುಭವಿಸಿದರು. ಅತ್ತ, ಟ್ಯಾಗೊ ಅವರು ಮಿಂಚಿನ ಆಟವಾಡಿ, ಅಂಕಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು.
ಇಬ್ಬರ ಅಂಕಗಳ ಅಂತರ 13-12 ಇದ್ದಾಗ, ಐದು ನೇರ ಅಂಕಗಳನ್ನು ಗಳಿಸಿದ ಟ್ಯಾಗೊ ತಮ್ಮ ಹಾಗೂ ಆನಂದ್ ಅವರ ನಡುವಿನ ಅಂಕಗಳ ಅಂತರವನ್ನು 18-13ಕ್ಕೆ ಹೆಚ್ಚಿಸಿಕೊಂಡರು. ಆದರೆ, ಆನಂದ್ ಅಷ್ಟು ಸುಲಭವಾಗಿ ಸೆಟ್ ಬಿಟ್ಟುಕೊಡಲಿಲ್ಲ. ಈ ಹಂತದಲ್ಲಿ ನಾಲ್ಕು ನೇರ ಅಂಕಗಳನ್ನು ಗಳಿಸಿದ ಅವರು, ಅಂತರವನ್ನು 16-18ಕ್ಕೆ ತಗ್ಗಿಸಿಕೊಂಡರು. ಆದರೆ, ಟ್ಯಾಗೊ ಅವರ ಮಿಂಚಿನ ಆಟದಿಂದ ಹಿನ್ನಡೆ ಕಂಡ ಆನಂದ್, ಈ ಸೆಟ್‌ನಲ್ಲಿ 16-21ರ ಅಂತರದಲ್ಲಿ ಪರಾಭವಗೊಂಡರು. ಇನ್ನು, ದ್ವಿತೀಯ ಸೆಟ್‌ನ ಆರಂಭದಲ್ಲಂತೂ ಟ್ಯಾಗೊಗೆ ಆನಂದ್ ಸೆಡ್ಡು ಹೊಡೆದರು. ಇಬ್ಬರೂ 4-4ರ ಸಮಬಲ ಸಾಧಿಸುವರೆಗೂ ಆಟ ಹೀಗೇ ನಡೆದಿತ್ತು. ಆದರೆ, ನೇರವಾಗಿ ಐದು ಅಂಕಗಳನ್ನು ಗಳಿಸಿದ ಟ್ಯಾಗೊ, ಈ ಸೆಟ್‌ನಲ್ಲಿ 9-4ರ ಮುನ್ನಡೆ ಕಂಡುಕೊಂಡರು.
ಇಲ್ಲಿಂದ ಮುಂದಕ್ಕೆ ಟ್ಯಾಗೊ ಅವರ ಆಟ, ಆನಂದ್ ಅವರಿಂತ ಉತ್ತಮವಾಗಿತ್ತು. ತ್ವರಿತಗತಿಯಲ್ಲಿ ಅಂಕಗಳನ್ನು ಪೇರಿಸುತ್ತಾ ಹೋದ ಅವರು, ಆನಂದ್‌ಗೆ ಸವಾಲಾಗಿ ಪರಿಣಮಿಸಿದರು. ಇವರ ಸವಾಲಿನ ಮುಂದೆ ಮಂಕಾದ ಆನಂದ್, ಚುರುಕಿನ ಆಟ ಪ್ರದರ್ಶಿಸಲಿಲ್ಲ. ಅತ್ತ, ಅಂಕಗಳಿಕೆಯಲ್ಲಿ ಮುಂದೆ ಮುಂದೆ ಸಾಗುತ್ತಲೇ ಹೋದ ಟ್ಯಾಗೊ ಈ ಸೆಟ್ ಅನ್ನು 21-11ರ ದೊಡ್ಡ ಅಂತರದಲ್ಲಿ ಗೆದ್ದುಕೊಂಡರು.

ಸಿಂಧುಗೆ ನಿರಾಸೆ
ನವದೆಹಲಿ: ಇಲ್ಲಿನ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಪಿ.ವಿ. ಸಿಂಧು, ವಿಶ್ವದ ನಂ. 6 ರ್ಯಾಂಕ್‌ನ ಆಟಗಾರ್ತಿ ಥಾಯ್ಲೆಂಡ್‌ನ ರ್ಯಾಚನಾಕ್ ಇಂಟಾನನ್ ಅವರ ವಿರುದ್ಧ 21-12-, 21-6 ಅಂತರದಲ್ಲಿ ಸೋಲು ಕಂಡರು.
ಇಬ್ಬರ ನಡುವಿನ ಮೊದಲ ಸೆಟ್‌ನ ಆಟ ತೀವ್ರ ಹಣಾಹಣಿಯಿಂದ ಪೈಪೋಟಿಯಿಂದ ಕೂಡಿತ್ತು. ಪಂದ್ಯಾವಳಿಯಲ್ಲಿ ಮೂರನೇ ಶ್ರೇಯಾಂಕ ಗಳಿಸಿರುವ ಅವರು 2-0 ಮುನ್ನಡೆ ಸಾಧಿಸುವ ಮೂಲಕ ಈ ಸೆಟ್‌ನಲ್ಲಿ ಸಿಂಧು ಅವರಿಗೆ ಮುನ್ನಡೆ ಪಡೆದುಕೊಂಡರು. ಆದರೆ, ಪಂದ್ಯಾವಳಿಯಲ್ಲಿ 8ನೇ ಶ್ರೇಯಾಂಕ ಹೊಂದಿರುವ ಸಿಂಧು ಅವರು ನಾಲ್ಕು ನೇರ ಅಂಕಗಳನ್ನು ಗಳಿಸುವ ಮೂಲಕ ಈ ಅಂತರವನ್ನು 4-2ಕ್ಕೆ ಹೆಚ್ಚಿಸಿಕೊಂಡರು.
ಇಬ್ಬರ ಆಟ ಹೀಗೇ ಪೈಪೋಟಿಯಿಂದ ಮುಂದುವರೆದಿತ್ತು. ಒಂದು ಹಂತದಲ್ಲಿ ಇಬ್ಬರೂ 9-9ರ ಸಮಬಲ ಸಾಧಿಸಿದ್ದರು.
ಪ್ರತಿ ಹಂತದಲ್ಲೂ ಸಿಂಧು ನೀಡುತ್ತಿದ್ದ ಸ್ಪರ್ಧೆಯಿಂದ ಎಚ್ಚೆತ್ತ, ರ್ಯಾಚನಾಕ್ ಮತ್ತೆ ನಾಲ್ಕು ನೇರ ಪಾಯಿಂಟ್‌ಗಳನ್ನು ಪೇರಿಸಿ ಅಂತರವನ್ನು 13-9 ತಂದು ನಿಲ್ಲಿಸಿದರು. ಅಲ್ಲಿಂದ, ತೀವ್ರ ತೆರನಾದ ಪೈಪೋಟಿ ನೀಡಿದ ಅವರು, ಸಿಂಧು ಅವರಿಗಿಂತ ತ್ವರಿತಗತಿಯಲ್ಲಿ ಅಂಕಗಳನ್ನು ಹೆಚ್ಚಿಸುತ್ತಾ ಹೋಗಿ, ಈ ಸೆಟ್‌ನಲ್ಲಿ 21-12ರ ಗೆಲವನ್ನು ಕಂಡುಕೊಂಡರು.
ಇನ್ನು, ಎರಡನೇ ಸುತ್ತಿನಲ್ಲಿ ರ್ಯಾಚೆನಾಕ್ ಅವರ ಆಟ ಮನೋಹರವಾಗಿತ್ತು. ಸಿಂಧು ಅವರಿಗಿಂತ ಉತ್ತಮ ಪ್ರದರ್ಶನ ನೀಡಿದ ಅವರು ಅಂಕಗಳನ್ನು ಪೇರಿಸುತ್ತಲೇ ಹೋದರು. ಅವರ ಆಟದ ಮುಂದೆ ಮಂಕಾದ ಸಿಂಧು, ಈ ಸೆಟ್‌ನಲ್ಲಿ 21-6ರ ಅಂತರದಲ್ಲಿ ಮಣಿಯಲೇಬೇಕಾಯ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.