ವಾರಿಯರ್ಸ್, ಡೆವಿಲ್ಸ್ ಮುಖಾಮುಖಿ
ರಾಯ್ಪುರ: ಈ ಆವೃತ್ತಿಯಲ್ಲಿ ಗೆಲವಿನ ಸಿಹಿಗಿಂತ ಸೋಲಿನ ಕಹಿಯನ್ನು ಹೆಚ್ಚಾಗಿ ಕಂಡಿರುವ ಪುಣೆ ವಾರಿಯರ್ಸ್ ಹಾಗೂ ಡೆಲ್ಲಿ ಡೇರ್ಡೆವಿಲ್ಸ್ ತಂಡಗಳು ಭಾನುವಾರ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಜಯದ ಮರೀಚಿಕೆ ಯಾವ ತಂಡದ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಎರಡೂ ತಂಡಗಳು ಐಪಿಎಲ್ನ ಉಳಿದ ತಂಡಗಳಿಗಿಂತ ಉತ್ತಮ ಟಿ20 ಸ್ಪೆಷಲಿಸ್ಟ್ಗಳನ್ನು ಹೊಂದಿದ್ದರು, ತಂಡದಿಂದ ಇದುವರೆಗೂ ಉತ್ತಮ ಸಾಂಘಿಕ ಪ್ರದರ್ಶನ ಹೊರಬಂದಿಲ್ಲ. ಹಾಗಾಗಿ ಎರಡೂ ತಂಡ ಪಂದ್ಯಾವಳಿಯಲ್ಲಿ ಹಿನ್ನಡೆ ಅನುಭವಿಸಿದೆ ಎನ್ನಬಹುದು.
ಆಡಿರುವ 8 ಪಂದ್ಯಗಳಲ್ಲಿ ಪುಣೆ ವಾರಿಯರ್ಸ್ ತಂಡ 2ರಲ್ಲಿ ಜಯ ಸಾಧಿಸಿ 6ರಲ್ಲಿ ಮುಖಭಂಗ ಅನುಭವಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಡೇರ್ಡೆವಿಲ್ಸ್ ತಂಡದ ಪರಿಸ್ಥಿತಿ ಪುಣೆ ತಂಡಕ್ಕಿಂತಲೂ ಹೀನಾಯವಾಗಿದೆ.
ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಜಯ ಸಾಧಿಸಿರುವ ಡೆಲ್ಲಿ ತಂಡ 7 ಪಂದ್ಯಗಳಲ್ಲಿ ಸೋಲನುಭವಿಸಿ 9ನೇ ಸ್ಥಾನದಲ್ಲಿದೆ.
ಡೆಲ್ಲಿ ಡೇರ್ಡೆವಿಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದು ಬಿಟ್ಟರೆ ಉಳಿದ ಯಾವುದೇ ಪಂದ್ಯದಲ್ಲು ಉತ್ತಮ ಪ್ರದರ್ಶನ ನೀಡಿಲ್ಲ. ಪ್ರತಿ ಪಂದ್ಯದಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ಒಂದಿಲ್ಲೊಂದು ಬದಲಾವಣೆ ಹಾಗೂ ಪ್ರಯೋಗ ಮಾಡಿದರೂ ಡೆಲ್ಲಿ ತಂಡಕ್ಕೆ ಯಾವುದೇ ಪ್ರಯೋಜನವಾಗಿಲ್ಲ.
ಸೆಹ್ವಾಗ್, ಜಯವರ್ಧನೆ, ವಾರ್ನರ್, ಜುನೇಜಾ, ರಸ್ಸೆಲ್, ಜಾಧವ್, ಪಠಾಣ್ ಬ್ಯಾಟ್ನಿಂದ ರನ್ ಹರಿದು ಬರುತ್ತಿಲ್ಲ. ಅಲ್ಲದೇ ವಾರ್ನರ್ ಹಾಗೂ ಜಯವರ್ಧನೆ ಕೆಲ ಪಂದ್ಯದಲ್ಲಿ ರನ್ಗಳಿಸಿದರಾದರೂ ಇವರಿಗೆ ಇತರರಿಂದ ಉತ್ತಮ ಸಾಥ್ ದೊರೆಯಲಿಲ್ಲ. ಅಲ್ಲದೇ ಈ ಬ್ಯಾಟ್ಸ್ಮನ್ಗಳು ಸ್ಥಿರ ಪ್ರದರ್ಶನವನ್ನು ನೀಡುತ್ತಿಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲೂ ಮಾರ್ನೆ ಮಾರ್ಕೆಲ್, ಪಠಾಣ್, ನದೀಂ, ಯಾದವ್, ಅಗರ್ಕರ್, ರಸ್ಸೆಲ್ ಪರಿಣಾಮಕಾರಿಯಾಗಿಲ್ಲ.
ಇನ್ನು ಪುಣೆ ತಂಡದ ಆಟಗಾರರ ಹಣೆ ಬರಹವು ಇದರ ಹೊರತಾಗಿಲ್ಲ. ಕಳೆದ ಪಂದ್ಯದಲ್ಲಿ ಪುಣೆ ತಂಡ ಕ್ರಿಸ್ ಗೇಯ್ಲ್ ಆರ್ಭಟಕ್ಕೆ ದಾರಿ ಕಾಣದೆ ಅಸಹಾಯಕ ಸ್ಥಿತಿಯಲ್ಲಿ ಪಂದ್ಯದ ಗೆಲವಿನ ಆಸೆಯನ್ನು ಆರಂಭದಲ್ಲೇ ಕೈಚೆಲ್ಲಿದರು. ಆರಂಭಿಕರಾದ ಉತ್ತಪ್ಪ ರನ್ಗಳಿಸುತ್ತಿಲ್ಲ. ಜತೆಗೆ ಪಾಂಡೆ ಕೂಡ ಫಾರ್ಮ್ನಲ್ಲಿಲ್ಲ, ಇನ್ನು ಫಿಂಚ್ ತಂಡಕ್ಕೆ ತಡವಾಗಿ ಬಂದರೂ ಉತ್ತಮವಾಗಿ ಬ್ಯಾಟಿಂಗ್ ಮಾಡುವುದರ ಜತೆಗೆ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇನ್ನು ರಾಸ್ ಟೇಲರ್, ಮ್ಯಾಥ್ಯೂಸ್, ಸ್ಮಿತ್, ಯುವರಾಜ್, ಲೂಕ್ ರೈಟ್ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ದಿಂಡಾ, ಮಾರ್ಷ್, ಫಿಂಚ್ ದುಬಾರಿಯಾಗಿದ್ದು, ಲೂಕ್ ರೈಟ್ ಹಾಗೂ ಭುವನೇಶ್ವರ್ ಕುಮಾರ್ ತಕ್ಕಮಟ್ಟಿನ ಪ್ರದರ್ಶನ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಪಂದ್ಯಾವಳಿಯ ನಾಕೌಟ್ ಆಸೆಯನ್ನು ಬಹುತೇಕವಾಗಿ ಕೈಚೆಲ್ಲಿದ್ದು, ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಕ್ಕಾಗಿ ಈ ಎರಡೂ ತಂಡಗಳು ಪೈಪೋಟಿ ನಡೆಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

