ಸೇಡಿನ ತವಕದಲ್ಲಿ ನೈಟ್ ರೈಡರ್ಸ್
ಚೆನ್ನೈ: ತವರಿನ ಅಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ಸೋಲನುಭವಿಸಿದ್ದ ಕೆಕೆಆರ್ ತಂಡ, ಭಾನುವಾರ ಇಲ್ಲಿನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್ಕೆ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಈ ಎರಡೂ ತಂಡಗಳು ಪಂದ್ಯಾವಳಿಯ ಲೀಗ್ ಹಂತದಲ್ಲಿ ಅರ್ಧದಷ್ಟು ಪಂದ್ಯಗಳನ್ನಾಡಿದ್ದು, ಆಡಿರುವ 8 ಪಂದ್ಯಗಳಲ್ಲಿ ಸಿಎಸ್ಕೆ 6ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಪಟ್ಟವನ್ನು ಹೊತ್ತಿರುವ ಕೆಕೆಆರ್ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇನ್ನು ಕಳೆದ 4 ಪಂದ್ಯಗಳಲ್ಲಿ ಸತತ ಜಯದ ರುಚಿ ಕಂಡಿರುವ ಚೆನ್ನೈ ತಂಡ ಈ ಪಂದ್ಯದಲ್ಲೂ ಗೆಲ್ಲುವ ಆತ್ಮ ವಿಶ್ವಾಸವನ್ನು ಹೊಂದಿದೆ. ಆದರೆ ಕೆಕೆಆರ್ ಕಳೆದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಸೋಲನುಭವಿಸಿದ್ದು, 1 ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ.
ಪ್ರತಿ ಪಂದ್ಯದಲ್ಲೂ ಸಾಂಘಿಕ ಪ್ರದರ್ಶನ ನೀಡುತ್ತಿರುವ ಸಿಎಸ್ಕೆ ಉತ್ತಮ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದರೆ, ಇತ್ತ ಕೆಕೆಆರ್ ತಂಡದಲ್ಲಿ ಸಾಂಘಿಕ ಪ್ರದರ್ಶನದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಜಯ ಕೆಕೆಆರ್ ತಂಡಕ್ಕೆ ಹೊಸ ಉತ್ಸಾಹವನ್ನು ತುಂಬಲಿದೆ.
ಚೆನ್ನೈ ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಮೈಕ್ ಹಸ್ಸಿ, ತಂಡಕ್ಕೆ ಉತ್ತಮ ಇನಿಂಗ್ಸ್ ಕಟ್ಟಲು ಸಹಕಾರಿಯಾಗುತ್ತಿದ್ದು, ಮದ್ಯಮ ಕ್ರಮಾಂಕದಲ್ಲಿ ಧೋನಿ, ಬ್ರಾವೊ, ಜಡೇಜಾ ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುತ್ತಿರುವುದು ತಂಡದ ಯಶಸ್ಸಿನ ಗುಟ್ಟಾಗಿದೆ. ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಶರ್ಮಾ ಹಾಗೂ ಕ್ರಿಸ್ ಮೊರಿಸ್ ಜತೆಗೆ ಬ್ರಾವೊ ಸಮರ್ಥವಾಗಿ ವೇಗದ ದಾಳಿಯನ್ನು ನೀಡುತ್ತಿದ್ದು, ಆರ್.ಅಶ್ವಿನ್ ಮತ್ತು ಜಡೇಜಾ ಸ್ಪಿನ್ ವಿಭಾಗದಲ್ಲಿ ತಮ್ಮ ಮೋಡಿ ಮುಂದುವರಿಸಿದ್ದಾರೆ.
ಕೆಕೆಆರ್ ತಂಡದ ಆಟಗಾರರ ಪ್ರದರ್ಶನ ಇದುವರೆಗೂ ಸ್ಥಿರವಾಗಿಲ್ಲ. ಪಂದ್ಯಾವಳಿಯ ಆರಂಭಿಕ ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಗಂಭೀರ್ ಕಳೆದ ಕೆಲವು ಪಂದ್ಯಗಳಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕಾಲಿಸ್, ಬಿಸ್ಲಾ, ತಿವಾರಿ ತಕ್ಕಮಟ್ಟಿಗೆ ರನ್ಗಳಿಸಿದರಾದರೂ, ಮುಂದಿನ ಪಂದ್ಯದಲ್ಲು ಅದೇ ಪ್ರದರ್ಶನ ನೀಡುವರೆ ಎಂಬ ಪ್ರಶ್ನೆ ಇದೆ. ಆದರೆ ಇಯಾನ್ ಮಾರ್ಗನ್ ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ರನ್ಗಳಿಸಿದ್ದು, ಇವರಿಗೆ ಇತರೆ ಬ್ಯಾಟ್ಸ್ಮನ್ಗಳಿಂದ ತಕ್ಕ ಸಾಥ್ ದೊರೆಯಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಎಂದಿನಂತೆ ಕೆಕೆಆರ್ ಸುನಿಲ್ ನಾರಾಯಣ್ ಮೇಲೆ ಅವಲಂಬಿತವಾಗಿದ್ದು, ಕಳೆದ ಪಂದ್ಯದಲ್ಲಿ ಕಾಲಿಸ್, ಭಾಟಿಯಾ ಹಾಗೂ ಬಾಲಾಜಿ ಉತ್ತಮ ಬೌಲಿಂಗ್ ಮಾಡಿರುವುದು ತಂಡಕ್ಕೆ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿದೆ. ಐಪಿಎಲ್ನಲ್ಲಿ ತವರಿನ ಅಂಗಣದಲ್ಲಿ ಉತ್ತಮ ದಾಖಲೆ ಹೊಂದಿರುವ ಸಿಎಸ್ಕೆ, ತವರು ಅಭಿಮಾನಿಗಳ ಬೆಂಬಲದೊಂದಿಗೆ ಪಿಚ್ನ ಸಂಪೂರ್ಣ ಲಾಭ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಸಿಎಸ್ಕೆ ತಂಡವನ್ನು ನಿಯಂತ್ರಿಸಲು ಕೆಕೆಆರ್ ಯಾವ ತಂತ್ರಗಾರಿಕೆಯನ್ನು ಎಣಿಯುತ್ತದೆ ಎಂಬುದನ್ನು ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

