ಕ್ರೀಡೆ

ಗೆಲುವಿನ ಕನಸಲ್ಲಿ ಸನ್

Published On :

ಹೈದರಾಬಾದ್: ಸತತ ಸೋಲಿನಿಂದ ಕಂಗೆಟ್ಟು, ಗೆಲವಿನ ಹಾದಿ ಹುಡುಕುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸ್ಟಾರ್ ಆಟಗಾರರಿಂದ ಕೂಡಿರುವ ಮುಂಬೈ ಇಂಡಿಯನ್ಸ್ ತಂಡಗಳು ಬುಧವಾರ ನಡೆಯಲಿರುವ ಪಂದ್ಯದಲ್ಲಿ ಸೆಣಸಲಿವೆ.
ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಬೇಕಾದರೆ, ಆತಿಥೇಯ ಹೈದರಾಬಾದ್ ತನ್ನ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಮುಂಬೈ ಆಡಿರುವ 9 ಪಂದ್ಯಗಳಿಂದ 12 ಅಂಕ ಗಳಿಸಿದ್ದರೆ, ಸನ್‌ರೈಸರ್ಸ್ 10 ಅಂಕ ಗಳಿಸಿದೆ.
ಸನ್‌ರೈಸರ್ಸ್ ಇದುವರೆಗೂ ತನ್ನ ಬಲಿಷ್ಠ ಬೌಲಿಂಗ್ ದಾಳಿಯ ಮೂಲಕವೇ ಜಯ ಕಂಡುಕೊಂಡಿದೆ. ಇನ್ನು ರಾಜಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್, ಕುಮಾರ ಸಂಗಕ್ಕಾರ, ಜಿ. ಹನುಮ ವಿಹಾರಿ, ಕರಣ್ ಶರ್ಮಾ ಹಾಗೂ ತಿಸರಾ ಪೆರೇರಾ ವೈಫಲ್ಯ ಕಂಡಿದ್ದು ತಂಡದಲ್ಲಿ ಆತಂಕ ಉಂಟುಮಾಡಿದೆ.
ಈ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ವೆಸ್ಟ್ ಇಂಡೀಸ್ ನಾಯಕ ಡರೇನ್ ಸಾಮಿ, ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ನೆರವಾಗುವ ಸಾಧ್ಯತೆಗಳಿವೆ. ವೇಗಿ ಡೇಲ್ ಸ್ಟೇಯ್ನ್, ಇಶಾಂತ್ ಶರ್ಮಾ ಹಾಗೂ ಸ್ಪಿನ್ನರ್ ಅಮಿತ್ ಮಿಶ್ರಾ, ಡರೇನ್ ಸಾಮಿ, ತಿಸರಾ ಪೆರೇರಾ ಹಾಗೂ ಕರಣ್ ಶರ್ಮಾ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ.
ಇನ್ನೊಂದೆಡೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್, ಡ್ವೈನ್ ಸ್ಮಿತ್ ಹಾಗೂ ಕೀರನ್ ಪೊಲಾರ್ಡ್ ಯಾವುದೇ ಬೌಲರ್‌ಗಳನ್ನು ದಂಡಿಸುವ ಸಾಮರ್ಥ್ಯ ಹೊಂದಿದ್ದಾರೆ.
ಇನ್ನು ಮುಂಬೈ ಬೌಲಿಂಗ್ ವಿಭಾಗ ಸ್ಟಾರ್ ಬೌಲರ್‌ಗಳಾದ ಲಸಿತ್ ಮಾಲಿಂಗ, ಹರ್ಭಜನ್ ಸಿಂಗ್ ಅವರೊಂದಿಗೆ ಧವಳ್ ಕುಲಕರ್ಣಿ ಹಾಗೂ ಮಿಚೆಲ್ ಜಾನ್ಸನ್ ಅವರಂತಹ ಆಟಗಾರರನ್ನು ಹೊಂದಿದೆ.
ಆದರೆ, ಪಂದ್ಯದಲ್ಲಿ ಹೈದರಾಬಾದ್‌ಗೆ ತವರಿನ ಅಂಗಣ ಮತ್ತು ಅಭಿಮಾನಿಗಳ ಬೆಂಬಲ ನೆರವಾಗುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.