ಕ್ರೀಡೆ

ಕಣ್ಣೀರು ಹಾಕಿ

ಕಣ್ಣೀರು ಹಾಕಿ
Published On :

ಬಡತನದಲ್ಲಿ ಬೇಯುತ್ತಿದ್ದ ತಂದೆ ಜೀವನ ನಿರ್ವಹಣೆಗೆ ಭಾರತದಲ್ಲಿ ತಳ್ಳುಗಾಡಿ ಎಳೆಯುತ್ತಿದ್ದ. ಆದರೆ, ಮಗಳು ಅತ್ತ ಜರ್ಮನಿಯಲ್ಲಿ ಭಾರತ ತಂಡದ ಪರ ಇತಿಹಾಸ ನಿರ್ಮಿಸಿದ್ದಳು. 'ಶ್ರೇಷ್ಠ ಹಾಕಿಪಟು' ಪ್ರಶಸ್ತಿಯೂ ಆಕೆಯ ಮುಡಿಗೇರಿತ್ತು. ಇದು ಜೂನಿಯರ್ ವಿಶ್ವಕಪ್ ಹಾಕಿಯಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಕಥೆ.
ಇದು ಬರೀ ರಾಣಿ ರಾಂಪಾಲ್ ಕಥೆಯಲ್ಲ; ಕಂಚು ಗೆದ್ದ ತಂಡದ ಹಲವು ಆಟಗಾರ್ತಿಯರು ಬಡತನದ ನೆರಳಲ್ಲೇ ಬೆಳೆದು ಬಂದವರು. ಆದರೆ, ದೌರ್ಬಲ್ಯಗಳತ್ತ ಗಮನಹರಿಸಿದ ಆಟಗಾರ್ತಿಯರು ತಮ್ಮ ಕೌಶಲ್ಯ ಮತ್ತು ಕಠಿಣ ಪರಿಶ್ರಮದ ಮೂಲಕ, ಕತ್ತಲೆ ಕವಿದಿರುವ ಭಾರತದ ಹಾಕಿಗೆ ಹೊಸ ಬೆಳಕು ಮೂಡಿಸಿರುವುದು ನಿಜಕ್ಕೂ ದೊಡ್ಡ ಸಾಧನೆ. ತಂಡದ 8 ಆಟಗಾರ್ತಿಯರಿಗೆ ಕೆಲಸವೇ ಇಲ್ಲ. ಕೆಲ ಆಟಗಾರ್ತಿಯರಿಗೆ ಮೂಲ ಸೌಕರ್ಯಕ್ಕೂ ಗತಿ ಇಲ್ಲ.

ಕರುಣಾಜನಕ ಕಥೆ
ಜೂನಿಯರ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸುವ ಮೂಲಕ ರಾಣಿ ರಾಂಪಾಲ್ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದಿರಬಹುದು. ಆದರೆ, ಆಕೆಯ ತಂದೆಯ ಪಾಡು ದೇವರಿಗೇ ಪ್ರೀತಿ.'ನಾನು ಶ್ರೇಷ್ಠ ಆಟಗಾರ್ತಿ ಗೌರವ ಗೆದ್ದರೂ ನನ್ನ ಮನೆಯ ವಾತಾವರಣ ಮಾತ್ರ ಬದಲಾಗಿಲ್ಲ. ನಾನು ಪ್ರತಿ ತಿಂಗಳು 10 ಸಾವಿರ ರುಪಾಯಿ ದುಡಿಯುತ್ತೇನೆ. ಅದರಲ್ಲೇ ನನ್ನೆಲ್ಲ ಅಗತ್ಯಗಳನ್ನೂ ಪೂರೈಸಿಕೊಳ್ಳಬೇಕು. ಯಾವ ಪ್ರಾಯೋಜಕರೂ ಮುಂದೆ ಬಂದಿಲ್ಲ' ಎನ್ನುವ ರಾಣಿಯ ಕತೆ ಕೇಳಿದರೆ, ಇಷ್ಟೊಂದು ಎತ್ತರಕ್ಕೆ ಹೇಗೆ ಬೆಳೆದಳು ಎನಿಸುತ್ತದೆ.

ಕೌರ್‌ದೂ ಇದೇ ಕಥೆ
ಮೊನ್ನೆಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯದ ಗೋಲು ಬಾರಿಸಿದ ನವನೀತ್ ಕೌರ್ ಕಥೆಯೂ ಅಷ್ಟೇ. ಕೌರ್, ಬೂಟಾ ಸಿಂಗ್ ಎಂಬ ಮೆಕಾನಿಕ್‌ನ ಮಗಳು. ಕೌರ್ ಹಾಕಿ ಆಡಲು ಆಸಕ್ತಿ ತೋರಿದಾಗ ಸ್ಟಿಕ್ ಮತ್ತು ಬೂಟುಗಳನ್ನು ಕೊಡಿಸುವ ಮುನ್ನ ಅವರ ತಂದೆ ಆಕೆಗೆ ಹಾಕಿ ಮೇಲೆ ಗಂಭೀರ ಆಸಕ್ತಿ ಇದೆಯೋ ಇಲ್ಲವೋ ಎಂಬ ಬಗ್ಗೆ ಹಲವು ಸಲ ಟೆಸ್ಟ್ ಮಾಡಿದ್ದರಂತೆ. ಕಾರಣ ಮೂಲ ವಸ್ತುಗಳನ್ನು ಕೊಳ್ಳಲು ಇದ್ದ ತೊಂದರೆ.

ಕಟಾರಿಯಾ ಸ್ಥಿತಿ ಕಠೋರ
ವಂದನಾ ಕಟಾರಿಯಾ, ತಂಡದ ಇನ್ನೊಬ್ಬಳು ಆಟಗಾರ್ತಿ. ವಂದನಾ ಅಲ್ಲದೆ ಅವರ ಮನೆಯಲ್ಲಿ ಮೂವರು ಹೆಣ್ಣುಮಕ್ಕಳು ಹಾಕಿಪಟುಗಳು. ಇವರ ಖರ್ಚನ್ನು ಭರಿಸಲು ವಂದನಾ ತಂದೆ ಹರಸಾಹಸಪಡುತ್ತಿದ್ದಾರೆ. ಅಲ್ಲದೆ, ಖಾಸಗಿ ಕೆಲಸದಲ್ಲಿರುವ ತಂದೆ ನಾಹರ್‌ಸಿಂಗ್ ಮುಂದಿನ ವರ್ಷ ನಿವೃತ್ತಿಯಾಗುತ್ತಿದ್ದಾರೆ. ಭವಿಷ್ಯದ ದಿನಗಳನ್ನು ಬಲ್ಲವನೇ ಬಲ್ಲ.

'ಚಕ್ ದೆ ಇಂಡಿಯಾ' ಸ್ಫೂರ್ತಿ
ಶಾರೂಖ್ ಖಾನ್ ನಟಿಸಿದ 'ಚಕ್ ದೆ ಇಂಡಿಯಾ' ಸಿನಿಮಾ ಈ ಆಟಗಾರ್ತಿಯರಿಗೆ ಪದಕ ಗೆಲ್ಲಲು ಸ್ಫೂರ್ತಿ ನೀಡಿತಂತೆ. ಆರಂಭದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರಿ ಅಂತರದಿಂದ ಸೋತಾಗ ಪ್ರಶಸ್ತಿಯ ಕನಸು ದೂರ ಉಳಿದಿತ್ತು. ಆದರೆ, ಇಂಗ್ಲೆಂಡ್ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪ್ರತಿ ಆಟಗಾರ್ತಿಯರೂ 'ಚಕ್ ದೆ ಇಂಡಿಯಾ'ದ ಸ್ಫೂರ್ತಿದಾಯಕ ಮಾತುಗಳನ್ನು ಪರಸ್ಪರ ಹೇಳಿಕೊಂಡರಂತೆ. 'ಪಂದ್ಯದ 70 ನಿಮಿಷಗಳು ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು. ಹೀಗಾಗಿ ನಮ್ಮ ಕೌಶಲ್ಯಗಳನ್ನೆಲ್ಲ ಪಂದ್ಯದಲ್ಲಿ ತೋರಿಸಬೇಕು' ಎಂದು ತೀರ್ಮಾನಿಸಿದರಂತೆ.

ಬಲ್ದೇವ್ ಸಿಂಗ್ ಯಾಕೆ ಕಾಣುತ್ತಿಲ್ಲ

ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಲ್ದೇವ್ ಸಿಂಗ್, ಶಹಾಬಾದ್‌ನಲ್ಲಿ ತಮ್ಮದೇ ಹಾಕಿ ಅಕಾಡೆಮಿ ಸ್ಥಾಪಿಸಿದ್ದಾರೆ. ಜೂನಿಯರ್ ವಿಶ್ವಕಪ್‌ನಲ್ಲಿ ಪದಕ ಗೆದ್ದ ಐವರು ಆಟಗಾರ್ತಿಯರು ಇವರ ಬಳಿಯೇ ತರಬೇತಿ ಪಡೆದಿದ್ದಾರೆ. ಇಂಥ ಅತ್ಯುತ್ತಮ ತರಬೇತುದಾರರನ್ನು ಇಟ್ಟುಕೊಂಡು ವಿದೇಶಿ ಕೋಚ್‌ಗಳನ್ನು ಹುಡುಕುತ್ತಿರುವ ಹಾಕಿ ಇಂಡಿಯಾ ಉದ್ದೇಶವೇ ಅರ್ಥವಾಗುತ್ತಿಲ್ಲ. ಬಲ್ದೇವ್ ಸಿಂಗ್‌ರಂಥ ಅನೇಕ ಪ್ರತಿಭೆಗಳನ್ನು ನಮ್ಮ ಹಾಕಿ ಯಾಕೆ ಪರಿಗಣಿಸುತ್ತಿಲ್ಲ ಎಂಬುದು ಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.