ಆಸೀಸ್ ಸರಣಿಗೆ ಆಟಗಾರರ ಪರೀಕ್ಷೆ

ಇಂದಿನಿಂದ ಮುಂಬೈ ಮತ್ತು ಇತರೆ ಭಾರತ ತಂಡಗಳ ನಡುವೆ ಇರಾನಿ ಕಪ್
Updated on: 

ಮುಂಬೈ: ರಾಷ್ಟ್ರೀಯ ಆಯ್ಕೆ ಸಮಿತಿ ಈಗ ಮುಂಬೈನ ವಾಂಖೆಡೆ ಸ್ಟೇಡಿಯಂನತ್ತ ತನ್ನ ಸಂಪೂರ್ಣ ಗಮನಹರಿಸಲಿದೆ. ಮುಂಬೈ ಮತ್ತು ಇತರೆ ಭಾರತ ತಂಡಗಳ ನಡುವೆ ನಡೆಯಲಿರುವ ಐದು ದಿನಗಳ ಇರಾನಿ ಕಪ್ ಪಂದ್ಯ ಬುಧವಾರದಿಂದ ಆರಂಭವಾಗಲಿದೆ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಮರಳಲು ಆಸಕ್ತಿ ಹೊಂದಿರುವ ಆಟಗಾರರು ಉತ್ತಮ ಪ್ರದರ್ಶನ ತೋರಲು ಮತ್ತೊಂದು ವೇದಿಕೆ ಸಿದ್ಧವಾಗಿದೆ.
ಏಕದಿನ ಕ್ರಿಕೆಟ್‌ನಿಂದ ಕೈಬಿಡಲಾಗಿರುವ ಭಾರತದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಇತರೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಭಾಗವಹಿಸಿರುವ ಹರ್ಭಜನ್ ಸಿಂಗ್ ಮತ್ತು ಎಸ್. ಶ್ರೀಶಾಂತ್ ಅವರು ಸಹ ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.
ಇತರೆ ಭಾರತ ತಂಡದಲ್ಲಿ ಸೆಹ್ವಾಗ್ ಸೇರಿದಂತೆ, ಇನ್ನಿಬ್ಬರು ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಸಹ ಇದ್ದಾರೆ. ಹೀಗಾಗಿ ಇವರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರಾಷ್ಟ್ರೀಯ ತಂಡದಲ್ಲಿ ಯಾರು ಸ್ಥಾನ ಗಿಟ್ಟಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇಂಗ್ಲೆಂಡ್ ವಿರುದ್ಧ ನಡೆದ ಕಳೆದ ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಅವರನ್ನು ಮೂರನೇ ಆರಂಭಿಕ ಆಟಗಾರರನ್ನಾಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದರೆ, ಆ ಸರಣಿಯಲ್ಲಿ ವಿಜಯ್ ಅವರಿಗೆ ಆಡಲು ಅವಕಾಶವೇ ಸಿಗಲಿಲ್ಲ. ಶಿಖರ್ ಧವನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾತರದಿಂದ ಎದುರು ನೋಡುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಿಂದ ಹೊರಗುಳಿದಿದ್ದ ವೀರೇಂದ್ರ ಸೆಹ್ವಾಗ್, ಇರಾನಿ ಕಪ್ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಬಲಿಷ್ಠ ಮುಂಬೈ ತಂಡದ ಧವಳ್ ಕುಲಕರ್ಣಿ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುವ ಮೂಲಕ, ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಫೆಬ್ರವರಿ 22ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಸ್ಥಾನ ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ ವೀರೂ.
ಅಜಿತ್ ಅಗರ್ಕರ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅಭಿಷೇಕ್ ನಾಯರ್ ಮುಂಬೈ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಕಳೆದ ಭಾನುವಾರ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅಭಿಷೇಕ್ ಅವರಿಗೆ ಉತ್ತಮ ಬೇಡಿಕೆ ಕಂಡುಬಂದಿತ್ತು. ಕೊನೆಗೆ ಪುಣೆ ವಾರಿಯರ್ಸ್ ತಂಡದ ಪಾಲಾಗಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ವಾಸೀಂ ಜಾಫರ್ ಸಹ ಮುಂಬೈ ತಂಡದಲ್ಲಿದ್ದಾರೆ. 34 ವರ್ಷದ ಆರಂಭಿಕ ಆಟಗಾರ ಐದು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಕಾನ್ಪುರದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಮುಂಬೈನ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಅವರೂ ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ರಹಾನೆ ಆಯ್ಕೆಯಾಗಿದ್ದರು.
ಮುಂಬೈ ತಂಡದ ರೋಹಿತ್ ಶರ್ಮಾ, ಇತರೆ ಭಾರತ ತಂಡದ ಸುರೇಶ್ ರೈನಾ ಹಾಗೂ ಮನೋಜ್ ತಿವಾರಿ ಅವರು ಸಹ ಆಯ್ಕೆ ಸಮಿತಿ ಗಮನ ಸೆಳೆಯುವ ಕಾತರದಲ್ಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಟೆಸ್ಟ್ ತಂಡಕ್ಕೆ ಮರಳಲು ತುದಿಗಾಲಲ್ಲಿ ನಿಂತಿರುವ ಹರ್ಭಜನ್ ಸಿಂಗ್ ಮತ್ತು ಎಸ್. ಶ್ರೀಶಾಂತ್ ಅವರನ್ನು ಆಯ್ಕೆ ಸಮಿತಿ ಸೂಕ್ಷ್ಮವಾಗಿ ಗಮನಿಸಲಿದೆ. ಹರ್ಭಜನ್ ಸಿಂಗ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಆಯ್ಕೆ ಸಮಿತಿ ಅವರಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ.
ಭಾರತ ತಂಡದ ಇನ್ನೊಬ್ಬ ಸ್ಪಿನ್ನರ್ ಆರ್. ಅಶ್ವಿನ್ ವೈಫಲ್ಯ ಕಾಣುತ್ತಿದ್ದಾರೆ. ಹೀಗಾಗಿ ಇರಾನಿ ಕಪ್‌ನಲ್ಲಿ ಹರ್ಭಜನ್ ಮೊನಚಾದ ಬೌಲಿಂಗ್ ಪ್ರದರ್ಶಿಸಿದಲ್ಲಿ, ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಅವಕಾಶವಂಚಿತರಾಗುವ ಸಾಧ್ಯತೆಗಳಿವೆ. ಇನ್ನು ಗಾಯದಿಂದ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದ ಶ್ರೀಶಾಂತ್, ಟೆಸ್ಟ್ ತಂಡಕ್ಕೆ ಮರಳಲು ದೊರಕಿರುವ ಅತ್ಯುತ್ತಮ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಲಿದ್ದಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಮುಂಬೈ ತಂಡ ಪ್ರತಿನಿಧಿಸಿರುವ ವೇಗಿ ಧವಳ್ ಕುಲಕರ್ಣಿ ಮತ್ತು ಇತರೆ ಭಾರತ ತಂಡದ ವೇಗಿಗಳಾದ ಶಮಿ ಅಹ್ಮದ್ ಹಾಗೂ ಈಶ್ವರ ಪಾಂಡೆ ಅವರು ಆಯ್ಕೆ ಸಮಿತಿಯ ಗಮನ ಸೆಳೆಯುವ ವಿಶ್ವಾಸ ಹೊಂದಿದ್ದಾರೆ.

ಮುಂಬೈ: ಅಭಿಷೇಕ್ ನಾಯರ್ (ನಾಯಕ), ಸಚಿನ್ ತೆಂಡೂಲ್ಕರ್, ವಾಸೀಂ ಜಾಫರ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಧವಳ್ ಕುಲಕರ್ಣಿ, ಕೌಸ್ತುಭ ಪವಾರ್, ಹಿಕೆನ್ ಶಾ, ಅದಿತ್ಯ ತಾರೆ, ಅಂಕಿತ್ ಚವಣ್, ಜಾವೇದ್ ಖಾನ್, ಶಾರ್ದೂಲ್ ಠಾಕೂರ್ ಹಾಗೂ ವಿಶಾಲ್ ದಾಭೋಲ್ಕರ್.

ಇತರೆ ಭಾರತ: ವೀರೇಂದ್ರ ಸೆಹ್ವಾಗ್ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಮನೋಜ್ ತಿವಾರಿ, ಸುರೇಶ್ ರೈನಾ, ವೃದ್ಧಿಮಾನ್ ಶಾ, ಹರ್ಭಜನ್ ಸಿಂಗ್, ಎಸ್, ಶ್ರೀಶಾಂತ್, ಪ್ರಗ್ಯಾನ್ ಓಜಾ, ಈಶ್ವರ ಪಾಂಡೆ, ಅಭಿಮನ್ಯು ಮಿಥುನ್, ಅಂಬಾಟಿ ರಾಯುಡು, ಮೊಹ್ಮದ್ ಶಮಿ ಹಾಗೂ ಜಲಜ ಸಕ್ಸೇನಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com