ಕ್ರೀಡೆ

ಕಳಪೆ ಶರ್ಮಾ

ಕಳಪೆ ಶರ್ಮಾ
Published On :

ಆತ 2006ರ ಶ್ರೀಲಂಕಾದಲ್ಲಿ ನಡೆದ 19 ವರ್ಷದೊಳಗಿನ ಕಿರಿಯರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದ. ಉತ್ತಮ ಪ್ರದರ್ಶನ ನೀಡಿ ಭರವಸೆಯನ್ನೂ ಮೂಡಿಸಿಬಿಟ್ಟ. ಟೀಂ ಇಂಡಿಯಾದಲ್ಲೂ ಚಾನ್ಸು ಸಿಕ್ಕಿತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಮಾತ್ರ ಬರುತ್ತಿಲ್ಲ.

ರೋಹಿತ್ ಶರ್ಮಾಗೆ ಏನಾಯಿತು?
ರೋಹಿತ್ ಆರಂಭದ ದಿನಗಳಲ್ಲಿ ಗಮನ ಸೆಳೆದರೂ, ನಂತರ ಕುಸಿಯುತ್ತಲೇ ಇದ್ದಾನೆ. ರಣಜಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತನ ಪ್ರದರ್ಶನ ಆಯ್ಕೆಗಾರರಿಗೇ ಪ್ರೀತಿ.
2007ರಲ್ಲಿ ಭಾರತದ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್, 6 ವರ್ಷಗಳಲ್ಲಿ102 ಏಕದಿನ ಪಂದ್ಯಗಳನ್ನಾಡಿ 32.37 ಸರಾಸರಿಯಲ್ಲಿ 2558 ರನ್ ಗಳಿಸಿದ್ದಾನೆ. 102 ಪಂದ್ಯಗಳಲ್ಲಿ ಶರ್ಮಾ ಸಾಧನೆ 2 ಶತಕ ಹಾಗೂ 18 ಅರ್ಧಶತಕ. ಅಲ್ಲಿಗೆ ಶರ್ಮಾ 102 ಪಂದ್ಯಗಳಲ್ಲಿ ಪ್ರದರ್ಶನ ನೀಡಿರುವುದು ಕೇವಲ 20 ಪಂದ್ಯಗಳಲ್ಲಿ ಮಾತ್ರ. ರೋಹಿತ್ ಗಳಿಸಿದ 2 ಶತಕಗಳು ಒಂದು ಜಿಂಬಾಬ್ವೆ, ಮತ್ತೊಂದು ಶ್ರೀಲಂಕಾ ವಿರುದ್ಧ.
ಕಳೆದ ವರ್ಷ ಶರ್ಮಾ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ. ಆದರೆ ಈ ವರ್ಷ ರೋಹಿತ್ ಭಾರತ ತಂಡದಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿದ್ದು, ಸಾಧಾರಣ ಪ್ರದರ್ಶನ ನೀಡುತ್ತಿದ್ದಾನೆ.ರೋಹಿತ್ ಈ ವರ್ಷ ಜಿಬಾಂಬ್ವೆ ಪ್ರವಾಸದ ಮೊದಲೆರಡು ಪಂದ್ಯಗಳನ್ನು ಸೇರಿಸಿಕೊಂಡರೆ 16 ಪಂದ್ಯಗಳನ್ನಾಡಿದ್ದು, 6 ಅರ್ಧ ಶತಕ ಗಳಿಸಿದ್ದಾನೆ.

ತಾಂತ್ರಿಕವಾಗಿ ಕುಗ್ಗಿದ ಶರ್ಮಾ
್ಙಆರಂಭದಲ್ಲಿ ರೋಹಿತ್ ಉತ್ತಮ ಟೆಕ್ನಿಕಲ್ ಆಗಿ ಗಮನ ಸೆಳೆದ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ವಿಕೆಟ್ ಕೈಚೆಲ್ಲುತ್ತಿರುವುದು ಅದೇ ತಾಂತ್ರಿಕತೆಯ ಕೊರತೆಯಿಂದಲೇ. ರೋಹಿತ್‌ನ ಫುಟ್‌ವರ್ಕ್ ಬಹಳಷ್ಟು ಸುಧಾರಿಸಬೇಕಿದೆ. ಆಗೆಲ್ಲ ಶಾರ್ಟ್‌ಬಾಲ್ ಅನ್ನು ಅದ್ಭುತವಾಗಿ ಪುಲ್ ಮಾಡುತ್ತಿದ್ದ. ಆದರೆ, ಈಗ ಆ ಕಲೆ ಮರೆತುಹೋಗಿದೆ.

ಆರಂಭಿಕರಾಗಿ ಯಶಸ್ವಿಯಾಗುವನೆ?
ಭಾರತ ತಂಡದಲ್ಲಿ ಸೆಹ್ವಾಗ್ ಹಾಗೂ ಗಂಭೀರ್ ಸ್ಥಾನವನ್ನು ತುಂಬಿರುವ ರೋಹಿತ್ ಹಾಗೂ ಶಿಖರ್ ಧವನ್ ಜೋಡಿ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.
ಈ ಸರಣಿಯಲ್ಲಿ ದಕ್ಷಿಣ ಆಫ್ರಿಕ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಶತಕದ ಜತೆಯಾಟ ನೀಡಿದ್ದಾರೆ. ಈ ಜತೆಯಾಟದಲ್ಲಿ ಸಿಂಹಪಾಲು ಧವನ್ ಪಾಲಾಗಿದೆ. ಧವನ್ ಎದುರಾಳಿ ಬೌಲರ್‌ಗಳನ್ನು ಆಕ್ರಮಣಕಾರಿಯಾಗಿ ದಂಡಿಸಿದರು. ಆದರೆ, ಶರ್ಮಾ ರನ್ ಗಳಿಕೆ ನಿಧಾನಗತಿಯದ್ದಾಯಿತು.

ಮತ್ತೆ ಮತ್ತೆ ಫೇಲ್ಯೂರ್
ರೋಹಿತ್ ಚಾಂಪಿಯನ್ಸ್ ಟ್ರೋಫಿ ಸರಣಿಯ ಮೊದಲೆರಡು ಪಂದ್ಯ ಹಾಗೂ ವಿಂಡೀಸ್‌ನಲ್ಲಿ ನಡೆದ ತ್ರಿಕೋನ ಸರಣಿಯ ಮೊದಲ 3 ಪಂದ್ಯಗಳಲ್ಲಿ ಉತ್ತಮ ಆರಂಭವನ್ನೇ ಪಡೆದಿದ್ದ. ಆದರೆ ಈ ಮೊತ್ತವನ್ನು ಬೃಹತ್ ಮೊತ್ತವಾಗಿ ಪರಿಗಣಿಸುವಲ್ಲಿ ನಿರಂತರವಾಗಿ ವಿಫಲನಾಗುತ್ತಿದ್ದಾನೆ.
ಚಾಂಪಿಯನ್ ಟ್ರೋಫಿಯ ಮೊದಲೆರಡು ಪಂದ್ಯದಲ್ಲಿ ಕ್ರಮವಾಗಿ 65, 52 ರನ್ ಗಳಿಸಿದರೆ, ತ್ರಿಕೋನ ಸರಣಿಯಲ್ಲಿ ಕ್ರಮವಾಗಿ 46, ಅಜೇಯ 48, 58 ರನ್ ಗಳಿಸಿದ್ದರು. ಆದರೆ, ಈ ಪಂದ್ಯಗಳಲ್ಲಿ ಸಿಕ್ಕ ಉತ್ತಮ ಆರಂಭವನ್ನು ಬಳಸಿಕೊಳ್ಳುವಲ್ಲಿ ರೋಹಿತ್ ವಿಫಲನಾಗಿದ್ದಾನೆ.

ಮುಂಬೈಕರ್ ಬೆಂಬಲ

ಶರ್ಮಾಗೆ ಭಾರತ ತಂಡದಲ್ಲಿ ಸಿಕ್ಕಂಥ ಚಾನ್ಸು ಇನ್ನಾವುದೇ ಆಟಗಾರನಿಗೆ ಸಿಕ್ಕಿಲ್ಲ ಎಂದರೆ ತಪ್ಪಿಲ್ಲ. ಸಚಿನ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪಡೆದ ನಂತರ ಹಾಗೂ ಜಹೀರ್ ಭಾರತ ತಂಡದಿಂದ ಹೊರಗುಳಿದ ನಂತರ ಯಾವುದೇ ಮುಂಬೈ ಆಟಗಾರ ಭಾರತ ತಂಡದಲ್ಲಿ ಸ್ಥಾನವಿಲ್ಲದಂತಾಯಿತು. ಹೀಗಾಗಿ, ಶರ್ಮಾ ಎಷ್ಟೇ ವೈಫಲ್ಯ ಅನುಭವಿಸಿದರೂ ಅವಕಾಶ ಸಿಗುತ್ತಿದೆ.
ಅಲ್ಲದೆ, ಮುಂಬೈ ಮೂಲದ ಭಾರತ ತಂಡದ ಮಾಜಿ ಆಟಗಾರರು ರೋಹಿತ್ ಪ್ರತಿಭಾನ್ವಿತ ಹಾಗೂ ತಾಂತ್ರಿಕ ಆಟಗಾರ ಎಂದು ಪ್ರತಿ ಸಲವೂ ಆತನ ಬೆನ್ನಿಗೆ ನಿಂತಿದ್ದಾರೆ. ಆದರೆ ಆತನ ಫುಟ್‌ವರ್ಕ್, ಟೈಮಿಂಗ್ ಹಾಗೂ ಹೊಡೆತಗಳ ಆಯ್ಕೆಯನ್ನು ನೋಡಿದರೆ ರೋಹಿತ್ ತಾಂತ್ರಿಕತೆ ತಿಳಿಯುತ್ತದೆ.

ತಂಡದ ಯಶಸ್ಸಿನ ನೆರಳು
ರೋಹಿತ್ ಶರ್ಮಾ ಪ್ರದರ್ಶನ ನೀಡದಿದ್ದರೂ ಅದು ಹೆಚ್ಚು ಚರ್ಚೆಯಾಗುತ್ತಿಲ್ಲ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಯಶಸ್ಸು ಕಂಡಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ, ಚಾಂಪಿಯನ್ಸ್ ಟ್ರೋಫಿ, ವಿಂಡೀಸ್‌ನಲ್ಲಿನ ತ್ರಿಕೋನ ಸರಣಿ ಹಾಗೂ ಜಿಂಬಾಬ್ವೆ ಪ್ರವಾಸದಲ್ಲಿ ಸರಣಿ ಜಯ ಸಾಧಿಸಿದೆ. ಹೀಗಾಗಿ ತಂಡದ ಯಶಸ್ಸಿನ ಅಲೆ, ರೋಹಿತ್‌ನ ಕಳಪೆ ಪ್ರದರ್ಶನವನ್ನು ಮುಚ್ಚಿಹಾಕುತ್ತಿದೆ ಎಂದರೆ ತಪ್ಪಿಲ್ಲ. ತಂಡದ ಇತರೆ ಆಟಗಾರರು ಒಂದಲ್ಲಾ ಒಂದು ಪಂದ್ಯದಲ್ಲಿ ಜಯ ತಂದುಕೊಡುವ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ರೋಹಿತ್‌ನಿಂದ ಇದುವರೆಗೂ ಅಂಥ ಪ್ರದರ್ಶನ ಸಾಧ್ಯವಾಗಿಲ್ಲ. ಹೀಗಾಗಿ ರೋಹಿತ್ ತಂಡದ ಯಶಸ್ಸಿನ ನೆರಳಿನಲ್ಲಿ ಬದುಕುತ್ತಿದ್ದಾರೆ.

- ಸೋಮಶೇಖರ್ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.