ನವದೆಹಲಿ: ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ಹಾಗೂ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಒಡೆತನದ ಐಪಿಎಲ್ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಮೇಲೆ ಕೇಂದ್ರ ಜಾರಿ ನಿರ್ದೇಶನಾಲಯ (ಇಡಿ) ರು 98.5 ಕೋಟಿ ದಂಡವನ್ನು ವಿಧಿಸಿದೆ.
ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿ ವಿರುದ್ಧ ಹಣಕಾಸು ಅಕ್ರಮಗಳ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ನಿರ್ವಹಣಾ ನೀತಿ ಸಂಹಿತೆ (ಫೆಮಾ)ಯ ಅಡಿಯಲ್ಲಿ ಎರಡು ವರ್ಷಗಳಿಂದ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿತ್ತು.
ಈ ತನಿಖೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಹಣಕಾಸು ಅಕ್ರಮಗಳನ್ನು ಮಾಡಿರುವುದು ಹಾಗೂ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಡಿ, ಆರ್‌ಆರ್ ಫ್ರಾಂಚೈಸಿಯ ವ್ಯವಸ್ಥಾಪಕ ಮಂಡಳಿಗೆ ರು 98.5 ಕೋಟಿ ಮೊತ್ತ ದಂಡಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ನೋಟಿಸ್‌ಗಳನ್ನು ಕಳುಹಿಸಿದೆ.
ದಂಡದ ಪ್ರಮಾಣ, ಗಡುವು: ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಜೈಪುರ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಜೆಐಪಿಎಲ್) ಹಾಗೂ ರಾಜಸ್ಥಾನ ರಾಯಲ್ಸ್‌ನ ಒಡೆತನ ಹೊಂದಿರುವವರಿಗೆ ಅದರ ನಿರ್ದೇಶಕರಿಗೆ ರು 50 ಕೋಟಿ, ಮಾರಿಷಸ್ ಮೂಲದ ಎಎಂ ಸ್ಪೋರ್ಟಿಂಗ್ ಹೋಲ್ಡಿಂಗ್ ಸಂಸ್ಥೆಗೆ ರು 34 ಕೋಟಿ ದಂಡ ವಿಧಿಸಲಾಗಿದೆ. ಇವಲ್ಲದೇ, ರು 14.5 ಕೋಟಿ ಮೊತ್ತ ದಂಡದ ನೋಟಿಸ್ ಅನ್ನು ಎಸ್‌ಡಿ ಇನ್ವೆಸ್ಟ್‌ಮೆಂಟ್ಸ್ (ಯುನೈಟೆಡ್ ಕಿಂಗ್‌ಡಮ್) ಸಂಸ್ಥೆಗೆ ನೀಡಲಾಗಿದೆ.
ದಂಡವನ್ನು 45 ದಿನಗಳೊಳಗಾಗಿ, ಪಾವತಿಸುವಂತೆಯೂ ಸೂಚಿಸಲಾಗಿದೆ.
ಎಲ್ಲರ ಮೇಲೂ ಕಣ್ಣು: ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಫ್ರಾಂಚೈಸಿಗಳೂ ಹಣಕಾಸು ಅವ್ಯವಹಾರಗಳಲ್ಲಿ ನಿರತವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ, ಎಚ್ಚೆತ್ತಿದ್ದ ಜಾರಿ ನಿರ್ದೇಶನಾಲಯ, ತನಿಖೆಯನ್ನು ಕೈಗೊಂಡಿತ್ತಲ್ಲದೇ, ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಫ್ರಾಂಚೈಸಿಗಳ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ತನಿಖೆಗೆ ಸಂಬಂಧಿಸಿದಂತೆ, ಐಪಿಎಲ್ ತಂಡವೊಂದರ ಮಾಲೀಕರಿಗೆ ದಂಡ ಕಟ್ಟಲು ಜಾರಿ ನಿರ್ದೇಶನಾಲಯ ನೋಟಿಸ್ ನೀಡುತ್ತಿರುವುದು ಇದೇ ಮೊದಲು. ಅದರಲ್ಲೂ, ಐಪಿಎಲ್ ಆರನೇ ಆವೃತ್ತಿಗಾಗಿ ಭಾನುವಾರ ಚೆನ್ನೈನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಗಿದ ಒಂದು ದಿನದ ಅಂತರದಲ್ಲೇ ನೋಟಿಸ್ ಜಾರಿಯಾಗಿದೆ.
ಇತರರಿಗೂ ನೋಟಿಸ್: ಇತರ ಐಪಿಎಲ್ ಪ್ರಾಂಚೈಸಿಗಳ ವಿರುದ್ಧದ ತನಿಖೆಯಲ್ಲೂ ಅವ್ಯವಹಾರಗಳು ಕಂಡುಬಂದಿದ್ದು, ಈವರೆಗೆ ಐಪಿಎಲ್ ಆಡಿರುವ ಎಲ್ಲಾ ತಂಡಗಳ ವ್ಯವಸ್ಥಾಪಕ ಮಂಡಳಿಗಳ ಮಾಲೀಕರಿಗೆ ರು 2000 ಮೊತ್ತದ ದಂಡ ಪಾವತಿಗಾಗಿ ಇದುವರೆಗೆ 24 ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.