ಜೊಹಾನ್ಸ್ಬರ್ಗ್: ಮೊದಲ ಇನಿಂಗ್ಸ್ನಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾಗಿದ್ದ ಸ್ಟೇಯ್ನ್, ಮಿಸ್ಬಾ ಉಲ್ ಹಕ್ ಪಡೆಯ ದ್ವಿತೀಯ ಇನಿಂಗ್ಸ್ನಲ್ಲೂ 5 ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 211 ರನ್ಗಳ ಬೃಹತ್ ಜಯವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಂದ್ಯದಲ್ಲಿ ಗೆಲುವಿಗಾಗಿ 480 ರನ್ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಸೋಮವಾರ ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 268 ರನ್ಗಳಿಗೆ ಆಲೌಟ್ ಆಯಿತು. ಈ ಜಯದ ಮೂಲಕ, ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿತು.
ಭಾನುವಾರ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ ಒಂದು ಹಂತದಲ್ಲಿ 82 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ, ನಾಯಕ ಮಿಸ್ಬಾ ಉಲ್ ಹಕ್ ಹಾಗೂ ಅಸಾದ್ ಶರೀಫ್ ಜೋಡಿ, ಮುರಿಯದ 101 ರನ್ಗಳ ಜೊತೆಯಾಟವಾಡಿ, ದಿನಾಂತ್ಯಕ್ಕೆ ಪಾಕಿಸ್ತಾನದ ದ್ವಿತೀಯ ಇನಿಂಗ್ಸ್ ಮೊತ್ತವನ್ನು 183 ರನ್ಗಳಿಗೆ ತಂದಿತ್ತು.
ಆದರೆ, ಸೋಮವಾರ ಈ ಜೋಡಿಯ ಮೋಡಿ ಮುಂದುವರೆಯಲು, ಸ್ಟೇಯ್ನ್ ಬಿಡಲಿಲ್ಲ. ಪಾಕಿಸ್ತಾನದ ಮೊತ್ತ 209 ರನ್ ಆಗಿದ್ದಾಗ, ಅಸಾದ್ ಅವರ ವಿಕೆಟ್ ಉರುಳಿಸಿದ ಸ್ಟೇಯ್ನ್, ತಮ್ಮ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಹಕ್- ಅಸಾದ್ ಜೋಡಿ ಮುರಿದ ನಂತರ, ಪಾಕಿಸ್ತಾನ ನಿಗದಿತ ಅಂತರದಲ್ಲಿ ವಿಕೆಟ್ಗಳನ್ನು ಚೆಲ್ಲುತ್ತಾ ಹೋಯಿತು. ಉಮರ್ ಗುಲ್ (23) ಕೊಂಚ ಜಿಗುಟು ಆಟವನ್ನು ಪ್ರದರ್ಶಿಸಿದ್ದು ಬಿಟ್ಟರೆ, ಮತ್ಯಾರೂ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಲ್ಲುವ ಚಾತುರ್ಯ ತೋರಲಿಲ್ಲ. ಅಂತಿಮವಾಗಿ, ಪಾಕಿಸ್ತಾನ 268 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಅಂತಿಮ ಬ್ಯಾಟ್ಸ್ಮನ್ ರಹಾತ್ ಅಲಿ (3) ಅಜೇಯರಾಗಿ ಉಳಿದರು. ಸೋಮವಾರದ ದಿನದಾಟದಲ್ಲಿ ಸ್ಟೇಯ್ನ್ 4 ವಿಕೆಟ್ ಕಬಳಿಸಿದರೆ, ಫಿಲ್ಯಾಂಡರ್ ಹಾಗೂ ಮಾರ್ಕೆಲ್ ಅವರು ತಲಾ ಒಂದು ವಿಕೆಟ್ ಗಳಿಸಿದರು.
ಮಿಂಚಿದ ಸ್ಟೇಯ್ನ್: ಹರಿಣಗಳ ಪಾಲಿಗೆ ಸವಾಲಾಗಿ ಬೆಳೆದಿದ್ದ ಮಿಸ್ಬಾ ಉಲ್ ಹಕ್ ಹಾಗೂ ಅಸಾದ್ ಶರೀಫ್ ಜೋಡಿಯನ್ನು ಮುರಿದ ಸ್ಟೇಯ್ನ್, ತಮ್ಮ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಇನಿಂಗ್ಸ್ನ 83ನೇ ಓವರ್ನಲ್ಲಿ ಅಸಾದ್ ಶರೀಫ್ ವಿಕೆಟ್ ಪಡೆದ ಅವರು, ನಂತರ, 85ನೇ ಓವರ್ನಲ್ಲಿ ಮಿಸ್ಬಾ ಉಲ್ ಹಕ್ ಅವರನ್ನೂ ಪೆವಿಲಿಯನ್ಗೆ ಅಟ್ಟಿದರು. ಆನಂತರ, ಉಮರ್ ಗುಲ್ ಹಾಗೂ ಜುನೈದ್ ಖಾನ್ ಅವರ ವಿಕೆಟ್ಗಳನ್ನೂ ಕಬಳಿಸಿದರು. ಭಾನುವಾರದ ದಿನದಾಟದಲ್ಲಿ, ನಾಸಿರ್ ಜೆಮ್ಷೆಡ್ ಅವರ ವಿಕೆಟ್ ಪಡೆದಿದ್ದ ಸ್ಟೇಯ್ನ್, ಸೋಮವಾರ ನಾಲ್ಕು ವಿಕೆಟ್ಗಳನ್ನು ಉರುಳಿಸುವ ಮೂಲಕ ಪಾಕಿಸ್ತಾನದ ಎರಡನೇ ಇನಿಂಗ್ಸ್ನಲ್ಲಿ ಒಟ್ಟು ಐದು ವಿಕೆಟ್ಗಳನ್ನು ಸಂಪಾದಿಸಿದರು. ಮೊದಲ ಇನಿಂಗ್ಸ್ ಹಾಗೂ ಎರಡನೇ ಇನಿಂಗ್ಸ್ ಸೇರಿದಂತೆ, ಅವರು ಈ ಪಂದ್ಯದಲ್ಲಿ ಒಟ್ಟು 11 ವಿಕೆಟ್ಗಳನ್ನು ಪಡೆದು, ಹರಿಣಗಳ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರಲ್ಲದೇ, ಪಂದ್ಯಶ್ರೇಷ್ಠ ಗೌರವವನ್ನೂ ಪಡೆದರು.
ಡಿವಿಲಿಯರ್ಸ್ ದಾಖಲೆ: ಈ ಪಂದ್ಯದಲ್ಲಿ ಒಟ್ಟು 10 ಕ್ಯಾಚ್ಗಳನ್ನು ಹಿಡಿದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಡಿವಿಲಿಯರ್ಸ್, ತಮ್ಮ ತಂಡದ ಆಟಗಾರರಾಗಿದ್ದ ಜಾಕ್ ರಸಲ್ ಅವರ ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದರು. ಈ ಪಂದ್ಯ ನಡೆದ ವಾಂಡರರ್ಸ್ ಕ್ರೀಡಾಂಗಣದಲ್ಲೇ 1995ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ರಸಲ್ ಅವರು ಕೀಪಿಂಗ್ ಮಾಡುವಾಗ ಎರಡೂ ಇನಿಂಗ್ಸ್ಗಳಿಂದ ಒಟ್ಟು 10 ಕ್ಯಾಚ್ಗಳನ್ನು ಹಿಡಿದಿದ್ದರು. ಅವರ ದಾಖಲೆಯನ್ನು ವಿಲಿಯರ್ಸ್ ಸರಿಗಟ್ಟಿದ್ದಾರೆ.
ಹೊಸ ದಾಖಲೆ: ಈ ಪಂದ್ಯದಲ್ಲಿ ಹತ್ತು ಕ್ಯಾಚ್ಗಳನ್ನು ಹಿಡಿದಿರುವ ಡಿ ವಿಲಿಯರ್ಸ್, ದಕ್ಷಿಣ ಆಫ್ರಿಕಾದ ದ್ವಿತೀಯ ಇನಿಂಗ್ಸ್ನಲ್ಲಿ ಶತಕವನ್ನೂ ಗಳಿಸಿದ್ದರು. ಈ ಮೂಲಕ, 10 ಕ್ಯಾಚ್ಗಳನ್ನು ಹಿಡಿದು, ಶತಕ ಸಿಡಿಸಿದ ವಿಕೆಟ್ ಕೀಪರ್ ಎಂಬ ಹೊಸ ದಾಖಲೆಯನ್ನು ವಿಲಿಯರ್ಸ್ ಹುಟ್ಟುಹಾಕಿದ್ದಾರೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್ 253
ಪಾಕಿಸ್ತಾನ ಪ್ರಥಮ ಇನಿಂಗ್ಸ್ 49
ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ 275/3 (ಡಿ)
ಪಾಕಿಸ್ತಾನ ದ್ವಿತೀಯ ಇನಿಂಗ್ಸ್ 268/10
ಮಿಸ್ಬಾ 64, ಅಸಾದ್ 56
ಬೌಲಿಂಗ್: ಸ್ಟೇಯ್ನ್ 52/5, ಫಿಲ್ಯಾಂಡರ್ 60/2
ಪಂದ್ಯಶ್ರೇಷ್ಠ: ಸ್ಟೇಯ್ನ್ (ದಕ್ಷಿಣ ಆಫ್ರಿಕಾ)