ಕಟಕ್: ಈ ಬಾರಿಯ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಪ್ರಥಮ ಲೀಗ್ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಪಾಕಿಸ್ತಾನ ಮಹಿಳಾ ತಂಡ, ಭಾನುವಾರ ನಡೆದ ತನ್ನ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಪರಾಭವಗೊಂಡಿತು.
ಇಲ್ಲಿನ ಬಾರಾಮತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್, ಪಂದ್ಯಾವಳಿಯ ಸೂಪರ್ ಸಿಕ್ಸ್ ಹಂತದಲ್ಲಿ ತನ್ನ ಪ್ರವೇಶವನ್ನು ಖಾತ್ರಿಪಡಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 41.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 104 ರನ್ ಗಳಿಸಿತ್ತು. ನಂತರ, ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್, 29.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ, 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ, ನ್ಯೂಜಿಲೆಂಡ್ ತಂಡದ ರಾಚೆಲ್ ಕ್ಯಾಂಡಿ ಸಿಂಹಸ್ವಪ್ನವಾದರು. ಆರಂಭಿಕ ಆಟಗಾರ್ತಿಯಾದ ಜವೇರಿಯಾ ಖಾನ್ ಸೇರಿದಂತೆ, ಮೂರನೇ ಕ್ರಮಾಂಕದಲ್ಲಿ ಆಡುವ ನಾಯಕಿ ಸನಾ ಮಿರ್, ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ನಯಿನ್ ಅಬಿದಿ, ಆಸ್ಮಾವಿಯಾ ಇಕ್ಬಾಲ್, ಸುಮೈಯಾ ಸಿದ್ದಿಕಿ ಅವರ ವಿಕೆಟ್ಗಳನ್ನು ಕಬಳಿಸಿ, ಪಾಕಿಸ್ತಾನದ ಇನಿಂಗ್ಸ್ ಚಿಗುರದಂತೆ ನೋಡಿಕೊಂಡರು. 10 ಓವರ್ಗಳಲ್ಲಿ 3 ಮೇಡನ್ ಓವರ್ ಮಾಡಿ, 19 ರನ್ ನೀಡಿದ ಅವರು 5 ವಿಕೆಟ್ ಕಬಳಿದ್ದು, ಕಿವೀಸ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಇನ್ನು, ಕಿವೀಸ್ನ ಇತರ ಬೌಲರ್ಗಳಾದ ಬ್ರೌನಿ 2 ವಿಕೆಟ್ ಪಡೆದರೆ, ಬ್ರಾಡ್ಮೋರ್ ಹಾಗೂ ದೂಲನ್ ತಲಾ ಒಂದು ವಿಕೆಟ್ ಗಳಿಸಿದರು.
ಬೇಟ್ಸ್ ಆಕರ್ಷಕ ಅರ್ಧ ಶತಕ: ಪಾಕಿಸ್ತಾನ ನೀಡಿದ್ದ ಸುಲಭ ಸವಾಲನ್ನು ಮೆಟ್ಟಲು ನ್ಯೂಜಿಲೆಂಡ್ಗೆ ಕಷ್ಟವೇನೂ ಆಗಲಿಲ್ಲ. ಆರಂಭದಲ್ಲೇ ದೂಲನ್ ಅವರನ್ನು ಕಳೆದುಕೊಂಡರೂ, ಮತ್ತೊಬ್ಬ ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಬೇಟ್ಸ್ ಅವರ ಅಜೇಯ 65 ರನ್ಗಳಿಂದಾಗಿ ಕಿವೀಸ್ ಜಯದ ನಗೆ ಬೀರಿತು.