

ಬೆಂಗಳೂರು: ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ 27ನೇ ರಾಷ್ಟ್ರೀಯ ಫೆಡರೇಷನ್ ಕಪ್ ಬಾಸ್ಕೆಟ್ಬಾಲ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಒಎನ್ಜಿಸಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಒಎನ್ಜಿಸಿ ತಂಡ ಚೆನ್ನೈನ ಐಒಬಿ ತಂಡವನ್ನು 72-46 ಅಂಕಗಳಿಂದ ಪರಾಭವಗೊಳಿಸಿತು.
ಇನ್ನು ತೀವ್ರ ಹಣಾಹಣಿಯಿಂದ ನಡೆದ ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರವನ್ನು 63-62 ಅಂಕಗಳಿಂದ ಪರಾಭವಗೊಳಿಸಿದ ತಮಿಳುನಾಡು ತಂಡ ಪ್ರಶಸ್ತಿ ಗೆದ್ದುಕೊಂಡಿತು.
ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಪಂಜಾಬ್ ತಂಡ ಐಎಎಫ್ ತಂಡವನ್ನು 88-66 ಮಣಿಸಿತು. ಮಹಿಳೆಯರ ವಿಭಾಗದಲ್ಲಿ ಕೇರಳ ತಂಡ ಸೌಥ್ ಸೆಂಟ್ರಲ್ ರೇಲ್ವೆ ತಂಡವನ್ನು 88-66 ಅಂಕಗಳಿಂದ ಪರಾಭವಗೊಳಿಸಿತು.
ಒಎನ್ಜಿಸಿ ತಂಡದ ಬೃಗುವಂಶಿ ಪುರುಷರ ವಿಭಾಗದ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿನ ಅನಿತಾ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.