ಗುರುವಾರ ಆಸೀಸ್ ಆಟಗಾರರ ಆಗಮನ

Updated on: 




ಮೆಲ್ಬರ್ನ್: ಇದೇ ತಿಂಗಳಾಂತ್ಯದಲ್ಲಿ ಭಾರತ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಆಸ್ಟ್ರೇಲಿಯಾ ತಂಡದ ಕೆಲ ಆಟಗಾರರು ಗುರುವಾರ ಭಾರತಕ್ಕೆ ಆಗಮಿಸಲಿದ್ದಾರೆ.
ಇಲ್ಲಿನ ವಾತಾವರಣದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ಆಸೀಸ್ ತಂಡದ ಎಂಟು ಆಟಗಾರರು ನಿಗದಿತ ದಿನಕ್ಕೂ ಮುನ್ನವೇ ಭಾರತಕ್ಕೆ ಬಂದು ತಲುಪಲಿದ್ದಾರೆ.
ಸದ್ಯ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರಿಯ ಸರಣಿಯನ್ನಾಡುತ್ತಿರುವ ಹಿನ್ನಲೆಯಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಆಟಗಾರರನ್ನು ಮೂರು ಗುಂಪುಗಳಾಗಿ ಭಾರತಕ್ಕೆ ಕಳುಹಿಸಲು ಜಾನ್ ಇನ್ವೆರಾರಿಟಿ ನೇತೃತ್ವದ ಆಯ್ಕೆ ಸಮಿತಿ ನಿರ್ಧರಿಸಿದೆ. ಭಾರತ ಪ್ರವಾಸ ಕೈಗೊಳ್ಳಲಿರುವ 17 ಆಟಗಾರರ ಆಸ್ಟ್ರೇಲಿಯಾ ತಂಡ ಮೂರು ಗುಂಪುಗಳಾಗಿ ಭಾರತಕ್ಕೆ ತೆರಳಲಿದೆ ಎಂದು ಇನ್ವೆರಾರಿಟಿ ತಿಳಿಸಿದ್ದಾರೆ.
ಮೊದಲ ಗುಂಪಿನಲ್ಲಿ ಜಾಕ್ಸನ್ ಬರ್ಡ್, ಎಡ್ ಕೊವನ್, ಮೌಸೆಸ್ ಹೆನ್ರಿಕ್ಸ್, ಉಸ್ಮಾನ್ ಖವಾಜ, ನಾಥನ್ ಲಿಯೊನ್, ಜೇಮ್ಸ್ ಪ್ಯಾಟಿಂಸನ್, ಪೀಟರ್ ಸಿಡ್ಲ್ ಮತ್ತು ಸ್ಟೀವ್ ಸ್ಮಿತ್ ಫೆ.7 ರಂದು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರು ಹೇಳಿದರು. ನಂತರ ಎರಡನೇ ಗುಂಪಿನಲ್ಲಿ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮ್ಯಾಥ್ಯೂ ವೇಡ್ ಫೆ.9 ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಹೆಬ್ಬೆರಳಿಗೆ ಗಾಯಗೊಂಡ ಹಿನ್ನಲೆಯಲ್ಲಿ ಡೇವಿಡ್ ವಾರ್ನರ್ ಸರಣಿಗೆ ಅಲಭ್ಯರಾಗುವ ಸಾಧ್ಯತೆಗಳು ಹೆಚ್ಚಾಗಿದ್ದು ಇವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ನಂತರ ಫೆ.11 ರಂದು ನಾಯಕ ಮೈಕಲ್ ಕ್ಲಾರ್ಕ್ ಸೇರಿದಂತೆ ಶೇನ್ ವಾಟ್ಸನ್, ಕ್ಸೆವಿಯರ್ ದೊಹಾರ್ಟಿ, ಮಿಚೆಲ್ ಸ್ಟಾರ್ಕ್, ಫಿಲಿಪ್ ಹಗ್ಸ್ ಹಾಗೂ ಮಿಚೆಲ್ ಜಾನ್ಸನ್ ಮೂರನೇ ಗುಂಪಿನಲ್ಲಿ ಭಾರತಕ್ಕೆ ಬರಲಿದ್ದಾರೆ ಎಂದು ಇನ್ವೆರಾರಿಟಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡ ಸರಣಿಗೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದ್ದು, ಫೆ.22-26 ವರೆಗೆ ಚೆನೈನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.
ಇದೇ ವೇಳೆ ಪ್ರಸಕ್ತ ಸಾಲಿನ ಪ್ರಥಮ ಧರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರರ್ದಶನ ತೋರಿರುವ 19ರ ಹರೆಯದ ಎಡಗೈ ಸ್ಪಿನ್ನರ್ ಅಶ್ಟೋನ್ ಅಗರ್ ಅವರನ್ನು ಮೊದಲ ಗುಂಪಿನಲ್ಲಿ ಭಾರತಕ್ಕೆ ಕಳುಹಿಸಲಾಗುತ್ತಿದ್ದು, ತಂಡದ ಆಟಗಾರರಿಗೆ ನೆಟ್ಸ್ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಭಾರತದಲ್ಲಿ ಒಂದು ವಾರಗಳ ಕಾಲ ಇರುವ ಈತನಿಗೆ ತನ್ನ ಸಾಮರ್ಥ್ಯ ಬಲಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಇನ್ವೆರಾರಿಟಿ ತಿಳಿಸಿದ್ದಾರೆ.
ಆಸೀಸ್ ತಂಡ: ಮೈಕಲ್ ಕ್ಲಾರ್ಕ್ (ನಾಯಕ), ಶೇನ್ ವಾಟ್ಸನ್, ಡೇವಿಡ್ ವಾರ್ನರ್, ಕ್ಸೆವಿಯರ್ ದೊಹಾರ್ಟಿ, ಮಿಚೆಲ್ ಸ್ಟಾರ್ಕ್, ಫಿಲಿಪ್ ಹಗ್ಸ್, ಮಿಚೆಲ್ ಜಾನ್ಸನ್, ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್, ಜಾಕ್ಸನ್ ಬರ್ಡ್, ಎಡ್ ಕೊವನ್, ಮೌಸೆಸ್ ಹೆನ್ರಿಕ್ಸ್, ಉಸ್ಮಾನ್ ಖವಾಜ, ನಾಥನ್ ಲಿಯೊನ್, ಜೇಮ್ಸ್ ಪ್ಯಾಟಿಂಸನ್, ಪೀಟರ್ ಸಿಡ್ಲ್, ಸ್ಟೀವ್ ಸ್ಮಿತ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com