

ಚೆನ್ನೈ: ಆಸ್ಟ್ರೇಲಿಯಾದ ಉದಯೋನ್ಮುಖ ಆಲ್ರೌಂಡ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರು ಐಪಿಎಲ್ನ 6ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದರು. ಹೀಗಾಗಿ ಈ ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರಿಗಿಂತ ಯುವ ಆಟಗಾರರಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತು. ಅಲ್ಲದೆ ಹೆಚ್ಚಿನ ಸ್ಟಾರ್ ಆಟಗಾರರು ಹರಾಜಾಗದೇ ಉಳಿದರು.
24 ವರ್ಷದ ಮ್ಯಾಕ್ಸ್ವೆಲ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರು. 5.3 ಕೋಟಿಗೆ ಖರೀದಿಸಿತು. ಭಾರತದ ಆಲ್ರೌಂಡರ್ ಅಭಿಷೇಕ್ ನಾಯರ್, ವೇಗಿ ಆರ್.ಪಿ ಸಿಂಗ್ ಹಾಗೂ ಜಯದೇವ್ ಉನಾದ್ಕತ್ ಸಹ ನಿರೀಕ್ಷೆಗೆ ಮೀರಿ ಹರಾಜಾದರು. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 108 ಆಟಗಾರರು ಭಾಗವಹಿಸಿದ್ದರು. ಆದರೆ, ಅದರಲ್ಲಿ ಕೇವಲ 37 ಆಟಗಾರರನ್ನು ಮಾತ್ರ ಫ್ರಾಂಚೈಸಿಗಳು ಖರೀದಿಸಿದವು.
ಸ್ಟಾರ್ ಆಟಗಾರರಾದ ಆಸ್ಟ್ರೇಲಿಯಾ ತಂಡದ ನಾಯಕ ಮೈಕೆಲ್ ಕ್ಲಾರ್ಕ್ ಮತ್ತು ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಕೊಳ್ಳಲು ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಲಿಲ್ಲ. ಈ ಇಬ್ಬರು ಆಟಗಾರರಲ್ಲಿ ರು. 2.1 ಕೋಟಿಗೆ ಮಾರಾಟವಾದರು. ಕ್ಲಾಕ್ ಅವರನ್ನು ಪುಣೆ ವಾರಿಯರ್ಸ್ ಖರೀದಿಸಿದರೆ, ಪಾಂಟಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತು.
ಮ್ಯಾಕ್ಸ್ವೆಲ್ ಖರೀದಿಸಲು ಮುಂಬೈ ಮತ್ತು ಹೈದರಾಬಾದ್ ಸನ್ರೈಸರ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ಮ್ಯಾಕ್ಸ್ವೆಲ್ ಮುಂಬೈ ಪಾಲಾದರು.
'ಆತ ಉದಯೋನ್ಮುಖ ಆಟಗಾರ. ಆತ ಬ್ಯಾಟ್ ಮತ್ತು ಬೌಲಿಂಗ್ ಮಾಡಬಲ್ಲ. ಅಲ್ಲದೆ ಆತ ಉತ್ತಮ ಫಿಲ್ಡರ್ ಸಹ ಹೌದು. ಹರಾಜಿಗೆ ಆಗಮಿಸುವ ಮುನ್ನ ಕೆಲವರ ಹೆಸರನ್ನು ನೆನಪಿಸಿಕೊಂಡು ಬಂದಿದ್ದೆವು. ಅದರಲ್ಲಿ ಮ್ಯಾಕ್ಸ್ವೆಲ್ ಸಹ ಒಬ್ಬ ಆಟಗಾರ' ಎಂದು ಮುಂಬೈ ತಂಡದ ಮಾಲೀಕರಾದ ನೀತಾ ಅಂಬಾನಿ ಹರಾಜಿನ ನಂತರ ಹೇಳಿದರು.
ಮ್ಯಾಕ್ಸ್ವೆಲ್ ಕೇವಲ 8 ಏಕದಿನ ಪಂದ್ಯಗಳು ಮತ್ತು 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾವಹಿಸಿದ್ದಾರೆ.
ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಭಾಗವಹಿಸಿರುವ ಮ್ಯಾಕ್ಸ್ವೆಲ್, ಭಾನುವಾರ ಪರ್ತ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಡಕೌಟ್ ಆಗಿದ್ದಾರೆ. ಆದರೆ, ಐಪಿಎಲ್ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದಾರೆ.
ಭಾರತದ ಪ್ರಥಮ ದರ್ಜೆ ಆಟಗಾರರಾದ ಜಯದೇವ್ ಉನಾದ್ಕತ್ ಮತ್ತು ಪಂಕಜ್ ಸಿಂಗ್ ಅವರು ಉತ್ತಮ ಮೊತ್ತಕ್ಕೆ ಹರಾಜಾದರು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡದ ಆಟಗಾರರನ್ನೇ ಫ್ರಾಂಚೈಸಿಗಳು ಹೆಚ್ಚು ಬಯಸಿದ್ದು ಸ್ಪಷ್ಟವಾಗಿತ್ತು.
ಕೇವಲ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರುವ ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕ್ರಿಸ್ಟೋಫರ್ ಮೊರೀಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರು. 3.3 ಕೋಟಿಗೆ ಹರಾಜಾದರು. ಮೊರೀಸ್ ಕೊಳ್ಳಲು ಮುಂಬೈ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಪ್ರಯತ್ನಿಸಿದವು.
ಶ್ರೀಲಂಕಾದ ಸ್ಪಿನ್ನರ್ ಸಚಿತ್ರಾ ಸೇನಾನಾಯಕೆ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ರು. 3.3 ಕೋಟಿಗೆ ಹರಾಜಾದರು.