ಕ್ರೀಡೆ

ಕ್ರಿಕೆಟಜ್ಜ!

ಕ್ರಿಕೆಟಜ್ಜ!
Published On :

1938-39ರಲ್ಲಿ ದಕ್ಷಿಣ ಆಫ್ರಿಕದ ವೇಗದ ಬೌಲರ್ ಆಗಿದ್ದ ಗಾರ್ಡನ್‌ಗೆ ಆಗಸ್ಟ್ 6ಕ್ಕೆ ಭರ್ತಿ 102 ವರ್ಷ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದು ಕೇವಲ ಐದು ಟೆಸ್ಟ್. ಕೇವಲ 5 ವರ್ಷದ ಹಿಂದಿನವರೆಗೂ ಗಾಲ್ಫ್ ಆಡುತ್ತಿದ್ದ ಈ ವೇಗದ ಬೌಲರ್ ಇಂದಿಗೂ ಕ್ರಿಕೆಟ್ ಅನ್ನು ಕುತೂಹಲದಿಂದ ಗಮನಿಸುತ್ತಾರೆ...

ಇವರು ಇಂದು ಬದುಕಿರುವ ಏಕೈಕ ಶತಾಯುಷಿ ಕ್ರಿಕೆಟಿಗ. ಅಷ್ಟೇ ಏಕೆ 2ನೇ ಮಹಾಯುದ್ಧಕ್ಕೆ ಮುನ್ನ ಕ್ರಿಕೆಟ್ ಆಡಿರುವವರಲ್ಲಿ ಉಳಿದಿರುವ ಏಕೈಕ ವ್ಯಕ್ತಿ. 1938-39ರಲ್ಲಿ ದಕ್ಷಿಣ ಆಫ್ರಿಕದ ವೇಗದ ಬೌಲರ್ ಆಗಿದ್ದ ಈತನಿಗೆ ಆಗಸ್ಟ್ 6ಕ್ಕೆ ಭರ್ತಿ 102 ವರ್ಷ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದು ಕೇವಲ ಐದು ಟೆಸ್ಟ್.
ಕೇವಲ 5 ವರ್ಷದ ಹಿಂದಿನವರೆಗೂ ಗಾಲ್ಫ್ ಆಡುತ್ತಿದ್ದ ಈ ವೇಗದ ಬೌಲರ್ ಇಂದಿಗೂ ಕ್ರಿಕೆಟ್ ಅನ್ನು ಕುತೂಹಲದಿಂದ ಗಮನಿಸುತ್ತಾರೆ.
ಜೊಹಾನ್ಸ್‌ಬರ್ಗ್‌ನಲ್ಲಿ ಹುಟ್ಟಿದ ಗಾರ್ಡನ್ 10ರ ಹರೆಯದಿಂದಲೇ ಕ್ರಿಕೆಟ್ ಗೀಳು ಹಚ್ಚಿಕೊಂಡರು. ಹಾಗೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಆಡಿಲ್ಲ. ಆಡಿದ್ದು ಅನಿರ್ದಿಷ್ಟಾವಧಿ ಟೆಸ್ಟ್ (ಟೈಲೇಸ್ ಟೆಸ್ಟ್) ಪಂದ್ಯಗಳಲ್ಲಿ. ಆಗಿನ ಕಾಲದಲ್ಲಿ ಟೆಸ್ಟ್ ಪಂದ್ಯಗಳನ್ನು ಫಲಿತಾಂಶ ಬರುವವರೆಗೆ ಆಡುತ್ತಿದ್ದರು. ಗಾರ್ಡನ್ ಅವರೇ ಆಡಿದ್ದ ಪಂದ್ಯವೊಂದು 10 ದಿನ ಮೀರಿ ನಡೆದು ಫಲಿತಾಂಶರಹಿತವಾಗಿ ಡ್ರಾಗೊಂಡಿತ್ತು!

ಆ ದಿನಗಳು...
ಆಗ ಒಂದು ಓವರ್‌ಗೆ 8 ಎಸೆತಗಳಿದ್ದವು. ಅನಿರ್ದಿಷ್ಟಾವಧಿ ಕ್ರಿಕೆಟ್ ಆದದ್ದರಿಂದ ಬೌಲರ್‌ಗಳು ವಿಕೆಟ್ ಪಡೆಯಲು ಹರಸಾಹಸ ಪಡೆಯಬೇಕಿತ್ತು. ದಣಿವರಿಯದ ವೇಗಿ ಗಾರ್ಡನ್ ತಮ್ಮ ಕೊನೆಯ ಪಂದ್ಯದಲ್ಲಿ 92 ಓವರ್‌ಗಳನ್ನು ಎಸೆದಿದ್ದರು. ಅಂದರೆ ಇದು ಆರು ಎಸೆತಗಳ 120 ಓವರ್‌ಗಳಿಗೆ ಸಮ. ಆದರೆ ದಕ್ಕಿದ್ದು ಮಾತ್ರ ಒಂದೇ ವಿಕೆಟ್. ತಾನಾಡಿದ 5 ಪಂದ್ಯಗಳ ಸರಣಿಯಲ್ಲಿ ಅವರು ಒಟ್ಟಾರೆ 20 ವಿಕೆಟ್ ಕಬಳಿಸಿದ್ದಾರೆ.

ತುಂಬಾ ಸರಳ ವ್ಯಕ್ತಿತ್ವ
ನಿರಂತರವಾಗಿ 10- 15 ಓವರ್ ಎಸೆಯುತ್ತಿದ್ದ ದಣಿವರಿಯದ ವೇಗಿ ತನ್ನ ವೇಗ ಹಾಗೂ ಫಿಟ್ನೆಸ್ ಅನ್ನು ಶಾನ್ ಪೊಲಾಕ್ ಅವರೊಂದಿಗೆ ಹೋಲಿಸಿಕೊಳ್ಳುತ್ತಾರೆ ಗಾರ್ಡನ್. ಜಿಮ್ನಾಸ್ಟಿಕ್ ಕೂಡ ಬಲ್ಲವರಾಗಿದ್ದ ಗಾರ್ಡನ್, ಅವರ ಫಿಟ್ನೆಸ್ ಬಗ್ಗೆ ಚಕಾರವೆತ್ತುವ ಹಾಗಿರಲಿಲ್ಲ. ಅವರಿಗೆ ಮದ್ಯಪಾನ, ಧೂಮಪಾನದ ಚಟಗಳಿರಲಿಲ್ಲ.
ಕ್ರಿಕೆಟ್ ಯಾವತ್ತಿದ್ದರೂ ಸಭ್ಯರ ಆಟ. ಆದನ್ನು ಹಾಗೇ ಇರಲು ಬಿಡಿ ಎನ್ನುತ್ತಾರೆ ಗಾರ್ಡನ್. ಅವರ ಮಾತುಗಳಲ್ಲೇ ಹೇಳುವುದಾದರೆ...
'ನಾನು ಮಾತ್ರವಲ್ಲ ನೂರಾರು ಮಂದಿ ಸ್ಲೆಡ್ಜಿಂಗ್ ಅನ್ನು ಇಷ್ಟಪಡುವುದಿಲ್ಲ. ಯೂ ಲಕ್ಕಿ ಬಾಸ್ಟರ್ಡ್ ಮುಂತಾದ ಬೈಗುಳಗಳು ಕ್ರಿಕೆಟ್‌ನ ಭಾಗವಲ್ಲ. ಇದು ಹೇಗೆ ಬಂತು ಎಂಬುದೇ ನನಗೆ ಅಚ್ಚರಿಯ ಸಂಗತಿ ಅಂದು ಸ್ಲೆಡ್ಜಿಂಗ್ ಮಾತೇ ಇರಲಿಲ್ಲ. ಒಂದು ವೇಳೆ ಹಾಗೆ ಯಾರಾದರೂ ಮಾತನಾಡಿದರೆ ನಿರ್ದಾಕ್ಷಿಣ್ಯವಾಗಿ ಅವರನ್ನು ಫೀಲ್ಡ್‌ನಿಂದ ಹೊರಗಟ್ಟಲಾಗುತ್ತಿತ್ತು. ಕ್ರಿಕೆಟ್ ಉಸಿರಾಗಬೇಕು. ಕ್ರಿಕೆಟ್ ಆಡುವವರು ಅಂಥ ಪದಗಳನ್ನು ಬಳಸುವ ಹಾಗಿಲ್ಲ. ಇಂದಿನವರಿಗೆ ಇದನ್ನು ನಿಲ್ಲಿಸಲು ಆಗುತ್ತಿಲ್ಲ. ಯಾಕೆಂದರೆ, ಅದಿಲ್ಲದೆ ಆಡುವುದನ್ನು ಅವರು ಬಯಸುವುದಿಲ್ಲ'. ಇತ್ತೀಚೆಗೆ ಜನಪ್ರಿಯವಾಗಿರುವ ಟಿ20 ಕ್ರಿಕೆಟ್ ಬಗ್ಗೆ ಅಸಮಾಧಾನ ಹೊಂದಿರುವ ಗಾರ್ಡನ್, ಇದು ಕ್ರಿಕೆಟ್ಟೇ ಅಲ್ಲ ಎನ್ನುತ್ತಾರೆ.

ಯಾರು ಫೇವರಿಟ್?
ಶತಮಾನಗಳ ಕಾಲ ಕ್ರಿಕೆಟ್ ನೋಡಿರುವ ಗಾರ್ಡನ್ ಸಚಿನ್ ತೆಂಡೂಲ್ಕರ್ ಅವರನ್ನು ಬಹಳ ಮೆಚ್ಚುತ್ತಾರೆ. ಸರ್ ಡೂನಾಲ್ಡ್ ಬ್ರಾಡ್ಮನ್ ನಿಸ್ಸಂಶಯವಾಗಿ ಮಹಾನ್ ಕ್ರಿಕೆಟಿಗ. ಅವರನ್ನು ಮೀರಿಸುವವರಿಲ್ಲ ಎಂಬುದು ಎಲ್ಲರಂತೆಯೇ ಗಾರ್ಡನ್ ಅವರ ಅಭಿಪ್ರಾಯವೂ ಹೌದು. ಆ ಬಳಿಕದ ಸ್ಥಾನಗಳಲ್ಲಿ ಅವರ ಕಾಲದ ಹ್ಯಾಮಂಡ್ಸ್, 80ರ ದಶಕದ ಗ್ಯಾರಿ ಸೋಬರ್ಸ್ ಹಾಗೂ ಇಂದಿನ ಸಚಿನ್ ಅವರನ್ನು ನೋಡುತ್ತಾರೆ. ಇಂದಿನವರ ಫೀಲ್ಡಿಂಗ್ ಅದ್ಭುತ. ಆದರೆ, ಬ್ಯಾಟಿಂಗ್ ಬೌಲಿಂಗ್ ಉತ್ತಮಗೊಂಡಿಲ್ಲ. ಅಥವಾ ಕೆಟ್ಟದಾಗಿಯೂ ಇದೆ ಎಂದು ಹೇಳಬೇಕು.
ಅಂದೆಲ್ಲಾ ಒಂದು ಕ್ಯಾಚ್ ಕೈಚೆಲ್ಲಿದರೆ ಓಹ್ ಬ್ಯಾಡ್‌ಲಕ್ ಎಂಬ ಉದ್ಗಾರದೊಂದಿಗೆ ಸುಮ್ಮನಾಗುತ್ತಿದ್ದರು. ಆದರೆ, ಇಂದು ಹಾಗಲ್ಲ. ಯಾವ ಅವಕಾಶವನ್ನೂ ಮಿಸ್ ಮಾಡಿಕೊಳ್ಳುವ ಹಾಗಿಲ್ಲ. ನಿಜಕ್ಕೂ ಅದ್ಭುತ ಫೀಲ್ಡಿಂಗ್ ಎನ್ನುವ ಕ್ರಿಕೆಟ್ ಅಜ್ಜನ ಬದುಕಿಗೆ ಎರಡನೇ ವಿಶ್ವಯುದ್ಧ ಮಾರಕವಾಗಿ ಪರಿಣಮಿಸಿತು. ಆ ಬಳಿಕ ಗಾರ್ಡನ್ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿಲ್ಲ. ಯಹೂದಿ ಎಂಬ ಕಾರಣಕ್ಕೆ ಉಪೇಕ್ಷಿಸಲ್ಪಟ್ಟರು ಎಂಬ ಗಾಳಿಮಾತು ಇದೆಯಾದರೂ ಜಂಟಲ್‌ಮ್ಯಾನ್ ಕ್ರಿಕೆಟಿಗ ಆ ಬಗ್ಗೆ ಯಾವತ್ತೂ ಪ್ರಸ್ತಾಪಿಸಿಲ್ಲ.
ವಯಸ್ಸು 102 ಆಗಿದೆ. ಅವರ ಪತ್ನಿ ತೀರಿಹೋಗಿ ದಶಕಗಳ ಮೇಲಾಗಿದೆ. ಈಗ ಕಣ್ಣುಗಳು ಮಂದವಾಗಿರುವುದರಿಂದ ಮಗ ಬ್ರಯಾನ್ ಕ್ರಿಕೆಟ್ ಪಂದ್ಯಗಳನ್ನು ವಿವರಿಸುತ್ತಾರೆ. ಎಲ್ಲಿದ್ದ ಕ್ರಿಕೆಟ್ ಎಲ್ಲಿಗೆ ಬಂದು ತಲುಪಿತು. ಬ್ಯಾಟ್ಸ್‌ಮನ್‌ಗಳಿಗೆ ಹೆಲ್ಮೆಟ್ ಬಂತು, ಓವರ್‌ಗೆ 8 ಎಸೆತಗಳಿದ್ದುದು ಆರಾಗಿದೆ. ಏಕದಿನ, ವರ್ಣಮಯ ಜೆರ್ಸಿ, ಥರ್ಡ್ ಅಂಪೈರ್, ಟಿ20, ಡಿಆರ್ ಎಸ್, ಮ್ಯಾಚ್ ಫಿಕ್ಸಿಂಗ್... ಅಬ್ಬಬ್ಬಾ! ಕ್ರಿಕೆಟ್ ಅಜ್ಜ ಅಂದೇ ಚೆನ್ನಾಗಿತ್ತು ಅಂತಾರೆ. <

ಮೈಲುಗಲ್ಲು
ಎರಡನೇ ವಿಶ್ವಯುದ್ಧಕ್ಕೆ ಹಿಂದೆ ಕ್ರಿಕೆಟ್ ಆಡಿದವರಲ್ಲಿ ಜೀವಂತವಿರುವ ಏಕೈಕ ವ್ಯಕ್ತಿ. 2015ರ ವರೆಗೆ ಅವರು ಜೀವಿಸಿದಲ್ಲಿ ಅತ್ಯಂತ ಹೆಚ್ಚು ಕಾಲ ಜೀವಿಸಿದ ಕ್ರಿಕೆಟಿಗನೆಂಬ ಅಭಿದಾನಕ್ಕೆ ಅವರು ಪಾತ್ರರಾಗಲಿದ್ದಾರೆ. ಈಗ ಈ ದಾಖಲೆ ಜಿಮ್ ಹಚಿನ್ಸನ್ (103 ವರ್ಷ, 344 ದಿನ) ಹೆಸರಲ್ಲಿದೆ.

ನೀನು ಬ್ರಿಯಾನ್ ಲಾರಾ...
2010ರಲ್ಲಿ ಬ್ರಿಯಾನ್ ಲಾರಾ ಒಮ್ಮೆ ಇವರನ್ನು ಕಾಣಲೆಂದು ಹೋಗಿದ್ದರು. ಗಾರ್ಡನ್ ಎದುರು ಕುಳಿತ ಲಾರಾ ನನ್ನ ಪರಿಚಯ ಇದೆಯೇ ಎಂದು ಕೇಳುತ್ತಾರೆ. ಅದಕ್ಕೆ ಗಾರ್ಡನ್ 'ಖಂಡಿತವಾಗಿಯೂ, ನೀನು ಬ್ರಿಯಾನ್ ಲಾರಾ' ಎಂದರಂತೆ. ಬಹಳ ಹೊತ್ತಿನ ಮಾತುಕತೆಯ ಬಳಿಕ ಬ್ರಿಯಾನ್ ಲಾರಾ ಹೊರಟು ನಿಂತರು. ಹೊರಡುವ ವೇಳೆ ಒಂದು ಕಾಗದದಲ್ಲಿ ಬರೆದು ಗಾರ್ಡನ್ ಕೈಯಲ್ಲಿ ಕೊಟ್ಟು ಹೋದರಂತೆ. ಅದರಲ್ಲಿ ಹೀಗೆ ಬರೆದಿತ್ತು... ಐ ಹ್ಯಾವ್ ಫೈನಲಿ ಮೆಟ್ ದಿ ಮಾಸ್ಟರ್.

- ಗಣಪ
(ಆಧಾರ- ಕ್ರಿಕ್ ಇನ್ಫೋ.ಕಾಮ್)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.