ಜೊಹಾನ್ಸ್ಬರ್ಗ್: ಶುಕ್ರವಾರ ಆರಂಭಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ದಲ್ಲಿ ಮೊದಲ ದಿನವೇ ಹರಿಣಗಳ ಮೊದಲ ಇನಿಂಗ್ಸ್ ಅನ್ನು 253 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದ, ಪಾಕಿಸ್ತಾನ ತನ್ನ ಮೊದಲ ಇನಿಂಗ್ಸ್ನಲ್ಲಿ ಧೂಳಿಪಟವಾಗಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವ ಸಂದರ್ಭದಲ್ಲಿ, ದಕ್ಷಿಣ ಆಫ್ರಿಕಾ ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 33 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತ್ತು.
ಪಾಕ್ ಭಾರೀ ಕುಸಿತ: ಪಂದ್ಯದ ಎರಡನೇ ದಿನವಾದ ಶನಿವಾರ, ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 49 ರನ್ಗಳಿಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ, ತನ್ನ ಟೆಸ್ಟ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತವನ್ನು ದಾಖಲಿಸಿದಂತಾಗಿದೆ.
ಅತ್ತ, ಹರಿಣಗಳ ಪರ ಅದ್ಭುತ ಪ್ರದರ್ಶನ ತೋರಿದ ಡೇಲ್ ಸ್ಟೇಯ್ನ್, ತಾವು ಮಾಡಿದ 8.1 ಓವರ್ಗಳಲ್ಲಿ ಕೇವಲ 8 ರನ್ ನೀಡಿ, 6 ವಿಕೆಟ್ ಕಬಳಿಸಿ, ಪಾಕಿಸ್ತಾನ ಧೂಳಿಪಟವಾಗಲು ಪ್ರಮುಖ ಕಾರಣವಾದರು. ಪಾಕಿಸ್ತಾನದ ಮೊದಲ ಇನಿಂಗ್ಸ್ ಅನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದ ಹರಿಣಗಳು, 200 ರನ್ಗಳ ಬೃಹತ್ ಮುನ್ನಡೆ ಸಾಧಿಸಿದರು. ಆದರೆ, ಈ ಸಂದರ್ಭದಲ್ಲಿ, ಪಾಕಿಸ್ತಾನದ ಮೇಲೆ ಫಾಲೋ ಆನ್ ಹೇರಲು, ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ ಸ್ಮಿತ್ ಮನಸ್ಸು ಮಾಡಲಿಲ್ಲ. ಫಾಲೋ ಆನ್ ಬದಲಾಗಿ, ತಮ್ಮ ತಂಡವನ್ನು ದ್ವಿತೀಯ ಇನಿಂಗ್ಸ್ ಆರಂಭಿಸಲು ಕ್ರೀಸ್ಗೆ ಇಳಿಸಿದರು. ದಕ್ಷಿಣ ಆಫ್ರಿಕಾದ ನಾಯಕನಾಗಿ, ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಗ್ರೇಮ್ ಸ್ಮಿತ್ ಅವರು ಈ ಪಂದ್ಯದಲ್ಲಿ ಸದಾ ನೆನಪಿನಲ್ಲಿಡಬಹುದಾದ ಜಯವೊಂದನ್ನು ನಿರೀಕ್ಷಿಸುತ್ತಿದ್ದಾರೆ.
ಶನಿವಾರದ ದಿನದಾಟ ಪಾಕಿಸ್ತಾನದ ಪಾಲಿಗೆ 'ಹಾರರ್ ಷೋ' ಆಗಿದ್ದು ಮಾತ್ರ ಸುಳ್ಳಲ್ಲ. ತಮ್ಮ ಆರಂಭಿಕ ಸ್ಪೆಲ್ನಲ್ಲಿಯೇ ಪಾಕಿಸ್ತಾನದ ಆರಂಭಿಕರಾದ ಮಹಮ್ಮದ್ ಹಫೀಸ್ (6), ನಾಸಿರ್ ಜೆಮ್ಷೆಡ್ (2) ಅವರುಗಳನ್ನು ಪೆವಿಲಿಯನ್ಗೆ ಅಟ್ಟಿದ ಸ್ಟೇಯ್ನ್, ನಂತರ, ಮಧ್ಯಮ ಕ್ರಮಾಂಕದ ಯೂನಿಸ್ ಖಾನ್ (0), ಸರ್ಫಾಜ್ ಅಹ್ಮದ್ (1), ಸಯೀದ್ ಅಜ್ಮಲ್ (1) ಹಾಗೂ ಅಂತಿಮ ಬ್ಯಾಟ್ಸ್ಮನ್ ರಹಾತ್ ಅಲಿ (0) ಅವರ ವಿಕೆಟ್ ಗಳಿಸಿ ವಿಜೃಂಭಿಸಿದರು.
ಸ್ಟೇಯ್ನ್ ಅವರ ಈ ಮಾರಣಾಂತಿಕ ದಾಳಿಗೆ ಕೈ ಜೋಡಿಸಿದ ಜಾಕ್ ಕಾಲಿಸ್, ಅಜರ್ ಅಲಿ (13), ಮಿಸ್ಬಾ ಉಲ್ ಹಕ್ (12) ಅವರ ವಿಕೆಟ್ಗಳನ್ನು ಪಡೆದರೆ, ಫಿಲ್ಯಾಂಡರ್ ಅವರು, ಅಸಾದ್ ಶಫೀಕ್ (1), ಉಮರ್ ಗುಲ್ (0) ಅವರ ವಿಕೆಟ್ಗಳನ್ನು ಉರುಳಿಸಿದರು.