ದ ಹಾಗ್: ಫುಟ್ಬಾಲ್ ಕ್ರೀಡೆಯಲ್ಲಿಯೂ ವ್ಯಾಪಕ ಮ್ಯಾಚ್ ಫಿಕ್ಸಿಂಗ್ ಹಗರಣಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಪಂದ್ಯಾವಳಿಗಳ ಸುಮಾರು 100ಕ್ಕೂ ಹೆಚ್ಚು ಪಂದ್ಯಗಳು ಫಿಕ್ಸ್ ಆಗಿದ್ದವೆಂಬ ಬಿಸಿ ಸುದ್ದಿಯನ್ನು ಯೂರೋಪ್ನ ಪೊಲೀಸ್ ಇಲಾಖೆ (ಯೂರೋ ಪೊಲೀಸ್) ಬಹಿರಂಗಪಡಿಸಿದೆ. ಅಲ್ಲದೇ, ಚಾಂಪಿಯನ್ಸ್ ಲೀಗ್ ಹಾಗೂ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳೂ ಫಿಕ್ಸ್ ಆಗಿದ್ದವು ಎಂಬ ಸ್ಫೋಟಕ ಮಾಹಿತಿಯನ್ನೂ ನೀಡಿ, ಜಗತ್ತಿನ ಫುಟ್ಬಾಲ್ ಪ್ರೇಮಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ.
ಯೂರೋ ಪೊಲೀಸ್ನ ಈ ಹೇಳಿಕೆಯಿಂದಾಗಿ, ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗೆ ಅಪಖ್ಯಾತಿ ಬರುವ ಸಾಧ್ಯತೆಗಳೂ ದಟ್ಟವಾಗಿವೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂರೋ ಪೊಲೀಸ್ ಮುಖ್ಯಸ್ಥ ರಾಬ್ ವೇನ್ರೈಟ್, 'ಇದುವರೆಗೂ ನಮ್ಮ ಸಂಸ್ಥೆ ಮಾಡಿರುವ ತನಿಖೆಗಳಲ್ಲೇ ದೊಡ್ಡ ತನಿಖೆ ಇದಾಗಿದೆ' ಎಂದು ಹೇಳಿದರು.
ಇಲಾಖೆ ಹೇಳಿರೋದೇನು?: ಐದು ದೇಶಗಳಲ್ಲಿ ತಾನು ನಡೆಸಿದ ತನಿಖೆಯಿಂದಾಗಿ, ಸುಮಾರು 380ಕ್ಕೂ ಹೆಚ್ಚು ಫುಟ್ಬಾಲ್ ಪಂದ್ಯಗಳು ಫಿಕ್ಸ್ ಆಗಿರುವ ಬಗ್ಗೆ ಅನುಮಾನ ಹುಟ್ಟಿಕೊಂಡಿವೆ. ಸಿಂಗಪೂರ್ ಮೂಲದ ಬೆಟ್ಟಿಂಗ್ ಜಾಲವೊಂದು ಈ ಪಂದ್ಯಗಳನ್ನು ಫಿಕ್ಸ್ ಮಾಡುತ್ತದೆ. ಈ ಬೆಟ್ಟಿಂಗ್ ಜಾಲದಲ್ಲಿ, ಆಟಗಾರರು, ರೆಫ್ರಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಲ್ಲದೇ, ವಿಶ್ವಮಟ್ಟದ ಫುಟ್ಬಾಲ್ನ ಪ್ರತಿ ಹಂತದಲ್ಲಿ ಈ ರೀತಿಯ ಫಿಕ್ಸಿಂಗ್ಗಳು ನಡೆದಿವೆ ಎಂದು ಯೂರೋ ಪೊಲೀಸ್ ಹೇಳಿದೆ.
ಬಹಿರಂಗವಾದದ್ದು ಹೇಗೆ?: ಯೂರೋಪ್ನ ಅಂಡರ್ವರ್ಲ್ಡ್ನಲ್ಲಿ ನಡೆಯುವ ವೇಶ್ಯಾವಾಟಿಕೆ, ಡ್ರಗ್ ಮಾಫಿಯಾ ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆಗಳಿಗೆ ಫುಟ್ಬಾಲ್ ಫಿಕ್ಸಿಂಗ್ನಿಂದ ಬರುವ ಹಣ ಬಳಕೆಯಾಗುತ್ತಿದೆ ಎಂಬ ಮಾಹಿತಿಯನ್ನು ಇಂಟರ್ ಪೋಲ್ ಕಳೆದ ತಿಂಗಳು, ಯೂರೋ ಪೊಲೀಸ್ಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ, ಯೂರೋ ಪೊಲೀಸ್ ಫುಟ್ಬಾಲ್ ಅಕ್ರಮಗಳ ವಿರುದ್ಧ ತನಿಖೆ ನಡೆಸಲು ಮುಂದಾಗಿತ್ತು. ಕಳೆದ ವರ್ಷ ಇಟಲಿಯಲ್ಲಿ ನಡೆದಿದ್ದ ಯೂರೋಪಿಯನ್ ಚಾಂಪಿಯನ್ಸ್ ಲೀಗ್ನ ಪಂದ್ಯಗಳಲ್ಲೂ ಹಲವಾರು ಬೆಟ್ಟಿಂಗ್ ಅಕ್ರಮಗಳು ನಡೆದಿದ್ದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರ್ಯಾರ ಮೇಲೆ ಅನುಮಾನ?: ಫುಟ್ಬಾಲ್ ಫಿಕ್ಸಿಂಗ್ ಹಗರಣಗಳಲ್ಲಿ ರೆಫ್ರಿಗಳು, ಆಟಗಾರರು ಹಾಗೂ ಅಧಿಕಾರಿಗಳು ಸೇರಿದಂತೆ ಸುಮಾರು 425 ಮಂದಿ ಮೇಲೆ ಅನುಮಾನಗಳಿವೆ ಎಂದು ಯೂರೋ ಪೊಲೀಸ್ ತಿಳಿಸಿದೆ. ಈ ಹಗರಣಗಳಲ್ಲಿ ಭಾಗಿಯಾಗಿರಬಹುದಾದ ಆಟಗಾರರಲ್ಲಿ ತುರ್ಕಿಸ್ತಾನ, ಜರ್ಮನಿ ಹಾಗೂ ಸ್ವಿಡ್ಜರ್ಲೆಂಡ್ನ ಆಟಗಾರರೇ ಹೆಚ್ಚು ಎಂದೂ ಅದು ಹೇಳಿದೆ.